ಈಜಿಪ್ಟ್ ಗೆ ಪ್ರಧಾನಿ ಮೋದಿ ಭೇಟಿ ನಿರೀಕ್ಷೆ: ರಾಯಭಾರಿ

Update: 2018-08-28 15:36 GMT

ಹೊಸದಿಲ್ಲಿ,ಆ.28: ಪ್ರಧಾನಿ ನರೇಂದ್ರ ಮೋದಿಯವರು ಈಜಿಪ್ಟ್ಗೆ ಭೇಟಿ ನೀಡಿ,ಅಧ್ಯಕ್ಷ ಅಬ್ದುಲ್ ಫತ್ತಾಹ್ ಅಲ್ ಸಿಸಿ ಅವರೊಡನೆ ಮಾತುಕತೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ಮಂಗಳವಾರ ಇಲ್ಲಿ ತಿಳಿಸಿದ ಈಜಿಪ್ಟ್ ರಾಯಭಾರಿ ಹಾತಿಮ್ ತಗಲ್‌ದೀನ್ ಅವರು,ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಬಲಗೊಳಿಸಲು ಈ ನಾಯಕರು ಉದ್ದೇಶಿಸಿರುವುದರಿಂದ ದ್ವಿಪಕ್ಷೀಯ ಸಹಕಾರ ಇನ್ನಷ್ಟು ಗಟ್ಟಿಗೊಳ್ಳಲಿದೆ ಎಂದು ಒತ್ತಿ ಹೇಳಿದರು.

ಅಧ್ಯಕ್ಷ ಸಿಸಿಯವರ ಆಹ್ವಾನವನ್ನು ಮೋದಿಯವರು ತಾತ್ವಿಕವಾಗಿ ಒಪ್ಪಿಕೊಂಡಿದ್ದಾರೆ ಮತ್ತು ಈಜಿಪ್ಟ್ಗೆ ತನ್ನ ಭೇಟಿಯನ್ನು ದೃಢಪಡಿಸಿದ್ದಾರೆ. ಆದರೆ ಸಮಯದ ಲಭ್ಯತೆಯನ್ನು ತಿಳಿದುಕೊಳ್ಳಲು ರಾಜತಾಂತ್ರಿಕ ಮಾರ್ಗಗಳ ಮೂಲಕ ಕಾರ್ಯ ನಡೆಯಬೇಕಿದೆ ಎಂದು ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಿಳಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪರಿಸರ ಸಚಿವ ಹರ್ಷವರ್ಧನ್ ಅವರು ಈ ವರ್ಷ ತನ್ನ ರಾಷ್ಟ್ರಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದರು.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಚೀನಾದ ಝಿಯಾಮೆನ್‌ನಲ್ಲಿ ಸಿಸಿಯವರನ್ನು ಭೇಟಿಯಾಗಿದ್ದ ಮೋದಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ಬಗ್ಗೆ ಮಾತುಕತೆಗಳನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News