ಚಿಕ್ಕಮಗಳೂರು: ಹೆದ್ದಾರಿಯಲ್ಲಿ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್

Update: 2018-08-29 13:16 GMT

ಚಿಕ್ಕಮಗಳೂರು, ಆ.29: ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯ ಕುದುರೆಮುಖ ಸಮೀಪದ ಎಸ್.ಕೆ.ಬಾರ್ಡರ್ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ಗ್ಯಾಸ್ ಟ್ಯಾಂಕರ್ ಒಂದು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದ ಪರಿಣಾಮ ರಾ.ಹೆದ್ದಾರಿ 169ರಲ್ಲಿ ರಾತ್ರಿಯಿಂದ ಮದ್ಯಾಹ್ನ 12 ರ ವರೆಗೆ ವಾಹನ ಸಂಚಾರ ಬಂದ್ ಆಗಿದ್ದ ಘಟನೆ ವರದಿಯಾಗಿದೆ.

ಕಳಸ ಹೋಬಳಿ ವ್ಯಾಪ್ತಿಯ ಕುದುರೆಮುಖದ ಎಸ್.ಕೆ.ಬಾರ್ಡರ್ ನಲ್ಲಿನ ರಾ.ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆಗೆ ಅಡ್ಡಲಾಗಿ ಉರುಳಿಬಿತ್ತೆಂದು ತಿಳಿದು ಬಂದಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಬಂದ್ ಆಗಿ ಚಿಕ್ಕಮಗಳೂರು ಹಾಗೂ ಶೃಂಗೇರಿಯಿಂದ ಮಂಗಳೂರು, ಧರ್ಮಸ್ಥಳಕ್ಕೆ ತೆರಳುತ್ತಿದ್ದ ವಾಹನಗಳು ಮುಂದೆ ಹೋಗಲಾರದೇ ಸ್ಥಳದಲ್ಲೇ ಬಾಕಿಯಾಗುವಂತಾಯಿತೆಂದು ತಿಳಿದು ಬಂದಿದೆ. 

ಹೆದ್ದಾರಿ ಬಂದ್ ಆಗಿದ್ದ ಪರಿಣಾಮ ಕಳಸ, ಚಿಕ್ಕಮಗಳೂರು, ಕೊಟ್ಟಿಗೆಹಾರದಿಂದ ಮಂಗಳೂರಿಗೆ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ಸಾಗುತ್ತಿದ್ದ ನೂರಾರು ವಾಹನಗಳು ಕುದುರೆಮುಖದಲ್ಲಿ ನಿಲ್ಲುವಂತಾಗಿತ್ತು. ಚಾರ್ಮಾಡಿ ಘಾಟ್ ಮೂಲಕ ಭಾರೀ ವಾಹನಗಳ ಸಂಚಾರವನ್ನು ಇತ್ತೀಚೆಗೆ ಜಿಲ್ಲಾಧಿಕಾರಿ ನಿಷೇಧಿಸಿರುವ ಹಿನ್ನೆಲೆಯಲ್ಲಿ ಹಾಸನ, ಶಿವಮೊಗ್ಗ, ದಾವಣಗೆರೆ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ಸರಕು ಲಾರಿಗಳು ಹಾಗೂ ಪ್ರವಾಸಿಗರ ಖಾಸಗಿ ಬಸ್‍ಗಳು ಅವಘಡದಿಂದಾಗಿ ಹೆದ್ದಾರಿಯಲ್ಲೇ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ನಿಮಾಣವಾಗಿತ್ತು. ಕುದುರೆಮುಖ ಪೊಲೀಸರು ರಾತ್ರಿ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದು, ಟ್ಯಾಂಕರ್ ತೆರವು ಸಾಧ್ಯವಾಗಿರಲಿಲ್ಲ. ಬುಧವಾರ ಬೆಳಗ್ಗೆ ಹೆದ್ದಾರಿಯಲ್ಲಿ ಉರುಳಿ ಬಿದ್ದಿದ್ದ ಟ್ಯಾಂಕರ್ ನ ತೆರವಿಗೆ ಪೊಲೀಸರು ಹಾಗೂ ಸ್ಥಳೀಯರು ಹರಸಾಹಸ ಪಡುವಂತಾಗಿತ್ತು. ನಂತರ 12ರ ಬಳಿಕ ಟ್ಯಾಂಕರ್ ಅನ್ನು ತೆರವುಗೊಳಿಸಿದ್ದರಿಂದ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಪುನರಾರಂಭಗೊಂಡಿತೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News