ಆಡಳಿತ ಪಕ್ಷದ ಪಾಲಾದ ಶಿವಮೊಗ್ಗ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳು

Update: 2018-08-29 12:20 GMT

ಶಿವಮೊಗ್ಗ, ಆ. 29: ಸ್ಥಳೀಯ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಜಿಲ್ಲಾ ಪಂಚಾಯತ್ ನ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳು, ಆಡಳಿತ ಪಕ್ಷ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಪಾಲಾಗಿವೆ. ಬಹುಮತದ ಆಧಾರದ ಮೇಲೆ ಅಧ್ಯಕ್ಷ ಸ್ಥಾನ ತನ್ನದಾಗಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದ ಪ್ರತಿಪಕ್ಷ ಬಿಜೆಪಿಗೆ, ತೀವ್ರ ಹಿನ್ನಡೆಯಾಗಿದೆ. 

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‍ನ ಜೆ.ಪಿ.ಯೋಗೀಶ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ ಕಾಂಗ್ರೆಸ್‍ನ ಭಾರತಿ ಪ್ರಭಾಕರ್ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ನರಸಿಂಗನಾಯ್ಕ್ ರನ್ನು ಆಯ್ಕೆ ಮಾಡಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಆದೇಶಿಸಿದ್ದಾರೆ. 

ಬಹುಮತದ ಆಧಾರದ ಮೇಲೆ ನಿರಾಯಾಸವಾಗಿ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ತನ್ನದಾಗಿಸಿಕೊಳ್ಳಲು ಭಾರೀ ಕಸರತ್ತು ನಡೆಸಿದ್ದ ಬಿಜೆಪಿಗೆ, ಈ ದಿಢೀರ್ ಬೆಳವಣಿಗೆಯು ಅಕ್ಷರಶಃ ಶಾಕ್‍ನ ಅನುಭವ ಉಂಟು ಮಾಡಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ಪೂರ್ಣಗೊಂಡ ನಂತರ, ಹೋರಾಟದ ರೂಪುರೇಷೆ ಸಿದ್ದಪಡಿಸಲು ಆ ಪಕ್ಷ ಮುಂದಾಗಿದೆ. 

ಹಿನ್ನೆಲೆ: 31 ಸದಸ್ಯ ಬಲದ ಜಿ.ಪಂ.ನಲ್ಲಿ ಬಿಜೆಪಿಯ 15, ಕಾಂಗ್ರೆಸ್ 9 ಹಾಗೂ ಜೆಡಿಎಸ್‍ನ 7 ಸದಸ್ಯರಿದ್ದಾರೆ. ಸರಳ ಬಹುಮತಕ್ಕೆ 16 ಸದಸ್ಯರ ಅಗತ್ಯವಿತ್ತು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿವೆ. ಕಳೆದ ಸುಮಾರು ಎರಡೂವರೆ ವರ್ಷಗಳಿಂದ, ಅಧ್ಯಕ್ಷರಾಗಿ ಜೆಡಿಎಸ್‍ನ ಜ್ಯೋತಿ ಎಸ್. ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‍ನ ವೇದಾ ವಿಜಯಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. 
ಉಳಿದಂತೆ ಬಹುಮತದ ಆಧಾರದ ಮೇಲೆ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನವು ಮೈತ್ರಿಕೂಟದ ಸದಸ್ಯರ ಪಾಲಾಗಿದ್ದವು. ನಿಯಮಾನುಸಾರ ಸಾಮಾನ್ಯ ಸ್ಥಾಯಿ ಹಾಗೂ ಹಣಕಾಸು ಸ್ಥಾಯಿ ಸಮಿತಿಗೆ ಕ್ರಮವಾಗಿ ಅಧ್ಯಕ್ಷ - ಉಪಾಧ್ಯಕ್ಷರೇ ಅಧ್ಯಕ್ಷರಾಗಿದ್ದರು. ಕಳೆದ ಮಾರ್ಚ್‍ನಲ್ಲಿ ಮೂರು ಸ್ಥಾಯಿ ಸಮಿತಿಗಳ ಅಧ್ಯಕ್ಷರ 20 ತಿಂಗಳ ಅಧಿಕಾರಾವಧಿ ಅಂತ್ಯವಾಗಿತ್ತು. ವಿಧಾನಸಭೆ-ವಿಧಾನಪರಿಷತ್ ಚುನಾವಣೆ ನೀತಿ-ಸಂಹಿತೆಗಳ ಕಾರಣದಿಂದ ನೂತನ ಅಧ್ಯಕ್ಷರ ಆಯ್ಕೆ ಸಾಧ್ಯವಾಗಿರಲಿಲ್ಲ. 

ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಎಂಎಲ್‍ಎ ಹಾಗೂ ಎಂಎಲ್‍ಸಿಗಳಿಗೂ ಮತದಾನದ ಹಕ್ಕಿದೆ. ಬದಲಾದ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿತ್ತು. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು. ಬಹುಮತ ಆಧಾರದ ಮೇಲೆ ಮೂರು ಅಧ್ಯಕ್ಷ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲು ಬಿಜೆಪಿ ಗೇಮ್‍ಪ್ಲ್ಯಾನ್ ರೂಪಿಸಿತ್ತು. ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಪಕ್ಷವು, ತಲಾ ಒಂದೊಂದು ಅಧ್ಯಕ್ಷ ಸ್ಥಾನ ಹಂಚಿಕೊಳ್ಳುವ ರಾಜೀಸೂತ್ರವನ್ನು ಬಿಜೆಪಿ ಮುಂದಿಟ್ಟಿತ್ತು.

