ಗೌರಿ ಲಂಕೇಶ್ ಕೊಲೆಗೆ ಮಾಡಲಾಗಿತ್ತು ಒಂದು ವರ್ಷದ ಮಾಸ್ಟರ್ ಪ್ಲ್ಯಾನ್ !

Update: 2018-08-29 19:14 GMT

ಬೆಂಗಳೂರು, ಆ.29: ಹಿಂದೂ ರಾಷ್ಟ್ರ ನಿರ್ಮಾಣದ ಕಲ್ಪನೆಯ ಭಾಗವಾಗಿ ಅನಾಮಧೇಯ ಸಂಘಟನೆ ನಾಲ್ವರು ಪ್ರಗತಿಪರ ಚಿಂತಕರ ಹತ್ಯೆ ನಡೆಸಿದೆ. ಈ ಸಂಘಟನೆಯಲ್ಲಿ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಅನೇಕ ಇತರ ಬಲಪಂಥೀಯ ಸಂಘಟನೆಗಳ ಸದಸ್ಯರು ಶಾಮೀಲಾಗಿದ್ದಾರೆ ಎಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಸಿಟ್) ಮಾಹಿತಿ ನೀಡಿದೆ ಎಂದು ಇಂಡಿಯಾ ಟುಡೆ ಆಂಗ್ಲ ಸುದ್ದಿ ಮಾಧ್ಯಮದ ಎಕ್ಸ್‌ಕ್ಲೂಸಿವ್ ವರದಿ ತಿಳಿಸಿದೆ.

ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿರುವ ಅಮೋಲ್ ಕಾಳೆ ಹಿಂದೂ ಜನಜಾಗೃತಿ ಸಮಿತಿಯ ಮಾಜಿ ಸಂಚಾಲಕನಾಗಿದ್ದರೆ ಇನ್ನೊರ್ವ ಆರೋಪಿ ಅಮಿತ್ ದೆಗ್ವೆಕರ್ ಸನಾತನ ಸಂಸ್ಥೆಯ ಕಾರ್ಯಕರ್ತನಾಗಿದ್ದಾನೆ.

ಈ ಅನಾಮಧೇಯ ಸಂಘಟನೆಯಲ್ಲಿ 60 ಸದಸ್ಯರಿದ್ದು ದೇಶಾದ್ಯಂತದ 26 ಹೆಸರುಗಳು ಇವರ ಹಿಟ್ ಲಿಸ್ಟ್‌ನಲ್ಲಿದೆ ಎಂದು ತಿಳಿಸಿರುವ ಸಿಟ್ ಈ ಪೈಕಿ 14 ಹೆಸರುಗಳನ್ನು ಮಹಾರಾಷ್ಟ್ರ ಪೊಲೀಸ್ ಮತ್ತು ಭಯೋತ್ಪಾದನೆ ನಿಗ್ರಹ ಪಡೆಯೊಂದಿಗೆ ಹಂಚಿಕೊಂಡಿದೆ.

ಇತ್ತೀಚೆಗೆ ಕರ್ನಾಟಕ ಸಿಟ್ ನೀಡಿದ ಮಾಹಿತಿ ಆಧಾರದಲ್ಲಿ ಮುಂಬೈಯಲ್ಲಿ ಹಲವು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಲಾಯಿತು. ಮಾಹಿತಿಯ ಪ್ರಕಾರ ಬಂಧಿತರಿಂದ ಬೃಹತ್ ಪ್ರಮಾಣದಲ್ಲಿ ಡಿಟೊನೇಟರ್‌ಗಳು ಮತ್ತು ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗೌರಿ ಹತ್ಯೆಯನ್ನು ಜಾಲಾಡಿದಾಗ

2017ರ ಸೆಪ್ಟಂಬರ್ 5ರಂದು ಗೌರಿ ಲಂಕೇಶ್ ಹತ್ಯೆ ನಡೆಯುವುದಕ್ಕೂ ಒಂದು ವರ್ಷದ ಮೊದಲೇ ಆಕೆಯ ಹತ್ಯೆಗೆ ಸಂಚು ರೂಪಿಸಲಾಗುತ್ತಿತ್ತು. ಈ ಕೆಲಸಕ್ಕಾಗಿ ಅಮೋಲ್ ಕಾಳೆ ಶ್ರೀರಾಮ ಸೇನೆಯ ಕಾರ್ಯಕರ್ತ ಪರಶುರಾಮ ವಾಗ್ಮೊರೆಯನ್ನು ನಿಯೋಜಿಸಿದ್ದ.

