ಕಾಲುಗಳಲ್ಲಿರುವ 6 ಬೆರಳುಗಳಿಗೆ ಕಸ್ಟಮೈಸ್ಡ್ ಶೂ ಅಗತ್ಯವಿದೆ

Update: 2018-08-30 09:43 GMT

ಹೊಸದಿಲ್ಲಿ, ಆ.30: ಏಷ್ಯನ್ ಗೇಮ್ಸ್ ನ ಹೆಪ್ಟಾಥ್ಲಾನ್ ವಿಭಾಗದಲ್ಲಿ ಚಿನ್ನ ಗೆದ್ದ ಪ್ರಥಮ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಸ್ವಪ್ನಾ ಬರ್ಮನ್ ತನ್ನ ಎರಡೂ ಕಾಲುಗಳಲ್ಲಿ ಆರು ಬೆರಳುಗಳಿರುವುದರಿಂದ ತಮಗೆ ಕಸ್ಟಮೈಸ್ಡ್ ಶೂಗಳ ಅಗತ್ಯವಿದೆ ಎಂದು ಮನವಿ ಮಾಡಿದ್ದಾರೆ. ಬುಧವಾರ ತೀವ್ರ ಹಲ್ಲು ನೋವಿನಿಂದ ಬಳಲುತ್ತಿದ್ದ ಆಕೆ ನೋವು ನಿವಾರಕ ಟೇಪ್ ಕೆನ್ನೆಗೆ ಹಚ್ಚಿ ಅಂಗಣಕ್ಕಿಳಿದು, ನೋವನ್ನು ಮರೆತು ದೊಡ್ಡ ಸಾಧನೆ ಮಾಡಿದ್ದಾರೆ.

“ಕ್ರೀಡಾ ಉತ್ಪನ್ನಗಳ ತಯಾರಿಕಾ ಕಂಪೆನಿಗಳು ನಿಮ್ಮ ಕಾಲುಗಳ ಆರು ಬೆರಳಿಗೆ ಸರಿಯಾಗಿ ಹೊಂದುವಂತೆ ವಿಶೇಷ ಶೂ ವಿನ್ಯಾಸಗೊಳಿಸಬೇಕೇ” ಎಂದು ಪ್ರಶ್ನಿಸಿದಾಗ ಹೌದೆಂದ ಅವರು ಇದು ತಮ್ಮ ಕ್ರೀಡಾ ಜೀವನಕ್ಕೆ ಸಹಕಾರಿಯಾಗುವುದು ಎಂದರು.

ತಮ್ಮ ಕೆನ್ನೆಯಲ್ಲಿದ್ದ ಟೇಪ್ ಬಗ್ಗೆ ಪ್ರಶ್ನಿಸಿದಾಗ ಹಲ್ಲು ನೋವು ಕಡಿಮೆಗೊಳಿಸಲೆಂದು ಅದನ್ನು ಹಾಕಲಾಗಿದೆ ಎಂದರು. ``ನಾನು ಬಹಳಷ್ಟು ಚಾಕೊಲೇಟ್ ಗಳನ್ನು ಸವಿಯುತ್ತೇನೆ, ಇದೇ ಕಾರಣದಿಂದ ಹಲ್ಲಿನ ಸಮಸ್ಯೆಯಿದೆ. ಎರಡು ದಿನಗಳಿಂದ ತೀವ್ರ ಹಲ್ಲು ನೋವಿತ್ತು. ಸ್ಪರ್ಧಿಸಲು ಸಾಧ್ಯವೇ ಎಂಬ ಅನುಮಾನವೂ ಇತ್ತು. ಆದರೆ ನೋವನ್ನು ಮರೆತು ಅಂಗಳಕ್ಕಿಳಿದೆ'' ಎನ್ನುತ್ತಾರೆ ಸ್ವಪ್ನಾ.

2014 ಏಷ್ಯನ್ ಗೇಮ್ಸ್ ನಲ್ಲಿ ಸ್ವಪ್ನಾ ಐದನೇ ಸ್ಥಾನ ಗಳಿಸಿದ್ದರೆ ಕಳೆದ ವರ್ಷದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ನಲ್ಲಿ ಆಕೆ ಚಿನ್ನ ಗಳಿಸಿದ್ದರು. ಹೆಪ್ಟಾಥ್ಲಾನ್ ನಲ್ಲಿ ಒಟ್ಟು ಏಳು ಸ್ಪರ್ಧೆಗಳಿದ್ದು, ಮೊದಲ ದಿನ 100 ಮೀಟರ್ ಹರ್ಡಲ್ಸ್, ಹೈಜಂಪ್, ಶಾಟ್ ಪುಟ್ ಹಾಗೂ 200 ಮೀಟರ್ ಓಟ ಇದ್ದರೆ ಎರಡನೇ ದಿನ ಲಾಂಗ್ ಜಂಪ್, ಜಾವೆಲಿನ್ ತ್ರೋ ಹಾಗೂ 800 ಮೀ ಓಟ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News