ಆದರೆ ಬಿಜೆಪಿ ಇದಕ್ಕೆ ಒಪ್ಪಿರಲಿಲ್ಲ. ಬಹುಮತದ ಆಧಾರದ ಮೇಲೆ ಮೂರು ಅಧ್ಯಕ್ಷ ಸ್ಥಾನಗಳನ್ನು ತನಗೆ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿತ್ತು. ಚುನಾವಣೆ ನಡೆಸುವಂತೆ ಆಗ್ರಹಿಸಿತ್ತು. ಮತ್ತೊಂದೆಡೆ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಗೆ ಯಾವ ರೀತಿ ಚುನಾವಣೆ ನಡೆಸಬೇಕು ಎಂಬ ಸ್ಪಷ್ಟ ನಿಯಾಮವಾಳಿಯೇ ಪಂಚಾಯತ್ ರಾಜ್ ಕಾಯ್ದೆಯಲ್ಲಿಲ್ಲ. ಈ ಮಾಹಿತಿ ಅರಿತ ಮೈತ್ರಿಕೂಟವು, ಚುನಾವಣೆಯೇ ನಡೆಸೋಣ ಎಂದಿತ್ತು. 

ಹೈಡ್ರಾಮಾ: ಜುಲೈ 17 ರಂದು ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರೀಕ್ಷಿಸಿದಂತೆ ಬಿಜೆಪಿಯು ಸ್ಥಾಯಿ ಸಮಿತಿ ಚುನಾವಣೆಗೆ ಪಟ್ಟು ಹಿಡಿದಿತ್ತು. ಗದ್ದಲ ಏರ್ಪಟ್ಟ ಕಾರಣ ಸಭೆ ಮುಂದೂಡಲಾಗಿತ್ತು. ಜು. 24 ರಂದು ಮುಂದುವರಿದ ಸಾಮಾನ್ಯ ಸಭೆ ನಡೆದಿತ್ತು. ಈ ಸಭೆಗೆ ಬಿಜೆಪಿಯಿಂದ ಶಾಸಕ ಕೆ.ಬಿ.ಅಶೋಕ್‍ನಾಯ್ಕ್ ಹಾಗೂ ಸದಸ್ಯ ವೀರಭದ್ರಪ್ಪ ಪೂಜಾರ್ ಮಾತ್ರ ಆಗಮಿಸಿದ್ದರು. ಉಳಿದ ಸದಸ್ಯರು ಆಗಮಿಸಿರಲಿಲ್ಲ. 

ಕೋರಂ ಇಲ್ಲದ ಕಾರಣದಿಂದ ಸಭೆ ಮುಂದೂಡುವಂತೆ ಬಿಜೆಪಿ ಸದಸ್ಯ ವೀರಭದ್ರಪ್ಪ ಪೂಜಾರ್ ಆಗ್ರಹಿಸಿದ್ದರು. ಆದರೆ ಪಂಚಾಯತ್ ರಾಜ್ ನಿಯಮಾನುಸಾರ, ಮುಂದುವರಿದ ಸಭೆಗೆ ಕೋರಂ ಅಗತ್ಯವಿಲ್ಲ ಎಂದು ಜೆಡಿಎಸ್-ಕಾಂಗ್ರೆಸ್ ಸದಸ್ಯರು ಹೇಳಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ನಿರ್ಣಯ ಅಂಗೀಕರಿಸಿದ್ದರು. ಕೋರಂ ಇಲ್ಲದ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ಊರ್ಜಿತವೇ ಎಂಬುವುದರ ಬಗ್ಗೆ ಸ್ಪಷ್ಟೀಕರಣ ಕೋರಿ ಸಿಇಓ ಸರ್ಕಾರಕ್ಕೆ ಪತ್ರ ಬರೆದಿದ್ದರು. 

ವರವಾದ ನಿಯಮ: ಜಿ.ಪಂ. ಕೈಗೊಂಡ ತೀರ್ಮಾನಗಳ ಕುರಿತಂತೆ ಸ್ಪಷ್ಟನೆ ಕೋರಿ ಸರ್ಕಾರಕ್ಕೆ ಪತ್ರ ಬರೆದ ವೇಳೆ, ಪಂಚಾಯತ್ ರಾಜ್ ನಿಯಮಾನುಸಾರ 15 ದಿವಸಗಳೊಳಗೆ ಸರ್ಕಾರದಿಂದ ಉತ್ತರ ಬರಬೇಕು. ಒಂದು ವೇಳೆ ಉತ್ತರ ಬರದಿದ್ದರೆ ಜಿ.ಪಂ. ಕೈಗೊಂಡ ನಿರ್ಣಯವೇ ಊರ್ಜಿತವಾಗಲಿದೆ. ಸಿಇಓರವರು ಸ್ಪಷ್ಟನೆ ಕೋರಿ ಬರೆದಿದ್ದ ಪತ್ರಕ್ಕೆ 24 ದಿನಗಳಾದರೂ ಸರ್ಕಾರದ ಕಡೆಯಿಂದ ಉತ್ತರ ಬಂದಿರಲಿಲ್ಲ. 

ಕಾಯ್ದೆಯನುಸಾರ ಮುಂದುವರಿದ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಮೂರು ಸ್ಥಾಯಿ ಸಮಿತಿಗಳಿಗೆ ಮೈತ್ರಿಕೂಟದ ಸದಸ್ಯರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಿ ಅಧ್ಯಕ್ಷ ಜ್ಯೋತಿ ಎಸ್.ಕುಮಾರ್ ಆದೇಶಿಸಿದ್ದಾರೆ. ಇದು ಬಿಜೆಪಿ ಪಾಲಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News