ಪ್ರಕೃತಿ ವಿಕೋಪದಿಂದ ಎಚ್ಚೆತ್ತ ಕೊಡಗು ಜಿಲ್ಲಾಡಳಿತ: ಭೂಕಂಪನ ದಾಖಲಿಸುವ 'ಸಿಸ್ಮೋಮೀಟರ್' ಮಾಪಕ ಅಳವಡಿಕೆ

Update: 2018-08-29 11:10 GMT

ಮಡಿಕೇರಿ, ಆ.28 : ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಅಧ್ಯಯನ ನಡೆಸಲು ಮಡಿಕೇರಿಗೆ ಆಗಮಿಸಿರುವ ಹಿರಿಯ ಭೂ ವಿಜ್ಞಾನಿಗಳ ತಂಡ ಗಾಳಿಬೀಡು ನವೋದಯ ಕೇಂದ್ರೀಯ ವಿದ್ಯಾಲಯದಲ್ಲಿ ಭೂಕಂಪನವನ್ನು ದಾಖಲಿಸುವ 'ಸಿಸ್ಮೋಮೀಟರ್' ಮಾಪಕವನ್ನು ಅಳವಡಿಸಿದೆ. 

ಹೈದರಾಬಾದ್‍ನಲ್ಲಿರುವ ರಾಷ್ಟ್ರೀಯ ಭೂಗರ್ಭ ಶಾಸ್ತ್ರ ಅಧ್ಯಯನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ.ರಾಘವನ್ ಹಾಗೂ ಅಧಿಕಾರಿಗಳು ಭೂಕುಸಿತಗೊಂಡ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದು, ಕೆಲವು ಭಾಗದಲ್ಲಿ ಬೆಟ್ಟ ಕುಸಿದಿರುವ ಮಣ್ಣನ್ನು ಕೂಡ ಪರೀಕ್ಷೆಗೆ ಒಳಪಡಿಸಲು ಹೈದರಾಬಾದ್‍ಗೆ ಕೊಂಡೊಯ್ದಿದ್ದಾರೆ.

ನವೋದಯ ವಿದ್ಯಾಲಯದ ಕೊಠಡಿಯೊಂದರಲ್ಲಿ ಭೂಕಂಪನ ಮಾಪಕವನ್ನು ಅಳವಡಿಸಲಾಗಿದೆ. ಕೊಠಡಿಯ ನೆಲದ 3 ಅಡಿ ಆಳದಲ್ಲಿ ಗುಂಡಿ ತೋಡಿ,  ಸಿಸ್ಮೋಮೀಟರ್ ಮಾಪಕ ಅಳವಡಿಸಲಾಗಿದೆ. ಈ ಮಾಪಕ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲು ಅಗತ್ಯವಿರುವಂತೆ ಸೋಲಾರ್, ಬ್ಯಾಟರಿ ಮತ್ತು ವಿದ್ಯುತ್ ಪೂರೈಕೆಯನ್ನು ಕೂಡ ಮಾಡಲಾಗಿದೆ. ಈ ಮಾಪಕ ದಾಖಲಿಸುವ ಕಂಪನಗಳನ್ನು ಹೈದರಾಬಾದ್‍ನಲ್ಲಿರುವ ಭೂಗರ್ಭ ಶಾಸ್ತ್ರ ಅಧ್ಯಾಯನ ಸಂಸ್ಥೆಗೆ ಸಂಪರ್ಕಿಸಲು ವಿಶೇಷವಾದ ಅಂತರ್ಜಾಲ ವ್ಯವಸ್ಥೆಯನ್ನು ಕೂಡ ಮಾಡಲಾಗಿದ್ದು, ಪ್ರತಿ ಕ್ಷಣದ ನಿಖರ ಮಾಹಿತಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಗಾಳಿಬೀಡುವಿನ ನವೋದಯ ಶಾಲೆಯಲ್ಲಿ ಅಳವಡಿಸಲಾದ ಭೂಕಂಪ ಮಾಪಕ ಯಂತ್ರವನ್ನು ಅಮೆರಿಕಾದಿಂದ ಖರೀದಿಸಿ ತರಲಾಗಿದೆ. ಮೊದಲ ಮಾಪಕ ಧಾರವಾಡದಲ್ಲಿದ್ದು, ಇದೀಗ 2ನೇ ಮಾಪಕವನ್ನು ನವೋದಯ ಶಾಲೆಯಲ್ಲಿ ಅಳವಡಿಸಲಾಗಿದೆ. ಈ ಮಾಪಕ ಭೂ ಪದರದ ಕಂಪನವನ್ನು ದಾಖಲಿಸಿ ಹೈದರಾಬಾದ್‍ನ ರಿಸೀವ್ ಸೆಂಟರ್‍ಗೆ ದತ್ತಾಂಶ ಸಹಿತ ವರದಿ ಮಾಡುತ್ತದೆ.

