ಮಸೀದಿ ಬಳಿಯೇ ಇಮಾಮ್‌ರನ್ನು ಜೀವಂತ ದಹಿಸಿದ ಮಹಿಳೆ

Update: 2018-08-29 03:59 GMT

ಚೆನ್ನೈ, ಆ.29: ಬುರ್ಖಾಧಾರಿ ಮಹಿಳೆಯೊಬ್ಬಳು ನಗರದ ಟ್ರಿಪ್ಲಿಕೇನ್ ಪ್ರದೇಶದ ದೊಡ್ಡ ಮಸೀದಿ ಎದುರಿನ ಕಚೇರಿಯಲ್ಲಿ ಕುಳಿತಿದ್ದ ಇಸ್ಲಾಂ ಧರ್ಮಗುರುವೊಬ್ಬರಿಗೆ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ ಪ್ರಕರಣ ಸೋಮವಾರ ರಾತ್ರಿ ನಡೆದಿದೆ. ಆರೋಪಿಗೆ ಪೊಲೀಸರು ಶೋಧ ನಡೆಸಿದ್ದಾರೆ.

ದೊಡ್ಡ ಮಸೀದಿಯ ಇಮಾಮ್ ಸೈಯದ್ ಫಝ್ರುದ್ದೀನ್ (60) ತಮ್ಮ ಕಚೇರಿಯಲ್ಲಿ ಐವರು ಮಹಿಳಾ ಭಕ್ತರ ಜತೆ ಕುಳಿತಿದ್ದಾಗ, ಹಠಾತ್ತನೇ ಒಳಗೆ ಪ್ರವೇಶಿಸಿದ ಮಹಿಳೆ, ಇಮಾಮ್‌ರತ್ತ ರಾಸಾಯನಿಕವನ್ನು ಚೆಲ್ಲಿ ಬೆಂಕಿ ಹಚ್ಚಿದ್ದಾಳೆ. ತಕ್ಷಣ ಅವರನ್ನು ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ತೀವ್ರ ಸುಟ್ಟಗಾಯಗಳಿಂದ ಅವರು ಮೃತಪಟ್ಟರು. ಟ್ರಿಪ್ಲಿಕೇನ್ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆರೋಪಿ ಪತ್ತೆಯಾಗಬೇಕಿದ್ದು, ದಾಳಿ ಹಿಂದಿನ ಉದ್ದೇಶವೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

"ಅದೇ ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಇಮಾಮ್ ಅವರ ಆತ್ಮೀಯ ಮಣಿ (61) ಎಂಬುವವರು ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ಆಕೆಯನ್ನು ಹಿಡಿದರೂ, ಅವರನ್ನು ಪಕ್ಕಕ್ಕೆ ತಳ್ಳಿ ಮಹಿಳೆ ಪರಾರಿಯಾದಳು" ಎಂದು ತನಿಖಾಧಿಕಾರಿ ವಿವರಿಸಿದ್ದಾರೆ. ತಕ್ಷಣ ಮಣಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಧಾವಿಸಿದಾಗ ಇಮಾಮ್ ಕಚೇರಿ ಭಾಗಶಃ ಸುಟ್ಟುಹೋಗಿತ್ತು. ಇದು ಪೂರ್ವಯೋಜಿತ ಕೃತ್ಯ ಎಂದು ಪೊಲೀಸರು ಅಂದಾಜಿಸಿದ್ದಾರೆ.

ಪೆಟ್ರೋಲ್ ಅಥವಾ ಸೀಮೆಎಣ್ಣೆ ಸುರಿದ ಸುಳಿವು ಇಲ್ಲ. ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಇಮಾಮ್ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News