ಶಿವಮೊಗ್ಗ: ಮುಂಗಾರು ಮಳೆ ಚುರುಕು; ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ

Update: 2018-08-29 12:22 GMT

ಶಿವಮೊಗ್ಗ, ಆ. 29: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮದಿಂದ ಮಲೆನಾಡಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಪಶ್ಚಿಮಘಟ್ಟ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ವರ್ಷಧಾರೆಯಾಗುತ್ತಿದೆ. ಪ್ರಮುಖ ಜಲಾಶಯಗಳ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. 

ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಏಳು ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಬಿದ್ದ ಒಟ್ಟಾರೆ ಮಳೆಯ ಸರಾಸರಿ ಪ್ರಮಾಣ 15.03 ಮಿಲಿ ಮೀಟರ್ (ಮಿ.ಮೀ.) ಆಗಿದೆ. ಶಿವಮೊಗ್ಗದಲ್ಲಿ 3.40 ಮಿ.ಮೀ., ಭದ್ರಾವತಿ 8 ಮಿ.ಮೀ., ತೀರ್ಥಹಳ್ಳಿ 31.80 ಮಿ.ಮೀ., 
ಸಾಗರದಲ್ಲಿ 16.60 ಮಿ.ಮೀ., ಶಿಕಾರಿಪುರ 11.80 ಮಿ.ಮೀ., ಸೊರಬ 4.20 ಮಿ.ಮೀ., ಹೊಸನಗರದಲ್ಲಿ 29.40 ಮಿ.ಮೀ. ಮಳೆಯಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಾದ ಮಾಣಿಯಲ್ಲಿ 55 ಮಿ.ಮೀ., ಯಡೂರಿನಲ್ಲಿ 69 ಮಿ.ಮೀ., ಹುಲಿಕಲ್‍ನಲ್ಲಿ 53 ಮಿ.ಮೀ., ಮಾಸ್ತಿಕಟ್ಟೆಯಲ್ಲಿ 52 ಮಿ.ಮೀ. ವರ್ಷಧಾರೆಯಾಗಿದೆ. 

ಹೆಚ್ಚಳ: ತುಂಗಾ, ಭದ್ರಾ, ಶರಾವತಿ, ದಂಡವಾತಿ, ಕುಮದ್ವತಿ ಸೇರಿದಂತೆ ಜಿಲ್ಲೆಯ ನದಿಗಳ ನೀರಿನ ಹರಿವಿನಲ್ಲಿ ಏರಿಕೆ ಕಂಡುಬಂದಿದೆ. ಜಲಾನಯನ ವ್ಯಾಪ್ತಿಯ ಪ್ರದೇಶದಲ್ಲಿ ಮಳೆ ಚುರುಕುಗೊಂಡಿರುವುದರಿಂದ ಜಲಾಶಯಗಳ ಒಳಹರಿವಿನಲ್ಲಿ ಏರಿಕೆಯಾಗಿದೆ. ಲಿಂಗನಮಕ್ಕಿ ಡ್ಯಾಂನ ಒಳಹರಿವು 18,944 ಕ್ಯೂಸೆಕ್ ಇದ್ದು, 18,838 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂನ ನೀರಿನ ಮಟ್ಟ 1818.30 (ಗರಿಷ್ಠ ಮಟ್ಟ : 1819) ಅಡಿಯಿದೆ. 
ಭದ್ರಾ ಡ್ಯಾಂನ ಒಳಹರಿವು 11,235 ಕ್ಯೂಸೆಕ್ ಇದ್ದು, ಅಷ್ಟೆ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ತುಂಗಾ ಡ್ಯಾಂನ ಒಳಹರಿವು 17,893 ಕ್ಯೂಸೆಕ್ ಇದ್ದು, 16,054 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಮಾಣಿ ಡ್ಯಾಂ ಈಗಾಗಲೇ ಗರಿಷ್ಠ ಮಟ್ಟ ತಲುಪಿದ್ದು, ನೀರನ್ನು ಹೊರಬಿಡಲಾಗುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News