ಈ ಭೂಕಂಪನ ಅಳೆಯುವ ಅತ್ಯಾಧುನಿಕ ಮಾಪಕದ ಬೆಲೆ 6 ಲಕ್ಷ ರೂ.ಗಳಾಗಿದ್ದು, ಇದರ ಉತ್ಪಾದನೆ ಕೂಡ ವಿರಳ ಎನ್ನಲಾಗುತ್ತಿದೆ. ಜಗತ್ತಿನ ಯಾವುದೇ ಭಾಗದಲ್ಲಿ 5 ಮತ್ತು ಅದರ ಮೇಲ್ಪಟ್ಟು ಪ್ರಮಾಣದಲ್ಲಿ ಭೂಮಿ ಕಂಪಿಸಿದರೆ ನವೋದಯ ಶಾಲೆಯಲ್ಲಿರಿಸಿರುವ ಭೂಕಂಪನ ಮಾಪಕದಲ್ಲಿ ಅದರ ವಿವರ ದಾಖಲಾಗುತ್ತದೆ. 3 ರಿಂದ 5ರಷ್ಟು ಪ್ರಮಾಣದ ಕಂಪನ ಭಾರತದ ಯಾವುದೇ ಭಾಗದಲ್ಲಿ ಸಂಭವಿಸಿದರೂ ಈ ಮಾಪನ ಅದನ್ನು ದಾಖಲಿಸಿ ಹೈದರಾಬಾದ್‍ನಲ್ಲಿರುವ ತರಂಗಾಂತರ ಸ್ವೀಕೃತಿ ಕೇಂದ್ರಕ್ಕೆ ರವಾನಿಸುತ್ತದೆ. ಈ ಹಿನ್ನೆಲೆಯಲ್ಲಿ ಕಂಪನ ಮಾಪಕವನ್ನು ವಿಶೇಷ ಭದ್ರತೆಯ ಕೊಠಡಿಯಲ್ಲಿ ಇರಿಸಲಾಗಿದೆ.

ಹೈದರಾಬಾದ್‍ನ ಹಿರಿಯ ಭೂ ವಿಜ್ಞಾನಿಗಳು 3 ದಿನಗಳ ಕಾಲ ಭೂಕುಸಿದ ಸ್ಥಳಗಳಲ್ಲಿ ಅಧ್ಯಯನ ನಡೆಸಿ ನಂತರ ಶಾಲೆಯ ವಿಶೇಷ ಕೊಠಡಿಯಲ್ಲಿ ಭೂ ಕಂಪನ ಅಳೆಯುವ ಮಾಪಕವನ್ನು ಅಳವಡಿಸಿದ್ದಾರೆ. ಕೊಡಗಿನ ಭೂ ಗರ್ಭದಲ್ಲಿ ನಡೆಯುವ ಪತ್ರಿಯೊಂದು ಘಟನಾವಳಿಗಳನ್ನು ಈ ಯಂತ್ರ ದಾಖಲಿಸಿ ಹೈದರಾಬಾದ್‍ಗೆ ರವಾನಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕೋರಿಕೆ ಮೇರೆಗೆ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಆದೇಶದಂತೆ ಈ ಯಂತ್ರವನ್ನು ಅಳವಡಿಸಲಾಗಿದ್ದು, ಯುಎನ್‍ಎನಿಂದ ಆಮದು ಮಾಡಿಕೊಳ್ಳಲಾಗಿದೆ. ಈ ಯಂತ್ರವನ್ನು ಸುರಕ್ಷಿತ ಸ್ಥಳದಲ್ಲಿರಿಸಬೇಕಾಗಿರುವುದರಿಂದ ನವೋದಯ ವಿದ್ಯಾಲಯದ ಬಯಾಲಜಿ ಲ್ಯಾಬ್‍ನಲ್ಲಿರಿಸಲಾಗಿದೆ.

ಎನ್‍ಜಿಆರ್‍ಐನ ಹಿರಿಯ ವಿಜ್ಞಾನಿ ರಾಘವನ್ ಅವರ ಪ್ರಕಾರ ಎರಡು ದಿನಗಳಿಂದ ಕಾಲೂರು, ಗಾಳಿಬೀಡು, ಮೊಣ್ಣಂಗೇರಿ ಹಾಗೂ ಸಂಪಾಜೆ ಭೂ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಕಂಪನವಾಗಿರುವುದು ಕಂಡು ಬಂದಿದೆ. ಆದರೆ ಯಾವುದೇ ಅಪಾಯವಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News