ಮರಾಠಿ ಭಾಷೆಯಲ್ಲಿದ್ದ ಪಂಚನಾಮೆಗೆ ವರವರ ರಾವ್ ದಂಪತಿಯಿಂದ ಬಲವಂತದಿಂದ ಸಹಿ ಮಾಡಿಸಿದರು: ಆರೋಪ

Update: 2018-08-29 08:03 GMT

ಹೊಸದಿಲ್ಲಿ, ಆ.29: ಪುಣೆ ಪೊಲೀಸರು ಬಂಧಿತ ಕವಿ ವರವರ ರಾವ್ ಮತ್ತವರ ಪತ್ನಿ ಹೇಮಲತಾರಿಂದ ಮರಾಠಿ ಭಾಷೆಯಲ್ಲಿ ಬರೆಯಲಾಗಿರುವ 'ಪಂಚನಾಮೆ'ಯೊಂದಕ್ಕೆ ಬಲವಂತವಾಗಿ ಸಹಿ ಹಾಕಿಸಿದ್ದಾರೆಂದು ವರವರ ಅವರ ಅಳಿಯ ಆರೋಪಿಸಿದ್ದಾರೆ.

ಮಂಗಳವಾರ ರಾವ್ ಅವರನ್ನು ಅವರ ಹೈದರಾಬಾದ್ ನಿವಾಸದಿಂದ ಬಂಧಿಸಿದ ನಂತರ ಪೊಲೀಸರು ನಂಪಳ್ಳಿ ಕ್ರಿಮಿನಲ್ ನ್ಯಾಯಾಲಯದಲ್ಲಿ ಹಾಜರುಪಡಿಸಿದರು.

‘‘ರಾವ್ ಮತ್ತವರ ಪತ್ನಿಗೆ ಮರಾಠಿ ಭಾಷೆ ತಿಳಿದಿಲ್ಲ, ಆದರೂ ಬಲವಂತದಿಂದ ಮರಾಠಿ ಭಾಷೆಯಲ್ಲಿ ಬರೆಯಲಾಗಿರುವ ಪಂಚನಾಮೆಗೆ ಸಹಿ ಹಾಕುವಂತೆ ಮಾಡಲಾಯಿತು’’ ಎಂದು ವರವರ ರಾವ್ ಅವರ ಅಳಿಯ, ಪತ್ರಕರ್ತ ಎನ್ ವೇಣುಗೋಪಾಲ್ ಹೇಳಿದ್ದಾರೆ.

ನಿಯಮಗಳ ಪ್ರಕಾರ ಪಂಚನಾಮೆಯು ಆರೋಪಿಗಳಿಗೆ ತಿಳಿದಿರುವ ಭಾಷೆಯಲ್ಲಿ ಬರೆಯಬೇಕಿದೆ ಹಾಗೂ ಗೌರವಾನ್ವಿತ ಸಾಕ್ಷಿಯೊಬ್ಬರು ಅದಕ್ಕೆ ಸಹಿ ಹಾಕಬೇಕಾಗಿದೆ ಎಂದು ವೇಣುಗೋಪಾಲ್ ಹೇಳುತ್ತಾರೆ.

‘‘ಯಾವುದೇ ಸರ್ಚ್ ವಾರಂಟ್ ಇಲ್ಲದೆ ಅವರ ಮನೆಗೆ ಪ್ರವೇಶಿಸಿದ ಪೊಲೀಸರು ಎಲ್ಲಾ ಮೊಬೈಲ್ ಫೋನುಗಳನ್ನು ಸೆಳೆದರು. ಸ್ಥಿರ ದೂರವಾಣಿ ಹಾಗೂ ಇಂಟರ್ ಕಾಮ್ ಸಂಪರ್ಕವನ್ನೂ ಕಡಿತಗೊಳಿಸಿ ಎಂಟು ಗಂಟೆಗಳ ಕಾಲ ಅವರು ಯಾರನ್ನೂ ಸಂಪರ್ಕಿಸದಂತೆ ಮಾಡಿದರು’’ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.

ವರವರ ರಾವ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿದ ವೇಣುಗೋಪಾಲ್, ‘‘ಅವರಿಗೆ 78 ವರ್ಷ ವಯಸ್ಸು, ಹಲವಾರು ಆರೋಗ್ಯ ಸಮಸ್ಯೆಗಳಿದ್ದು, ನಿಯಮಿತವಾಗಿ ಔಷಧಿ ನೀಡಬೇಕಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News