ಅತಿವೃಷ್ಟಿಯಿಂದ ಬೆಳೆಹಾನಿ: ತುರ್ತು ಪರಿಹಾರ ಧನ ಬಿಡುಗಡೆಗೆ ಸಚಿನ್ ಮೀಗಾ ಆಗ್ರಹ

Update: 2018-08-28 17:41 GMT

ಚಿಕ್ಕಮಗಳೂರು, ಆ.28: ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅತೀ ಹೆಚ್ಚು ಮಳೆಯಾಗಿದ್ದು, ಅತೀವೃಷ್ಟಿಗೆ ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ಕಾಫಿ, ಅಡಿಕೆ, ಕಾಳುಮೆಣಸು, ಏಲಕ್ಕಿ ಬೆಳೆಗಳು ಶೇ.60ರಷ್ಟು ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಂಕಷ್ಟದಲ್ಲಿರುವ ರೈತರಿಗೆ ನೆರವಿಗೆ ಧಾವಿಸಿ ತುರ್ತು ಪರಿಹಾರಧನವನ್ನು ಶೀಘ್ರ ಬಿಡುಗಡೆ ಮಾಡಿಬೇಕೆಂದು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್‍ನ ರಾಜ್ಯಾಧ್ಯಕ್ಷ ಸಚಿನ್‍ಮೀಗಾ ಆಗ್ರಹಿಸಿದ್ದಾರೆ.

ಮಂಗಳವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಾದ ಶೃಂಗೇರಿ, ಕೊಪ್ಪ, ಎನ್,ಆರ್.ಪುರ ಹಾಗೂ ಮೂಡಿಗೆರೆ ತಾಲೂಕುಗಳ ವ್ಯಾಪ್ತಿಯಲ್ಲಿ ಈ ಬಾರಿ ಕಂಡು ಕೇಳರಿಯದಂತಹ ಅತೀವೃಷ್ಟಿಯಾಗಿದೆ. ಪರಿಣಾಮ ವಾತಾವರಣದಲ್ಲಿ ತೇವಾಂಶದ ಹೆಚ್ಚಳದಿಂದಾಗಿ ಅತೀ ಹೆಚ್ಚು ಪ್ರಮಾಣದಲ್ಲಿ ಭತ್ತ, ಕಾಫಿ, ಅಡಿಕೆ ಫಸಲು ವಿವಿಧ ರೋಗಳಿಗೆ ತುತ್ತಾಗಿ ನಷ್ಟಕ್ಕೊಳಗಾಗಿವೆ. ಕೊಪ್ಪ, ಶೃಂಗೇರಿ ತಾಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚು ಬೆಳೆಯಲಾಗುವ ಅಡಿಕೆ, ಭತ್ತದ ಬೆಳೆಗಳು ಸಂಪೂರ್ಣವಾಗಿ ಕೊಳೆ ರೋಗಕ್ಕೆ ತುತ್ತಾಗಿವೆ. ಮೂಡಿಗೆರೆ, ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಭತ್ತ, ಕಾಫಿ, ಕಾಳು ಮೆಣಸು ಬೆಳೆಗಳು ನಾಶವಾಗಿವೆ ಎಂದರು.

ಬೆಳೆ ಹಾನಿಯಿಂದಾಗಿ ಈ ತಾಲೂಕುಗಳ ವ್ಯಾಪ್ತಿಯಲ್ಲಿನ ಬೆಳೆಗಾರರು, ರೈತರು ಸಂಕಷ್ಟಕ್ಕೆ ತುತ್ತಾಗಿದ್ದು, ಸರಕಾರ ಕೂಡಲೇ ಭತ್ತ ಬೆಳೆಗಾರರಿಗೆ ಎಕರೆಗೆ 7500 ರೂ. ಹಾಗೂ ಕಾಫಿ, ಅಡಿಕೆ ಬೆಳೆಗಾರರಿಗೆ ಎಕರೆಗೆ 20 ಸಾವಿರ ರೂ. ಪರಿಹಾರಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದ ಅವರು, ಅತೀವೃಷ್ಟಿಯಿಂದಾಗಿ ಮಲೆನಾಡು ಭಾಗದಲ್ಲಿ ಸಾಕಷ್ಟು ಮನೆಗಳು ಕುಸಿದುಬಿದ್ದಿದ್ದು, ಕೆಲ ರೈತರು ಹಾಗೂ ಕೃಷಿ ಕಾರ್ಮಿಕರ ಮನೆಗಳಿಗೆ ಧಾರಾಕಾರ ಮಳೆ ಹಾಗೂ ಭೂ ಕುಸಿತದಿಂದ ಭಾರೀ ಪ್ರಮಾಣದ ಹಾನಿಯಾಗಿದೆ. ಇಂತಹ ಸಂತ್ರಸ್ಥರಿಗೆ ಸರಕಾರ ಸೂಕ್ತ ಪರಿಹಾರದೊಂದಿಗೆ ಹೊಸ ಮನೆಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಸಚಿನ್ ಮೀಗಾ ಒತ್ತಾಯಿಸಿದರು.

ಅತೀವೃಷ್ಟಿಯಿಂದಾಗಿ ಜಿಲ್ಲೆಯಾದ್ಯಂತ ರಸ್ತೆ, ಸೇತುವೆಯಂತಹ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೂ ಹಾನಿಯಾಗಿದ್ದು, ಸರಕಾರ ಇವುಗಳ ಪುನರ್ ನಿರ್ಮಾಣಕ್ಕೂ ಅಗತ್ಯ ಕ್ರಮ ವಹಿಸಬೇಕೆಂದ ಅವರು, ಸಂಸದೆ ಶೋಭಾ ಕರಂದ್ಲಾಜೆ ಅವರು ಅತೀವೃಷ್ಟಿಯಿಂದ ಭಾರೀ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸದೇ ನಿರ್ಲಕ್ಷ್ಯ ವಹಿಸಿದ್ದು, ಅವರು ಜಿಲ್ಲೆಯಲ್ಲಾಗಿರುವ ಮಳೆ ಹಾನಿ ಸಂಬಂಧ ಕೇಂದ್ರದ ಗಮನ ಸೆಳೆದು ಅಧಿಕಾರಿಗಳ ತಂಡದೊಂದಿಗೆ ಸಮೀಕ್ಷೆ ನಡೆಸುವುದರೊಂದಿಗೆ ಸೂಕ್ತ ಪರಿಹಾರಧನ ಬಿಡುಗಡೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಇದೇ ವೇಳೆ ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಕಿಸಾನ್ ಮಜ್ದೂರ್ ಕಾಂಗ್ರೆಸ್‍ನ ಅಕ್ಮಲ್, ಈಶ್ವರ್, ಪೃಥ್ವಿರಾಜ್, ಬಲರಾಮ್, ಶಾಧಾಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News