ತನಿಖೆ ನೆಪದಲ್ಲಿ ಕರಗಡ ಯೋಜನೆ ತಡೆ ಹಿಡಿಯಲು ಸಿ.ಟಿ.ರವಿ ಸಂಚು: ವಿ.ಪರಿಷತ್ ಸದಸ್ಯ ಭೋಜೇಗೌಡ ಆರೋಪ

Update: 2018-08-30 12:01 GMT

ಚಿಕ್ಕಮಗಳೂರು, ಆ.30: ಕರಗಡ ಏತ ನೀರಾವರಿ ಯೋಜನೆ ಸಂಬಂಧ ಶಾಸಕ ಸಿ.ಟಿ.ರವಿ ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುವ ಸಲುವಾಗಿ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ಯೋಜನೆಯ ಮೊದಲಹಂತದ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಮೂಲಕ ಅವರು ಎರಡನೆ ಹಂತದ ಕಾಮಗಾರಿಗೆ ತಡೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಎಲ್.ಎಲ್.ಭೋಜೇಗೌಡ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯ ನೀರಾವರಿ ಹೋರಾಟ ಸಮಿತಿಯ ಮುಖಂಡರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿದ ಸಂದರ್ಭ ಜಿಲ್ಲೆಯ ಬಯಲುಸೀಮೆ ಭಾಗಗಳಲ್ಲಿ ನೀರಾವರಿ ಸಮಸ್ಯೆಯಿಂದಾಗಿರುವ ಪರಿಣಾಮಗಳ ಬಗ್ಗೆ ಚರ್ಚಿಸಲಾಗಿದೆ. ಈ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಅವರು ಕರಗಡ ಯೋಜನೆಯ 2ನೇ ಹಂತದ ಕಾಮಗಾರಿಗಳಿಗೆ 17.50 ಕೋ. ರೂ. ಅನುದಾನ ಮಂಜೂರು ಮಾಡಿದ್ದಾರೆ. ಆದರೆ ಸ್ಥಳೀಯ ಶಾಸಕ ಸಿ.ಟಿ.ರವಿ ಕಾಮಗಾರಿಗಳಲ್ಲಿ ಅವ್ಯವಹರ ನಡೆದಿದ್ದು, ಲೋಕಾಯುಕ್ತದಿಂದ ತನಿಖೆ ಆಗಬೇಕೆಂದು ಈಗ ಹೇಳುತ್ತಿದ್ದಾರೆ. ಕಳೆದ 12 ವರ್ಷಗಳ ಅವರ ಅಧಿಕಾರವಧಿಯಲ್ಲಿಯೇ ಕರಗಡ ಯೋಜನೆಯ ಬಹುತೇಕ ಕಾಮಗಾರಿಗಳು ನಡೆದಿವೆ. ಆಗ ಅವ್ಯವಹಾರದ ಬಗ್ಗೆ ಮಾತನಾಡದ ಸಿ.ಟಿ.ರವಿ ಪ್ರಸಕ್ತ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಈ ಮೂಲಕ ಅವರು ಕರಗಡ ಯೋಜನೆಯ 2ನೇ ಹಂತದ ಕಾಮಗಾರಿಗಳು ಪೂರ್ಣಗೊಳ್ಳುವುದನ್ನು ತಡೆ ಹಿಡಿಯುವ ಸಂಚು ಮಾಡುತ್ತಿದ್ದಾರೆಂದು ಆರೋಪಿಸಿದರು.