ಹಿಂದೂ ಧರ್ಮದ ರಕ್ಷಣೆಗಾಗಿ ಗೌರಿಯನ್ನು ಹತ್ಯೆ ಮಾಡಬೇಕು ಎಂದು ವಾಗ್ಮೊರೆಗೆ ಹೇಳಲಾಗಿತ್ತು. ನಂತರ ಕಾಳೆ, ವಾಗ್ಮೊರೆಗೆ ಗುಂಡು ಹಾರಾಟ ತರಬೇತಿ ನೀಡಲು ಬೆಳಗಾವಿಯ ಖಾನಾಪುರದಲ್ಲಿರುವ ಮೂರೂವರೆ ಎಕರೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ.

2017ರ ಜುಲೈಯಲ್ಲಿ ಮೊದಲ ಬಾರಿ ಬೆಂಗಳೂರಿಗೆ ಆಗಮಿಸಿದ ವಾಗ್ಮೊರೆ ಗೌರಿ ನಿವಾಸದ ಪರಿಶೀಲನೆ ನಡೆಸಿದ್ದ ಎನ್ನುತ್ತದೆ ಸಿಟ್ ವರದಿ.

ಹತ್ಯೆಯ ದಿನ

ಪೊಲೀಸರ ಪ್ರಕಾರ, ವಾಗ್ಮೊರೆಗೆ ತನ್ನ ಸಹಚರರ ಹೆಸರು ಕೂಡಾ ತಿಳಿದಿರಲಿಲ್ಲ. ಅವರೆಲ್ಲರನ್ನು ಆತ ಕೇವಲ ಅವರ ಅಡ್ಡ ಹೆಸರುಗಳಿಂದ ತಿಳಿದಿದ್ದ. ನಿನ್ನನ್ನು ಬೈಕ್‌ನಲ್ಲಿ ಕೊಂಡೊಯ್ಯಲಾಗುತ್ತದೆ. ನೀನು ಪಿಸ್ತೂಲಿನಿಂದ ಗುಂಡು ಹಾರಿಸಬೇಕು ಅಷ್ಟೇ ಎಂದು ವಾಗ್ಮೊರೆಗೆ ತಿಳಿಸಲಾಗಿತ್ತು.

ಸೆಪ್ಟಂಬರ್ 5ರ ರಾತ್ರಿ 8.09 ಗಂಟೆಗೆ ವಾಗ್ಮೊರೆ ಕಪ್ಪು ಬಣ್ಣದ ಬೈಕ್‌ನಲ್ಲಿ ಗೌರಿ ನಿವಾಸದ ಬಳಿಗೆ ಬಂದು ಆಕೆಯ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದ.

ಈ ವೇಳೆ ಆತನನ್ನು ಗಣೇಶ್ ಮಿಸ್ಕಿನ್ ಎಂಬಾತ ಜೊತೆಗೂಡಿದ್ದ. ವಾಗ್ಮೊರೆ ಗೌರಿಯ ಹತ್ಯೆ ಮಾಡಲು ವಿಫಲವಾದರೆ ಆಕೆಯ ಮೇಲೆ ಗುಂಡು ಹಾರಿಸಲೆಂದು ಗಣೇಶ್ ಕೂಡಾ ತನ್ನ ಬಳಿ ಪಿಸ್ತೂಲನ್ನು ಇರಿಸಿಕೊಂಡಿದ್ದ.

ಗೌರಿ ಹತ್ಯೆ ನಡೆಸಿದ ನಂತರ ವಾಗ್ಮೊರೆ ಮತ್ತು ಗಣೇಶ್ ಮೈಸೂರು ರಸ್ತೆಯತ್ತ ತೆರಳಿ ಅಲ್ಲಿ ಅದಾಗಲೇ ಮಾರುತಿ ಓಮ್ನಿಯಲ್ಲಿ ಕಾದುಕುಳಿತಿದ್ದ ಅಮಿತ್ ಬಡ್ಡಿಯನ್ನು ಭೇಟಿಯಾದರು.

