ಮೂಡಿಗೆರೆ: ನಿರಂತರ ಕಾಡಾನೆ ದಾಳಿಗೆ ತತ್ತರಿಸಿದ ಗ್ರಾಮಸ್ಥರು; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

Update: 2018-08-29 18:16 GMT

ಮೂಡಿಗೆರೆ, ಆ.29: ತಾಲೂಕಿನ ಮೂಲರಹಳ್ಳಿ, ಗುತ್ತಿಹಳ್ಳಿ- ಬೈರಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಮೂರು ಕಾಡಾನೆಗಳು ಹಗಲು ರಾತ್ರಿ ಎನ್ನದೆ ದಾಂಧಲೆ ನಡೆಸುತ್ತಿದ್ದು ಕಾಫಿ, ಭತ್ತ, ಬಾಳೆ ಬೆಳೆಗಳನ್ನು ನಾಶ ಪಡಿಸಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ. ಕಾಡಾನೆಗಳನ್ನು ಓಡಿಸುವಂತೆ ಅರಣ್ಯಾಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳಲು ಬಂದರೆ ಗ್ರಾಮಸ್ಥರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುವ ಮೂಲಕ ರೈತರ ಮೇಲೆ ಸವಾರಿ ಮಾಡುತ್ತಿದ್ದಾರೆ. ಈ ಭಾಗದ ರೈತರ ಗೋಳನ್ನು ಅಳಿಸುವರಿಲ್ಲದಂತಾಗಿದೆ ಎಂದು ಮೂಲರ ಹಳ್ಳಿ ರಘು ಆರೋಪಿಸಿದ್ದಾರೆ.

ಕಳೆದ 2-3 ವರ್ಷಗಳಿಂದ ಕಾಡಾನೆಗಳು ಈ ಭಾಗದಲ್ಲಿ ನಿರಂತರ ದಾಳಿ ನಡೆಸುತ್ತಿರುವ ಕಾರಣ ಕಾಫಿ, ಮೆಣಸು ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿದೆ. ಕಾಡಾಗಳ ಹಾವಳಿಯಿಂದ ರಕ್ಷಿಸುವಂತೆ 2018 ರ ಮೇ ತಿಂಗಳಲ್ಲಿ ಗ್ರಾಮಸ್ಥರು ಮೂಡಿಗೆರೆ ಅರಣ್ಯ ಇಲಾಖೆಗೆ ಆಗಮಿಸಿದಾಗ ರಕ್ಷಣೆ ಕೊಡುವಂತೆ ಕೆಲವು ಗ್ರಾಮಸ್ಥರು ಅರಣ್ಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆ ನಡೆಸಿದ್ದಕ್ಕೆ ಸಿಟ್ಟಿಗೆದ್ದ ಅಧಿಕಾರಿಗಳು ಗ್ರಾಮಸ್ಥರ ಮೇಲೆ ಪೊಲೀಸರಿಗೆ ಸುಳ್ಳು ದೂರು ನೀಡಿ ಪ್ರಕರಣ ದಾಖಲಿಸಿದ್ದರು. ಅಧಿಕಾರಿಗಳ ವರ್ತನೆಗೆ ಬೆಳೆಗಾರರು ಮತ್ತು ರೈತರು ಭಯಭೀತರಾಗಿದ್ದಾರೆ. ಕಾಡು ಪ್ರಾಣಿಗಳಿಂದ ರಕ್ಷಿಸಿ ಎಂದು ಕೇಳುವುದು ತಪ್ಪೇ ? ಕಾಡು ಪ್ರಾಣಿಗಳಿಂದ ಬೆಳೆ ಹಾನಿ ಆದರೆ ಅದಕ್ಕೆ ಪರಿಹಾರ ಕೊಡುತ್ತೇವೆ ಎನ್ನುವ ಅಧಿಕಾರಿಗಳು ಕಾಡಾನೆಗಳನ್ನು ಓಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. 

ಕಾಡಾಣೆಗಳನ್ನು ಈ ಭಾಗದಿಂದ ಓಡಿಸುವ ಮೂಲಕ ಈ ಭಾಗದ ಜನರಿಗೆ ಶಾಶ್ವತ ಪರಿಹಾರವನ್ನು ಸರ್ಕಾರ ನೀಡಲು ಮುಂದೆ ಬರಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News