ಸೋಮವಾರಪೇಟೆ: ಭೂಕುಸಿತದಿಂದ ಶಾಲೆಗೆ ತೆರಳಲಾಗದೆ ಮನೆಯಲ್ಲಿ ಉಳಿದ ವಿದ್ಯಾರ್ಥಿಗಳು

Update: 2018-08-30 11:41 GMT

ಸೋಮವಾರಪೇಟೆ,ಆ.30: ಧಾರಾಕಾರ ಮಳೆಗೆ ಹಟ್ಟಿಹೊಳೆ ಗ್ರಾಮ ಸುತ್ತಮುತ್ತ ಭೂಕುಸಿತ ಸಂಭವಿಸಿದ ಪರಿಣಾಮ ಹಟ್ಟಿಹೊಳೆ ನಿರ್ಮಲ ವಿದ್ಯಾಭವನದ ಸುಮಾರು 535 ವಿದ್ಯಾರ್ಥಿಗಳು ಶಾಲೆಗೆ ತೆರಳದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾದಾಪುರ, ಇಗ್ಗೋಡ್ಲು, ನಂದಿಮೊಟ್ಟೆ, ಬಿಳಿಗೇರಿ, ಐಗೂರು, ಗರಗಂದೂರು, ಹಾಲೇರಿ, ಮಕ್ಕಂದೂರು ಗ್ರಾಮಗಳಿಂದ ಬರುತ್ತಿದ್ದ ವಿದ್ಯಾರ್ಥಿಗಳ ಪರಿಸ್ಥಿತಿ ತ್ರಿಶಂಕು ಸ್ಥಿತಿಯಾಗಿದ್ದು, ಒಂದೆಡೆ ಗ್ರಾಮಗಳೇ ಮುಳುಗಿ ಹೋಗಿರುವುದರ ಜೊತೆಗೆ ತಮ್ಮ ಮಕ್ಕಳ ಭವಿಷ್ಯವೂ ಕೂಡ ಮಸುಕಾಗುತ್ತಿರುವ ಕುರಿತು ಪೋಷಕರಲ್ಲಿ ಆತಂಕ ಮನೆ ಮಾಡಿದೆ.  

ವಿದ್ಯಾಭವನಕ್ಕೆ ಹಾಲೇರಿ, ಮಕ್ಕಂದೂರು ಗ್ರಾಮಗಳಿಂದ ಬರುವ ಮಕ್ಕಳಿಗೆ ಕಾಂಡನಕೊಲ್ಲಿ ಬಳಿ ಉಂಟಾದ ಭಾರೀ ಭೂಕುಸಿತಕ್ಕೆ ಮಡಿಕೇರಿ ಸಂಪರ್ಕ ರಸ್ತೆ ಸರಿಪಡಿಸಲಾರದಷ್ಟು ಹಾನಿಯಾಗಿದೆ. ಸುಮಾರು 500 ವಿದ್ಯಾರ್ಥಿಗಳಿಗೆ ಸಂಪರ್ಕ ರಸ್ತೆಯಾಗಿದ್ದ ಮಾದಾಪುರ-ಹಟ್ಟಿಹೊಳೆ ರಸ್ತೆ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜಿಲ್ಲಾಡಳಿತ ಆ ರಸ್ತೆಯ ಮೂಲಕ ಪ್ರವೇಶಕ್ಕೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ಶಾಲಾ ವಾಹನಗಳು ತೆರಳಲು ಕೂಡ ಕಷ್ಟಸಾಧ್ಯವಾಗಿದೆ. 
2003 ಇಸವಿಯಲ್ಲಿ ಹಟ್ಟಿಹೊಳೆಯಲ್ಲಿ ಆರಂಭಿಸಲಾದ ಶಾಲೆಯು ದಿನದಿಂದ ದಿನಕ್ಕೆ ಉತ್ತಮ ಫಲಿತಾಂಶದೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿತ್ತು. ಉತ್ತಮ ಕಟ್ಟಡದೊಂದಿಗೆ ಸುಮಾರು 3 ಏಕರೆ ಪ್ರದೇಶದಲ್ಲಿ ಆರಂಭಿಸಲಾದ ಶಾಲೆಯಲ್ಲಿ ಪ್ರಸ್ತುತ ಎಲ್‍ಕೆಜಿಯಿಂದ ಹತ್ತನೆ ತರಗತಿಯವರೆಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ. 535 ವಿದ್ಯಾರ್ಥಿಗಳು, 15 ಶಿಕ್ಷಕರು, 5 ವಾಹನ ಚಾಲಕರು, ಇಬ್ಬರು ಆಯಾ ಹಾಗು ಇಬ್ಬರು ಕಚೇರಿ ಸಿಬ್ಬಂದಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳನ್ನು ವಿವಿಧ ಗ್ರಾಮಗಳಿಂದ ಕರೆತರಲು ಐದು ವಾಹನಗಳನ್ನು ಶಾಲಾ ಆಡಳಿತ ಮಂಡಳಿ ಅನುಕೂಲ ಮಾಡಿಕೊಟ್ಟಿತ್ತು. 

ಶಾಲೆ ಆರಂಭಿಸಲು ಜಿಲ್ಲಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆ ಅನುಮತಿ ನೀಡಿದರೆ ಆರಂಭಿಸುವುದಾಗಿ ಶಾಲಾ ಮುಖ್ಯಸ್ಥ ಫಾದರ್ ಸಲ್ಡಾನ ಹೇಳುತ್ತಾರೆ. ಈ ಹಿನ್ನಲೆಯಲ್ಲಿ ಗುರುವಾರ(ಇಂದು) ಶಾಲಾ ಆಡಳಿತಮಂಡಳಿ, ಪೋಷಕರು ಹಾಗೂ ಗ್ರಾಮಸ್ಥರ ಸಭೆಯನ್ನು ಶಾಲಾ ಸಭಾಂಗಣದಲ್ಲಿ ಕರೆಯಲಾಗಿದೆ. 

ಶಾಲೆಗೆ ಬರುವ ಸಂಪರ್ಕ ರಸ್ತೆಗಳಾದ ನಂದಿಮೊಟ್ಟೆ ರಸ್ತೆ, ಮುಕ್ಕೊಡ್ಲು, ಕಾಂಡನಕೊಲ್ಲಿ, ಇಗ್ಗೊಡ್ಲು, ಶಿರಂಗಳ್ಳಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಲೋಕೋಪಯೋಗಿ ಇಲಾಖೆಯವರು ಶಾಲೆಯ ವಾಹನಗಳು ಓಡಾಡುವಷ್ಟು ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದೇವೆ. ಅವರು ಅನುಮತಿ ನೀಡಿದರೆ ಶಾಲೆಯನ್ನು ಮತ್ತೆ ತೆರೆಯುವುದಾಗಿ ಆಡಳಿತ ಮಂಡಳಿ ಭರವಸೆಯನ್ನು ನೀಡಿದೆ ಎಂದು ಪೋಷಕರು ಹಾಗೂ ಮಾದಾಪುರ ಗ್ರಾಮ ಪಂಚಾಯತ್ ಸದಸ್ಯ ಮಜೀದ್ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News