12 ವರ್ಷಗಳ ಹಿಂದೆ ಎಚ್‍ಡಿಕೆ ಅವರೇ 3.50 ಕೋ. ರೂ. ವೆಚ್ಚದ ಕರಗಡ ಯೋಜನೆಯ ಮೊದಲ ಹಂತದ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಅವರ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ ಸಿ.ಟಿ.ರವಿ ಅವರು ಶಾಸಕ, ಮಂತ್ರಿಯೂ ಆಗಿದ್ದರು. ಆ ಸಂದರ್ಭ ಈ ಯೋಜನೆಗೆ ಬಿಜೆಪಿ ಸರಕಾರ ಕೇವಲ 89 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಿದೆ. ಶಾಸಕ ರವಿ ಈ ಯೋಜನೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪರಿಣಾಮ 12 ವರ್ಷದಿಂದ ಯೋಜನೆ ಕುಟುಂತ್ತಾ ಸಾಗುತ್ತಿದ್ದು, ಪರಿಣಾಮ 3.50 ಕೋ. ರೂ. ಇದ್ದ ಯೋಜನೆಯ ವೆಚ್ಚ ಪ್ರಸಕ್ತ 17.50 ಕೋ.ರೂ. ಆಗಿದೆ ಎಂದು ಟೀಕಿಸಿದ ಅವರು, ಈ ಯೋಜನೆಯ ಅವ್ಯವಹಾರ ಸಿಟಿ ರವಿಗೆ ಈ ಹಿಂದೆ ಗೊತ್ತಿದ್ದರೂ ಚಕಾರ ಎತ್ತದ ಅವರು, ಪ್ರಸಕ್ತ ಅವ್ಯವಹಾರ ನಡೆದಿದೆ ಎನ್ನುವ ಮೂಲಕ ಅಭಿವೃದ್ಧಿ ಕೆಲಸದಲ್ಲೂ ರಾಜಕಾರಣ ಮಾಡಲು ಮುಂದಾಗುತ್ತಿದ್ದಾರೆ. ಇದರಿಂದ ನಷ್ಟವಾಗುವುದು ರೈತರಿಗೆ. ರೈತರ ಬದುಕಿನೊಂದಿಗೆ ರಾಜಕಾರಣ ಮಾಡುವುದನ್ನು ತಾನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.

ಸಿ.ಟಿ.ರವಿ ಅವ್ಯವಹಾರದ ನೆಪದಲ್ಲಿ ಕಾಮಗಾರಿ ತಡೆ ಹಿಡಿಯುವ ಸಂಚು ರೂಪಿಸಿರುವ ಶಂಕೆ ತಮ್ಮನ್ನು ಕಾಡುತ್ತಿದೆ. ಶಾಸಕರು ಇದುವರೆಗೂ ತೆಪ್ಪಗಿದ್ದು, ಈಗ ಅವ್ಯವಹಾರದ ಆರೋಪ ಮಾಡುತ್ತಿರುವುದು ಯಾರ ವಿರುದ್ಧ ಎಂದು ಪ್ರಶ್ನಿಸಿದ ಅವರು, ಕರಗಡ ಮೊದಲ ಹಂತದ ಕಾಮಗಾರಿ ನಡೆಸಿದ ಗುತ್ತಿಗೆದಾರರ ಮೇಲೆ ತನಗೆ ನಂಬಿಕೆ ಇಲ್ಲ. ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅವರು ಹೇಳುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡಿದ್ದರೆ ಕಾಲುವೆಗಳಲ್ಲಿ ನೀರು ಹರಿಯಬೇಕಿತ್ತು. ಆದರೆ ನೀರು ಹರಿಯುತ್ತಿಲ್ಲ. ಆದ್ದರಿಂದ 2ನೇ ಹಂತದ ಕಾಮಗಾರಿಗಳಿಗೆ ಸಿಎಂ ಅನುದಾನ ಮಂಜೂರು ಮಾಡಿರುವುದರಿಂದ ಬೇರೆ ಗುತ್ತಿಗೆದಾರರ ಮೂಲಕ ಕಾಮಗಾರಿಗಳನ್ನು ಕೈಗೊಳ್ಳಬೇಕು. ಅವ್ಯವಹಾರ ನಡೆದಿರುವ ಬಗ್ಗೆ ತನಿಖೆಗೆ ಈಗಾಗಲೇ ಸಿಎಂ ಸೂಚಿಸಿದ್ದು, ತನಿಖೆಯೊಂದಿಗೆ ಕಾಮಗಾರಿಗಳೂ ನಡೆಯಬೇಕು. ತನಿಖೆ ನೆಪದಲ್ಲಿ ಕಾಮಗಾರಿಗಳಿಗೆ ತಡೆ ನೀಡಿದರೆ ಈ ಭಾಗದ ರೈತರು ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಾರೆಂದು ಇದೇ ವೇಳೆ ಭೋಜೇಗೌಡ ಒತ್ತಾಯಿಸಿದರು.

