ಮಡಿಕೇರಿ: ಪರಿಹಾರ ಕೇಂದ್ರಗಳಿಗೆ ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಭೇಟಿ

Update: 2018-08-30 12:41 GMT

ಮಡಿಕೇರಿ, ಆ.30 : ಮಡಿಕೇರಿ ಹಾಗೂ ಸುಂಟಿಕೊಪ್ಪದಿಂದ ಸ್ಥಳಾಂತರಗೊಳಿಸಿರುವ ಸಂತ್ರಸ್ತರನ್ನು ಕುಶಾಲನಗರದ ವಾಲ್ಮೀಕಿ ಭವನ ಹಾಗೂ ಅಂಬೇಡ್ಕರ್ ಭವನದಲ್ಲಿ ಇರಿಸಲಾಗಿದ್ದು, ಪರಿಹಾರ ಕೇಂದ್ರಕ್ಕೆ ರಾಜ್ಯ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಹಾರ ಕೇಂದ್ರದಲ್ಲಿರುವ 392 ಮಂದಿ ನೆರೆ ಸಂತ್ರಸ್ತರ ಗೋಳನ್ನು ಆಲಿಸಿದ ನ್ಯಾಯಮೂರ್ತಿಗಳು, ಸ್ಥಳದಲ್ಲಿ ನಾಲ್ಕು ಗಂಟೆಗಳ ಕಾಲ ಇದ್ದು ನೆರೆ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಸಂತ್ರಸ್ತರೊಂದಿಗೆ ಮಾತನಾಡುತ್ತಾ, ತಾವುಗಳು ಸಹ ಅಧಿಕಾರಿಗಳೊಂದಿಗೆ ಹೊಂದಿಕೊಂಡು ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರಲ್ಲದೆ, ಪರಿಹಾರ ಕೇಂದ್ರದ ಸಣ್ಣಪುಟ್ಟ ಸಮಸ್ಯೆಗಳನ್ನು ಎಲ್ಲರೂ ಒಗ್ಗೂಡಿ ನಿವಾರಣೆ ಮಾಡಿಕೊಳ್ಳಬೇಕೆಂದರು.  

ಈ ಸಂದರ್ಭ ಸ್ಥಳದಲ್ಲಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ತಾಲೂಕು ತಹಶೀಲ್ದಾರ್ ಹಾಗೂ ತಾಲೂಕು ಪರಿಹಾರ ಕೇಂದ್ರದ ನೋಡಲ್ ಅಧಿಕಾರಿಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಸೂಚನೆ ನೀಡಿದರು.

ಈ ಸಂದರ್ಭ ತಾಲೂಕು ಉಸ್ತುವಾರಿ ಅಧಿಕಾರಿ  ರಿಚರ್ಡ್ ವಿನ್ಸೆಂಟ್ ಡಿಸೋಜ, ಲೋಕಾಯುಕ್ತದ ಕಾರ್ಯದರ್ಶಿ ವಿಜಯ್ ಕುಮಾರ್ ರೈ, ಲೋಕಾಯುಕ್ತದ ಅಧಿಕಾರಿಗಳಾದ ಕೆ.ಎನ್.ಮಹೇಶ್, ಎಸ್.ಪಿ.ಮಂಜುನಾಥ್, ಲೋಕಾಯುಕ್ತ ಡಿ.ವೈ.ಎಸ್.ಪಿಗಳಾದ ಉಡುಪಿಯ ಜಗದೀಶ್, ಧಾರವಾಡದ ಶಿವಕುಮಾರ್, ಮೈಸೂರಿನ ಅರುಣ್ ನಾಗೇಗೌಡ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News