ಅಲ್ಲಿ ತಮ್ಮ ಬಳಿಯಿದ್ದ ಪಿಸ್ತೂಲು, ಬೈಕ್, ಬಟ್ಟೆಗಳು, ಹೆಲ್ಮೆಟ್ ಮತ್ತು ಶೂಗಳನ್ನು ಅಮಿತ್‌ಗೆ ಒಪ್ಪಿಸಿದರು. ಇಬ್ಬರೂ ಆರೋಪಿಗಳು ನಂತರ ಬೆಂಗಳೂರಿನ ಹೊರವಲಯದಲ್ಲಿರುವ ನೆಲಮಂಗಳಕ್ಕೆ ತೆರಳಿ ಇನ್ನೊರ್ವ ಆರೋಪಿ ಭರತ್ ಕುರ್ನೆಯನ್ನು ಭೇಟಿಯಾದರು.

ಕುರ್ನೆ ಹತ್ಯೆಕೋರರಿಗೆ ಉತ್ತರ ಕರ್ನಾಟಕಕ್ಕೆ ಪರಾರಿಯಾಗಲೂ ಬಸ್ ಹತ್ತುವಲ್ಲಿ ನೆರವಾದ. ಅಮಿತ್ ಬಡ್ಡಿ ತನ್ನಲ್ಲಿದ್ದ ಪಿಸ್ತೂಲು, ಬಟ್ಟೆಗಳು ಮತ್ತು ಬೈಕನ್ನು ಕುಂಬಲಗೋಡುವಿನಲ್ಲಿ ಸುರಕ್ಷಿತವಾಗಿ ಅಡಗಿಸಿಟ್ಟ.

ಆರೋಪಿಗಳ ಪಾತ್ರ

ಈ ಇಡೀ ಹತ್ಯೆಯನ್ನು ಸವಿವರವಾಗಿ ಯೋಜಿಸಿದವನು ಮತ್ತು ವ್ಯವಸ್ಥೆಗೊಳಿಸಿದವನು ಅಮೋಲ್ ಕಾಳೆ ಎಂದು ತನಿಖಾಧಿಕಾರಿಗಳ ಅನಿಸಿಕೆ. ಇದುವರೆಗೆ ಗೌರಿ ಲಂಕೇಶ್ ಹತ್ಯೆಯಲ್ಲಿ ಸಿಟ್ 12 ಜನರನ್ನು ಬಂಧಿಸಿದೆ.

1. ಕೆ.ಟಿ ನವೀನ್ ಕುಮಾರ್- ಪಿತೂರಿಗೆ ಪ್ರಚೋದನೆ ನೀಡಿದಾತ ಮತ್ತು ಹತ್ಯೆಗೆ ಅಸ್ತ್ರ ಒದಗಿಸಿದಾತ.

2. ಸುಜಿತ್ ಕುಮಾರ್- ಕೊಲೆಗಾರನನ್ನು ನಿಯೋಜಿಸಿದಾತ (ಪರಶುರಾಮ ವಾಗ್ಮೊರೆ)

