ಕೊಡಗು ಮಳೆಹಾನಿ: ರಾಜ್ಯ ಸರಕಾರದಿಂದ 85 ಕೋಟಿ ರೂ. ಬಿಡುಗಡೆ; ಸಚಿವ ದೇಶಪಾಂಡೆ

Update: 2018-08-28 16:03 GMT

ಮಡಿಕೇರಿ, ಆ.28 : ಮಹಾಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿ ಸಂಕಷ್ಟಕ್ಕೆ ಸಿಲುಕಿರುವ ಕೊಡಗು ಜಿಲ್ಲೆಗೆ ತುರ್ತು ಕಾಮಗಾರಿ ನಿರ್ವಹಣೆಗಾಗಿ ರಾಜ್ಯ ಸರಕಾರ 85 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಆ.30 ರಂದು ಪ್ರಧಾನ ಮಂತ್ರಿಗಳನ್ನು ಭೇಟಿಯಾಗಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿಗೆ ಪರಿಹಾರವಾಗಿ 2 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಿದ್ದಾರೆ .

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಮಲೆನಾಡು ಹಾಗೂ ಕರಾವಳಿ ಭಾಗಗಳ ಮಳೆಹಾನಿ ಪ್ರದೇಶಗಳಿಗೆ ಒಟ್ಟು 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದರು. 

ಕೊಡಗು ಜಿಲ್ಲೆಗೆ 85 ಕೋಟಿ ರೂ., ದಕ್ಷಿಣ ಕನ್ನಡ 20.88 ಕೋಟಿ ರೂ., ಉಡುಪಿ 14.54 ಕೋಟಿ ರೂ., ಚಿಕ್ಕಮಗಳೂರು 25.13 ಕೋಟಿ ರೂ., ಹಾಸನ 27.94 ಕೋಟಿ ರೂ., ಉತ್ತರ ಕನ್ನಡ 11.51 ಕೋಟಿ ರೂ., ಶಿವಮೊಗ್ಗ 15 ಕೋಟಿ ರೂ. ಹೀಗೆ ಒಟ್ಟು 200 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿದೆ ಎಂದು ದೇಶಪಾಂಡೆ ತಿಳಿಸಿದರು.

ಆ.30 ರಂದು ಪ್ರಧಾನಮಂತ್ರಿಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭೇಟಿ ಮಾಡಲಿದ್ದು, ಕೊಡಗು ಜಿಲ್ಲೆಗೆ 2 ಸಾವಿರ ಕೋಟಿ ರೂ. ಬೇಕೆಂದು ಮನವಿ ಸಲ್ಲಿಸಲಿದ್ದಾರೆ. ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

ಜಿಲ್ಲೆಯ ನಿರಾಶ್ರಿತರಿಂದ ಯಾವುದೇ ದಾಖಲೆಗಳನ್ನು ಬಯಸದೆ ಮನೆಗಳ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಅತಿವೃಷ್ಟಿಯಿಂದ 186 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದು, 924 ಮನೆಗಳು ಹಾನಿಗೀಡಾಗಿವೆ. 15 ಮೃತದೇಹಗಳು ಈಗಾಗಲೇ ಪತ್ತೆಯಾಗಿದ್ದು, 4 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಗಡಿ ರಸ್ತೆ ಪರಿಶೀಲನಾ ತಂಡದ ಮೂವರು ಪರಿಣಿತರು ಆಗಮಿಸಿದ್ದು, ಕೊಡಗಿನ ರಸ್ತೆಗಳ ಸ್ಥಿತಿಗತಿಗಳನ್ನು ಅವಲೋಕಿಸುತ್ತಿದ್ದಾರೆ. ಭೂಕುಸಿತಕ್ಕೆ ಕಾರಣಗಳನ್ನು ಹುಡುಕಲು ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದು ದೇಶಪಾಂಡೆ ಹೇಳಿದರು. 

ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ ರೆಡ್ಡಿ ಮಾತನಾಡಿ, ಸೋಮವಾರ ಮೊಣ್ಣಂಗೇರಿ ಹಾಗೂ ಗಾಳಿಬೀಡು ಭಾಗದಲ್ಲಿ ಅತ್ಯಂತ ಕಡಿಮೆ ತೀವ್ರತೆಯ ಲಘು ಭೂಕಂಪನವಾಗಿದ್ದು, ಇದರಿಂದ ಯಾವುದೇ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದರು. ಗಾಳಿಬೀಡಿನಲ್ಲಿ ಈಗಾಗಲೇ ರಿಕ್ಟರ್ ಮಾಪಕ ಅಳವಡಿಸಲಾಗಿದೆ ಎಂದು ತಿಳಿಸಿದರು. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News