ಜಿಲ್ಲೆಯ ಮಲೆನಾಡು ಭಾಗಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದರೂ ಕಡೂರು, ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಲಕ್ಯಾ, ಸಖರಾಯಪಟ್ಟಣ ಹೋಬಳಿಗಳ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ತೀವ್ರ ಬರದಿಂದ ರೈತರು ಕಂಗಾಲಾಗಿದ್ದಾರೆ. ಈ ಕಾರಣಕ್ಕೆ ಸದ್ಯ ತುಂಬಿರುವ ದೇವಲಕೆರೆಯ ನೀರನ್ನು 200 ಎಚ್.ಪಿ ಮೋಟಾರ್ ಮೂಲಕ ಪಂಪ್ ಮಾಡಿ ಬಯಲುಸೀಮೆ ಭಾಗದ ಎರಡು ಕೆರೆಗಳಿಗೆ ನೀರು ಹರಿಸಲು ಸಿಎಂ ಸೂಚಿಸಿದ್ದಾರೆಂದ ಅವರು, ಕರಗಡ ಯೋಜನೆಯ ಕಾಮಗಾರಿಗಳು ಅತೀ ಶೀಘ್ರದಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್ ಸರಕಾರ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಹರೀಶ್, ಭೈರೇಗೌಡ, ದೇವಿ ಪ್ರಸಾದ್, ಇರ್ಶಾದ್, ತನ್ಮಯ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕಮಗಳೂರು ನಗರದ ಬಸವನಹಳ್ಳಿ ಕೆರೆ, ಕೋಟೆ ಕೆರೆ ಕಾಮಗಾರಿಗಳೂ ಸೇರಿದಂತೆ ಎಂಜಿ ರಸ್ತೆ, ಅಂಬೇಡ್ಕರ್ ರಸ್ತೆ, ಒಳಚರಂಡಿ ಕಾಮಗಾರಿಗಳ ಅವ್ಯವಹಾರಗಳ ಬಗ್ಗೆ ಈಗಾಗಲೇ ತನಿಖೆ ಪ್ರಗತಿಯಲ್ಲಿದೆ. ಬಸವನಹಳ್ಳಿ ಕೆರೆ ಸಂಬಂಧ ಮತ್ತೆ 90 ಲಕ್ಷ ರ. ರೂ.ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗಳಿಂದ ಯಾವುದೇ ಪ್ರಯೋಜನವಿಲ್ಲ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಕಾಮಗಾರಿ ನಿಲ್ಲಿಸಲು ಕ್ರಮಕೈಗೊಳ್ಳಲಾಗುದು.
- ಎಸ್.ಎಲ್.ಭೋಜೇಗೌಡ

ಮೀಟರ್ ಬಡ್ಡಿ ದಂಧೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಈ ಸಂಬಂಧ ಸಾಧಕ ಬಾಧಕಗಳ ಚರ್ಚೆ ಮುಂದುವರಿದಿದ್ದು. ದಂಧೆಕೋರರಿಂದ ಸಾಲ ಪಡೆದವರಿಗೆ ರಕ್ಷಣೆ ನೀಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಷ್ಟ್ರಪತಿಗಳೊಂದಿಗೆ ಚರ್ಚಿಸಿ ಸುಗ್ರೀವಾಜ್ಞೆ ಮೂಲಕ ಆದೇಶ ಹೊರಡಿಸಲು ಸಿಎಂ ಚಿಂತಿಸಿದ್ದಾರೆ.
- ಎಸ್.ಎಲ್.ಭೋಜೇಗೌಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News