3. ಅಮೊಲ್ ಕಾಳೆ- ಹತ್ಯೆಯ ಮಾಸ್ಟರ್‌ಮೈಂಡ್

4. ಅಮಿತ್ ದಿಗ್ವೆಂಕರ್-ಗುಂಪಿನ ಸಹಾಯಕ ಮುಖ್ಯಸ್ಥ

5. ಮನೋಹರ್ ಎಡವೆ- ಹತ್ಯೆಯ ಸಂಚು ರೂಪಿಸುವಲ್ಲಿ ಭಾಗಿ

6. ಪರಶುರಾಮ ವಾಗ್ಮೊರೆ-ಗುಂಡು ಹಾರಿಸಿದ ಆರೋಪಿ

7. ರಾಜೇಶ್ ಬಂಗೇರ-ಶಸಸ್ತ್ರ ತರಬೇತಿ ನೀಡಿದಾತ

8. ಗಣೇಶ್ ಮಸ್ಕಿನ್- ಬೈಕ್ ಚಲಾಯಿಸಿದಾತ

9. ಅಮಿತ್ ಬಡ್ಡಿ-ಆಯುಧ ಸಂಗ್ರಹಿಸಿ ಸುರಕ್ಷಿತ ಪ್ರದೇಶಕ್ಕೆ ಸಾಗಿಸಿದಾತ

10. ಸುರೇಶ್- ಆಯುಧಗಳನ್ನು ಅಡಗಿಸಿಟ್ಟ ಮನೆಯ ಮಾಲಕ

11. ಭರತ್ ಕುರ್ನೆ- 2017ರಿಂದ ವಾಗ್ಮೊರೆ ಗುಂಡು ಹಾರಿಸಲು ತರಬೇತಿ ಪಡೆಯುತ್ತಿದ್ದ ಜಮೀನಿನ ಮಾಲಕ

12. ಮೋಹನ್ ನಾಯ್ಕ್ - ಹತ್ಯೆಯ ನಂತರ ಆಯುಧಗಳನ್ನು ಅಡಗಿಸಿಡಲು ಮನೆಯನ್ನು ಬಾಡಿಗೆಗೆ ಪಡೆದಾತ

ನಾಲ್ಕು ಹತ್ಯೆಗಳು ಒಂದು ಡೈರಿ

ಕೆಲವು ತಿಂಗಳ ಹಿಂದೆ ಪೊಲೀಸರು ಅಮೋಲ್ ಕಾಳೆಯನ್ನು ಬಂಧಿಸಿದಾಗ ಆತನ ಬಳಿಯಿದ್ದ ಡೈರಿಯನ್ನು ಸಿಟ್ ವಶಪಡಿಸಿಕೊಂಡಿತ್ತು. ಈ ಡೈರಿಯಲ್ಲಿ ಕೆಲವೊಂದು ಕೋಡ್‌ಗಳಿದ್ದವು. ಈ ಕೋಡ್‌ಗಳನ್ನು ಬೇಧಿಸಲು ಯಶಸ್ವಿಯಾದ ಅಧಿಕಾರಿಗಳು ಉಳಿದ ಆರೋಪಿಗಳ ಹೆಸರುಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಪಡೆಯುವಲ್ಲಿ ಸಫಲರಾಗಿದ್ದರು.

ಈ ಡೈರಿಯ ಕೋಡ್‌ಗಳನ್ನು ಸಂಪೂರ್ಣವಾಗಿ ಬೇಧಿಸಿದಾಗ ಅಮೋಲ್ ಕಾಳೆ ಪ್ರಗತಿಪರ ಚಿಂತಕರಾದ ಗೋವಿಂದ ಪನ್ಸಾರೆ, ನರೇಂದ್ರ ದಾಬೋಲ್ಕರ್ ಹಾಗೂ ಎಂ.ಎಂ ಕಲಬುರ್ಗಿಯ ಹತ್ಯೆಯಲ್ಲೂ ಶಾಮೀಲಾಗಿದ್ದಾನೆ ಎಂಬುದು ಸಿಟ್ ಅಧಿಕಾರಿಗಳಿಗೆ ದೃಢಪಟ್ಟಿತ್ತು.

ಕಲಬುರ್ಗಿಯ ಹತ್ಯೆಯ ತನಕ ಡಾ. ದೇವೇಂದ್ರ ತಾವ್ಡೆ ಎಂಬಾತ ಈ ಅನಾಮಧೇಯ ಸಂಘಟನೆಯ ನೇತೃತ್ವ ವಹಿಸಿದ್ದ. ಆದರೆ ಆತನ ಬಂಧನದ ನಂತರ ಅಮೋಲ್ ಕಾಳೆ ಈ ಸಂಘಟನೆಯ ನೇತೃತ್ವವನ್ನು ವಹಿಸಿಕೊಂಡ. ಸಿಟ್ ಈ ಮಾಹಿತಿಯನ್ನು ಮಹಾರಾಷ್ಟ್ರ ಪೊಲೀಸರ ಜೊತೆ ಹಂಚಿಕೊಂಡಿದ್ದು ಅದರ ಪರಿಣಾಮವಾಗಿ ಹಲವು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿಗಾಯಿಡಲಾಗಿತ್ತು. ಅದರ ಫಲವಾಗಿ ಇತ್ತೀಚೆಗೆ ಹಲವರನ್ನು ಬಂಧಿಸಲಾಗಿದೆ.

