ತುಮಕೂರು, ಶಿವಮೊಗ್ಗ, ಮೈಸೂರಿನಲ್ಲಿ ಅಧಿಕಾರ ಹಿಡಿಯುವುದು ನಮ್ಮ ಪ್ರತಿಷ್ಠೆ: ದಿನೇಶ್ ಗುಂಡೂರಾವ್

Update: 2018-08-28 16:50 GMT

ತುಮಕೂರು,ಆ.28: ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ತುಮಕೂರು ನಗರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ತುಮಕೂರು ಜಿಲ್ಲಾದ್ಯಕ್ಷ ಕೆಂಚಮಾರಯ್ಯ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹಮದ್, ಎಸ್.ಶಪಿ ಅಹಮದ್ ಸ್ವಾಗತಿಸಿದರು.

ಈ ವೇಳೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿಗಳಾದ ಪ್ರೋ.ರಾಧಾಕೃಷ್ಣ, ಸತೀಶ್ ಮಲ್ಲಣ್ಣ, ಪಕ್ಷದ ಮುಖಂಡರಾದ ಅಪ್ತಾಬ್ ಅಹಮದ್, ಅಟೋ ರಾಜು, ಟಿ.ಬಿ.ಮಲ್ಲೇಶ್, ಲಿಂಗರಾಜು, ಕೆಂಪರಾಜು, ತುರುಣೇಶ್, ಎಲ್ಲಾ ಮುಂಜೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ತುಮಕೂರು ಮಹಾನಗರ ಪಾಲಿಕೆಗೆ ಸ್ಪರ್ಧಿಸಿರುವ ಹುರಿಯಾಳುಗಳು ಉಪಸ್ಥಿತರಿದ್ದರು.

ಕೆಪಿಸಿಸಿ ಅಧ್ಯಕ್ಷರಾದ ನಂತರ ಇದೆ ಮೊದಲ ಬಾರಿಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದ ಅವರನ್ನು ಮುಖಂಡರು, ಕಾರ್ಯಕರ್ತರು ಅಭಿನಂದಿಸಿದರು. ಈ ವೇಳೆ ಮಾತನಾಡಿದ ದಿನೇಶ ಗುಂಡೂರಾವ್, ಇಂದಿಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಆದರೆ ಮುಂದಿನ ಎರಡು ದಿನಗಳು ಅತ್ಯಂತ ಮಹತ್ವದ್ದಾಗಿದೆ. ಪ್ರತಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಬಗ್ಗೆ ಪ್ರಚಾರ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುವುದರ ಜೊತೆಗೆ, ಹೆಚ್ಚು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲಿದೆ. ಪ್ರಮುಖವಾಗಿ ತುಮಕೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಅಧಿಕಾರ ಹಿಡಿಯುವುದು ನಮ್ಮ ಪ್ರತಿಷ್ಠೆಯಾಗಿದೆ. ಇದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಅದೇ ರೀತಿ ಉತ್ಸಾಹ ಕಾರ್ಯಕರ್ತರಲ್ಲಿ ಕಂಡು ಬರುತ್ತಿದೆ. ಇದು ಪಕ್ಷಕ್ಕೆ ವರವಾಗಲಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಎರಡು ವರ್ಷದ ನಂತರ ಸಚಿವರ ಬದಲಾವಣೆ ನಡೆಯಲಿದೆ. ಮುಂದಿನ ಮೂರು ವರ್ಷ ಬೇರೆಯವರಿಗೆ, ಆರ್ಹರಿಗೆ, ಹಿರಿಯರಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಬದಲಾವಣೆ ನಡೆಯಲಿದೆ. ಇದು ಕಾಂಗ್ರೆಸ್‍ಗೆ ಮಾತ್ರ ಸಂಬಂಧಿಸಿದ್ದು, ಜೆಡಿಎಸ್‍ಗೂ, ನಮ್ಮ ತೀರ್ಮಾನಕ್ಕೂ ಸಂಬಂಧವಿಲ್ಲವೆಂದರು.

ಪಕ್ಷದಲ್ಲಿ ಒಗ್ಗಟ್ಟು ಮುಖ್ಯ. ಸ್ವಲ್ಪ ಮೈ ಮರೆತರೂ ಈ ಹಿಂದಿನ ವಿಧಾನಸಭೆ ಚುನಾವಣೆ ಪಡೆದ ಫಲಿತಾಂಶ ಪುನರಾವರ್ತನೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಕಾರ್ಯಕರ್ತರು ಮುಂದಿನ ಎರಡು ದಿನಗಳ ಕಾಲ ಎಚ್ಚರಿಕೆಯಿಂದ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News