ಅತಿವೃಷ್ಟಿ ಸಮೀಕ್ಷೆಯಲ್ಲಿ ತಾರತಮ್ಯ: ಮೋಟಮ್ಮ ಆರೋಪ

Update: 2018-08-30 11:56 GMT

ಚಿಕ್ಕಮಗಳೂರು, ಆ.30: ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು, ಮೂಡಿಗೆರೆ ಹಾಗೂ ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯ ಕೆಲವೆಡೆ ವ್ಯಾಪಕವಾಗಿ ಹಾನಿಯಾಗಿದೆ. ಜಿಲ್ಲಾಡಳಿತ ಅತಿವೃಷ್ಟಿ ಹಾನಿ ಪ್ರದೇಶಗಳ ಸಮೀಕ್ಷೆಯಲ್ಲೂ ಜನಪ್ರತಿನಿಧಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಹಾಗೂ ಕಾಂಗ್ರೆಸ್ ನಾಯಕಿ ಮೋಟಮ್ಮ ಆರೋಪಿಸಿದ್ದಾರೆ.

ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯ ಆವತಿ ಹೋಬಳಿಯ ಕುಂಬಾರಹಳ್ಳಿ ಗ್ರಾಮದಲ್ಲಿ ಗುರುವಾರ ಅತುವೃಷ್ಟಿ ಹಾನಿ ಪರಿಶೀಲನೆ ಬಳಿಕ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯ ಅತಿವೃಷ್ಟಿಗೆ ಮೂಡಿಗೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದಲ್ಲಿ ಆಸ್ತಿಪಾಸ್ತಿ, ಬೆಳೆ ಹಾನಿ ಸಂಭವಿಸಿದೆ. ಆವತಿ ಹೋಬಳಿ ಕುಂಬಾರಹಳ್ಳಿಯಲ್ಲಿ ದೇವರಾಜ್ ಎಂಬವರ ತೋಟದಲ್ಲಿ ಭೂ ಕುಸಿತದಿಂದಾಗಿ ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ. ಕುಟುಂಬಸ್ಥರು ಹಾನಿಗೊಳಗಾದ ಮನೆ ತೊರೆದು ದನದ ಕೊಟ್ಟಿಗೆಯಲ್ಲಿ ವಾಸಿಸುತ್ತಿದ್ದಾರೆ. ತೋಟ ಭಾಗಶಃ ನಾಶವಾಗಿದೆ. ಭೂ ಕುಸಿತ ಮತ್ತೆ ಸಂಭವಿಸುವ ಅಪಾಯ ಸ್ಥಳದಲ್ಲಿದ್ದು, ಇದರಿಂದಾಗಿ ಸಮೀಪದ ಮನೆಗಳಿಗೂ ಹಾನಿಯಾಗುವ ಸಂಭವಿದೆ. ಆದರೆ ಘಟನೆ ನಡೆದು 15 ದಿನಗಲಾದರೂ ಯಾವ ಜನಪ್ರತಿನಿಧಿಗಳೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಅಧಿಕಾರಿಗಳು ಕೆಲವು ದಿನಗಳ ಬಳಿಕ ಭೇಟಿ ನೀಡಿದ್ದು, ಸಂತ್ರಸ್ಥರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದೆ. ತುರ್ತುಕ್ರಮಗಳನ್ನೂ ಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆಂದು ಆರೋಪಿಸಿದರು.

