ಕೊಪ್ಪ: ಭೂಮಿಯೊಳಗಿನಿಂದ ಕೇಳಿಬರುವ ಶಬ್ದ ಭೂಕಂಪದಿಂದ ಅಲ್ಲ

Update: 2018-08-30 08:52 GMT

ಚಿಕ್ಕಮಗಳೂರು, ಆ.30: ಜಿಲ್ಲೆಯ ಕೊಪ್ಪತಾಲೂಕು ಕೊಗ್ರೆ ಸುತ್ತಮುತ್ತಲ ಪ್ರದೇಶದಲೆಲ್ಲೂ ಭೂಕಂಪವಾಗಿಲ್ಲ. ಇತ್ತೀಚಿನ ಕೆಲವು ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿರುವುದೇ ಶಬ್ದ ಕೇಳಿಬರಲು ಕಾರಣ ಎಂದು ಹಿರಿಯ ಭೂವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಭೂವಿಜ್ಞಾನಿಗಳು ಉಲ್ಲೇಖಿಸಿದ್ದಾರೆಂದು ತಿಳಿದು ಬಂದಿದೆ.

ಕೊಪ್ಪತಾಲೂಕಿನ ಕೊಗ್ರೆ, ಶಾಂತಿಗ್ರಾಮ, ಅಬ್ಬಿಕಲ್, ನಾಯಕರಕಟ್ಟೆ, ಗುಡ್ಡೆಬಾರಗೋಡು ಗ್ರಾಮಗಳಲ್ಲಿ ಕಳೆದ ಕೆಲವು ತಿಂಗಳುಗಳಿಂದ ಆಗಾಗ ಭೂಮಿಯೊಳಗಿನಿಂದ ಭಾರೀ ಶಬ್ದ ಕೇಳಿ ಬರುತ್ತಿದ್ದುದಲ್ಲದೆ, ಭೂಮಿ ಕಂಪಿಸಿದ ಅನುಭವವಾಗುತ್ತಿರುವುದಾಗಿ ಗ್ರಾಮಸ್ಥರು ದೂರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆ.14ರಂದು ಬೆಂಗಳೂರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಡಾ.ಎಂ.ಟಿ.ಮಹೇಶ್ ನೇತೃತ್ವದಲ್ಲಿ ಡಾ.ರಮೇಶ್ ಎಲ್. ದಿಕ್ಪಾಲ್, ಕೆ.ಕೆ.ಅಭಿನಯ್, ರಾಘವನ್ ಅವರನ್ನೊಳಗೊಂಡ ತಂಡ ಕೊಗ್ರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ಈ ತಂಡವು ಇದೀಗ ತಮ್ಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದು, ಈ ಪ್ರದೇಶದಲ್ಲಿ ವಾಡಿಕೆಯಂತೆ 1,025 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಈ ಬಾರಿ 1,339 ಮಿ.ಮೀ. ಮಳೆಯಾಗಿದೆ. ಶೇ.31ರಷ್ಟು ಹೆಚ್ಚುವರಿ ಮಳೆಯಾಗಿದೆ. ಅತೀ ಹೆಚ್ಚು ಮಳೆಯಾಗಿರುವುದರಿಂದಲೆ ಈ ರೀತಿಯ ಶಬ್ದ ಭೂಮಿಯೊಳಗಿನಿಂದ ಕೇಳಿ ಬಂದಿರಬಹುದೇ ಹೊರತು ಅದು ಭೂಕಂಪವಲ್ಲ. ಈ ಗ್ರಾಮಗಳೆಲ್ಲವೂ ಗುಡ್ಡಗಳ ಮೇಲೆಯೇ ಇದೆ. ಈ ಭಾಗದಲ್ಲಿ ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಿಸಲಾಗಿದೆ. ರಸ್ತೆಗೆ ನುಣುಪು ಮಣ್ಣನ್ನು ಬಳಸಲಾಗಿದೆ. ಗುಡ್ಡಗಳನ್ನು ಕೊರೆದಿರುವುದರಿಂದಾಗಿ ಗುಡ್ಡ ಕುಸಿತಗಳು ಉಂಟಾಗುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಗ್ರಾಮದಲ್ಲಿ ಮಾನವ ನಿರ್ಮಿತ 50-60 ಮೀಟರ್ ಉದ್ದದ ಸುರಂಗವೊಂದು ಇದೆ. ಈ ಸುರಂಗದಲ್ಲಿ ಪದರಗಳು ಒಂದಕ್ಕೊಂದು ತಿಕ್ಕಾಟ ನಡೆಸಿದ್ದರಿಂದಾಗಿ ಶಬ್ದ ಬರುತ್ತಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಅಲ್ಲಿ ಪರಿಶೀಲನೆ ನಡೆಸಿದಾಗ ಪದರಗಳ ತಿಕ್ಕಾಟ ನಡೆದಿರುವ ಬಗ್ಗೆ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಆ ರೀತಿಯ ಶಬ್ದ ಬರಲು ಸುರಂಗ ಕಾರಣವಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಗುಡ್ಡ ಪ್ರದೇಶಗಳಲ್ಲಿ ಭಾರೀ ಮಳೆಯಾಗಿರುವುದರಿಂದ ಹಾಗೂ ನೀರು ಅತೀ ವೇಗವಾಗಿ ಹರಿಯುವುದರಿಂದ ಈ ರೀತಿಯ ಶಬ್ದ ಕೇಳಿ ಬಂದಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ವಿಜ್ಞಾನಿಗಳ ತಂಡ, ಭೂಕಂಪವಾದಾಗ ಆ ಬಗ್ಗೆ ಮಾಹಿತಿ ನೀಡಲು ಪ್ರತೀ ಜಿಲ್ಲೆಗಳಲ್ಲಿಯೂ ರಿಕ್ಟರ್ ಮಾಪಕಗಳನ್ನು ಅಳವಡಿಸಲಾಗಿದೆ. ಭೂಕಂಪವಾದ ಅಥವಾ ಭೂಕಂಪವಾಗುವ ಲಕ್ಷಣಗಳು ಕಂಡು ಬಂದ ಕೂಡಲೆ ಆಯಾ ಜಿಲ್ಲಾಧಿಕಾರಿಗೆ ಮಾಹಿತಿ ರವಾನೆಯಾಗುತ್ತದೆ. ಈ ಪ್ರದೇಶದಲ್ಲಿ ಅಂತಹ ಯಾವುದೇ ವಿವರ ಲಭ್ಯವಾಗಿಲ್ಲ. ಭೂಕಂಪಕ್ಕೂ, ಇಲ್ಲಿ ಕೇಳಿ ಬಂದಿರುವ ಶಬ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News