ಹತ್ಯೆಗೆ ಉಪಯೋಗಿಸಿದ ಆಯುಧ

ಸಿಟ್ ಪ್ರಕಾರ, ಗೌರಿ ಲಂಕೇಶ್ ಹಾಗೂ ಇತರ ಹತ್ಯೆಗಳಲ್ಲಿ ಬಳಸಲಾದ ಆಯುಧಗಳನ್ನು ತಯಾರಿಸಿದಾತ ಶರದ್ ಕಲಸ್ಕರ್. ಈತನನ್ನೂ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಸಿಟ್ ಪ್ರಕಾರ, ಈ ನಾಲ್ಕೂ ಹತ್ಯೆಗಳಲ್ಲಿ ಎರಡು ಗನ್‌ಗಳನ್ನು ಬಳಸಲಾಗಿದೆ.

ಹತ್ಯೆ ದಿನ ಎರಡೂ ಗನ್‌ಗಳನ್ನು ಕೊಂಡೊಯ್ಯಲಾಗುತ್ತಿತ್ತು. ಪನ್ಸಾರೆಯ ಹತ್ಯೆಯಲ್ಲಿ ಎರಡೂ ಗನ್‌ಗಳನ್ನು ಬಳಸಲಾಗಿತ್ತು. ಆದರೆ ಗೌರಿ, ದಾಭೋಲ್ಕರ್ ಮತ್ತು ಕಲಬುರ್ಗಿ ಹತ್ಯೆಯಲ್ಲಿ ಒಂದು ಗನ್ ಬಳಸಲಾಗಿದ್ದರೂ ಇನ್ನೊಂದು ಗನ್ ಅನ್ನು ಕೂಡಾ ಜೊತೆಗೆ ಕೊಂಡೊಯ್ಯಲಾಗಿತ್ತು ಎಂದು ಸಿಟ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಟ್ ಪ್ರಕಾರ, ಎಟಿಎಸ್ ಅಧಿಕಾರಿಗಳು ಮುಂಬೈಯಲ್ಲಿ ವಶಪಡಿಸಿಕೊಂಡಿರುವ ಆಯುಧಗಳಲ್ಲಿ ಈ ಎರಡು ಗನ್‌ಗಳೂ ಸೇರಿವೆ. ಈ ಗನ್‌ಗಳನ್ನು ತನ್ನ ವಶಕ್ಕೆ ನೀಡುವಂತೆ ಸಿಟ್ ಮನವಿ ಮಾಡಲಿದ್ದು ಅದನ್ನು ವಿಧಿವಿಜ್ಞಾನ ಇಲಾಖೆಗೆ ಪರೀಕ್ಷೆಗೆ ಕಳುಹಿಸಿಕೊಡಲಿದೆ.

ಪೊಲೀಸರ ಪ್ರಕಾರ, ಅಮೋಲ್ ಕಾಳೆ ಮತ್ತಾತನ ತಂಡ ವಿವಾದಿತ ಹಿಂದಿ ಸಿನೆಮಾ ಪದ್ಮಾವತ್ ಪ್ರದರ್ಶನದ ವೇಳೆ ಬೆಳಗಾವಿಯ ಚಿತ್ರಮಂದಿರದ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದರು. ಇದೇ ತಂಡ 2017ರ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪುಣೆಯಲ್ಲಿ ನಡೆಯುತ್ತಿದ್ದ ಪಾಶ್ಚಾತ್ಯ ಸಂಗೀತ ಸಮಾರಂಭಕ್ಕೂ ತೆರಳಿ ದಾಂಧಲೆ ನಡೆಸಲು ಯೋಜಿಸಿದ್ದರು. ಆದರೆ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುವುದನ್ನು ಕಂಡ ತಂಡ ತನ್ನ ಯೋಜನೆಯನ್ನು ಕೈಬಿಟ್ಟು ಸ್ಥಳದಿಂದ ವಾಪಸ್ ಬಂದಿತ್ತು.

ಕೃಪೆ : indiatoday.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News