ಮೂಡಿಗೆರೆ ತಾಲೂಕು ವ್ಯಾಪ್ತಿಯ ಬಣಕಲ್, ಗೋಣಿಬೀಡು, ಕಳಸ ಹೋಬಳಿಗಳ ವ್ಯಾಪ್ತಿಯಲ್ಲಿ ಭಾರೀ ಹಾನಿ ಸಂಭವಿಸಿದೆ. ರಸ್ತೆ, ಮನೆಗಳು, ಸೇತುವೆಗಳಿಗೂ ಹಾನಿಯಾಗಿದ್ದು, ಕಳಸ ಸಮೀಪದ ಕೋಟೆಹೊಳೆ ಹಾಗೂ ಹೆಬ್ಬಾಳೆ ಸೇತುವೆಗಳು ಶಿಥಿಲಗೊಂಡಿವೆ. ಶೃಂಗೇರಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಬೆಳೆಹಾನಿ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಈ ಎರಡೂ ತಾಲೂಕುಗಳನ್ನು ಸರಕಾರ ಅತೀವೃಷ್ಠಿ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕೆಂದು ಇದೇ ವೇಳೆ ಒತ್ತಾಯಿಸಿದ ಅವರು, ಈ ಸಂಬಂಧ ಸಿಎಂಗೆ ಮನವಿ ಮಾಡಲಾಗಿದ್ದು, ಅವರು ಖುದ್ದು ಸ್ಥಳ ಪರಿಶೀಲನೆ ಬಳಿಕ ಜಿಲ್ಲೆಗೆ ವಿಶೇಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು.

ಕಾಮಗಾರಿಗಳ ಬದಲಾವಣೆಗೆ ಶಾಸಕ ಕುಮಾರಸ್ವಾಮಿ ಒತ್ತಡ: ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಿಲ್ಲೆಗೆ ಹೆಚ್ಚು ಅನುದಾನ ಬಂದಿದೆ. ಮೂಡಿಗೆರೆ ಕ್ಷೇತ್ರಕ್ಕೂ ತಾನು ವಿಧಾನ ಪರಿಷತ್ ಸದಸ್ಯೆಯಾಗಿದ್ದ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿದ್ದು, ಸಾಕಷ್ಟು ಕಾಮಗಾರಿಗಳಿಗೆ ಶಿಲಾನ್ಯಾಸವೂ ನಡೆದಿದೆ. ಆದರೆ ಮೂಡಿಗೆರೆ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಅವರು, ಈ ಕಾಮಗಾರಿಗಳ ಬದಲಾವಣೆಗೆ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾ ರಾಜಕೀಯ ಮಾಡುತ್ತಿದ್ದಾರೆಂಂದು ಮೋಟಮ್ಮ ಆರೋಪಿದರು.

ಮೂಡಿಗೆರೆ ತಾಲೂಕು ವ್ಯಾಪ್ತಿಯ ಹೆಸಗಲ್ ಗ್ರಾಪಂ ವ್ಯಾಪ್ತಿಯಲ್ಲಿ ಸಿಎಂ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ 1 ಕೋ. ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಕಾಮಗಾರಿಗಳಿಗೆ ಗ್ರಾಪಂ ನಿರ್ಣಯವನ್ನೂ ಮಾಡಿದೆ. ಆದರೆ ಶಾಸಕ ಕುಮಾರಸ್ವಾಮಿ ಈ ಕಾಮಗಾರಿಗಳ ಬದಲಾವಣೆಗೆ ಒತ್ತಡ ಹೇರುತ್ತಾ ಅಭಿವೃದ್ಧಿ ಕಾಮಗಾರಿಗಳಲ್ಲೂ ಹಸ್ತಕ್ಷೇಪ ಮಾಡುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆಂದ ಅವರು, ಜಕ್ಕಣಹಳ್ಳಿ-ಕಣತಿ ರಸ್ತೆ ಕಾಮಗಾರಿ ಬದಲಾವಣೆಗೆ ಸೂಚಿಸಿದ್ದಾರೆ. ಹಂಗರವಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ಭವನ ಕಾಮಗಾರಿಗೆ ಗ್ರಾಪಂ ನಿರ್ಣಯಮಾಡಿ, ಗುದ್ದಲಿಪೂಜೆ ಆಗಿದ್ದರೂ ಕಾಮಗಾರಿ ಬದಲಾವಣೆಗೆ ಶಾಸಕ ಒತ್ತಡ ಹೇರುತ್ತಿದ್ದಾರೆಂದು ಆರೋಪಿಸದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಹವ್ವಳ್ಳಿ ಕೃಷ್ಣೇಗೌಡ, ಜಿಪಂ ಸದಸ್ಯ ಪ್ರಭಾಕರ್‍ಗೌಡ, ಕುಮಾರ್‍ರಾಜೇ ಆರಸ್, ಶಿವಾನಂದ ಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News