ಕೇರಳಕ್ಕೆ ವಿದೇಶಿ ನೆರವು ಪಡೆದುಕೊಳ್ಳಲು ಕಾನೂನು ಕ್ರಮ:ಪಿಣರಾಯಿ ವಿಜಯನ್

Update: 2018-08-30 14:19 GMT

ತಿರುವನಂತಪುರ,ಆ.30: ಪ್ರಕೃತಿ ವಿಕೋಪದಿಂದ ನಲುಗಿರುವ ಬದುಕನ್ನು ಕಟ್ಟಿಕೊಳ್ಳಲು ಕೇರಳಿಗರ ಹೆಣಗಾಟದ ನಡುವೆಯೇ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ವಿದೇಶಗಳಿಂದ ಸೇರಿದಂತೆ ರಾಜ್ಯದ ಮುಂದಿರುವ ಆರ್ಥಿಕ ನೆರವಿನ ಕೊಡುಗೆಗಳನ್ನು ಪಡೆದುಕೊಳ್ಳಲು ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯನ್ನು ಸರಕಾರವು ಪರಿಶೀಲಿಸುತ್ತಿದೆ ಎಂದು ಗುರುವಾರ ಇಲ್ಲಿ ತಿಳಿಸಿದರು.

ಯುಎಇ ಕೇರಳಕ್ಕೆ ನೀಡಲು ಮುಂದಾಗಿತ್ತೆನ್ನಲಾದ 700 ಕೋ.ರೂ.ಗಳ ಆರ್ಥಿಕ ನೆರವಿನ ಸ್ವೀಕೃತಿಗೆ ಕೇಂದ್ರ ಸರಕಾರದ ನಿರಾಕರಣೆ ಕುರಿತು ವಿವಾದದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.

 ಅಭೂತಪೂರ್ವ ನೆರೆ ಸ್ಥಿತಿಯ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಾತನಾಡುತ್ತಿದ್ದ ವಿಜಯನ್,ರಾಜ್ಯದಲ್ಲಿ ಮೇ 28ರಂದು ಮುಂಗಾರು ಮಳೆ ಆರಂಭಗೊಂಡಾಗಿನಿಂದ 483 ಜನರು ಮೃತಪಟ್ಟಿದ್ದಾರೆ ಮತ್ತು 14 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಕೇರಳದ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿದ್ದು,ಹಾನಿಯ ಪ್ರಮಾಣವು 37,247.99 ಕೋ.ರೂ.ಗಳ ರಾಜ್ಯದ ವಾರ್ಷಿಕ ಯೋಜನಾ ಗಾತ್ರವನ್ನೂ ಮೀರಬಹುದು. ವಿಶ್ವದ ವಿವಿಧೆಡೆಗಳಿಂದ ರಾಜ್ಯಕ್ಕೆ ಆರ್ಥಿಕ ನೆರವಿನ ಕೊಡುಗೆಗಳ ಮಹಾಪೂರವೇ ಹರಿದುಬರುತ್ತಿದೆ ಮತ್ತು ಇವುಗಳನ್ನು ಪಡೆದುಕೊಳ್ಳಲು ಕಾನೂನು ಕ್ರಮಗಳನ್ನು ಸರಕಾರವು ಪರಿಶೀಲಿಸುತ್ತಿದೆ. ಈ ಕೊಡುಗೆಗಳು ಸರಕಾರದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿವೆ ಎಂದು ಹೇಳಿದರು.

ಪರಿಸ್ಥಿತಿಯ ಗಂಭೀರತೆಯ ಹಿನ್ನೆಲೆಯಲ್ಲಿ ಕೇಂದ್ರವು ಈಗಾಗಲೇ ಮಂಜೂರು ಮಾಡಿರುವ 600 ಕೋ.ರೂ.ಗಳ ಜೊತೆಗೆ ಇನ್ನಷ್ಟು ಆರ್ಥಿಕ ನೆರವನ್ನು ನೀಡುವುದೆಂದು ರಾಜ್ಯವು ಆಶಿಸಿದೆ ಎಂದ ಅವರು,ಬುಧವಾರದವರೆಗೆ ಮುಖ್ಯಮಂತ್ರಿಗಳ ವಿಕೋಪ ಪರಿಹಾರ ನಿಧಿಯು 730 ಕೋ.ರೂ.ಗಳನ್ನು ಸ್ವೀಕರಿಸಿದೆ. ಇದರ ಜೊತೆಗೆ ಭೂಮಿ ಮತ್ತು ಚಿನ್ನಾಭರಣಗಳ ಕೊಡುಗೆಗಳೂ ಬರುತ್ತಿವೆ ಎಂದರು.

ರಾಜ್ಯದ ಪುನರ್‌ನಿರ್ಮಾಣಕ್ಕಾಗಿ ಹಣಕಾಸು ಕ್ರೋಢೀಕರಣದ ಭಾಗವಾಗಿ ವಿಶ್ವಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆಗಳ ಕುರಿತಂತೆ ವಿಜಯನ್,ನೆರವು ರಾಜ್ಯದ ಹಿತಾಸಕ್ತಿಗಳಿಗೆ ಅನುಗುಣವಾಗಿದ್ದರೆ ಅದು ಎಲ್ಲಿಂದ ಬಂದರೂ ಸ್ವೀಕರಿಸುವುದು ಸರಕಾರದ ನೀತಿಯಾಗಿದೆ ಎಂದು ಹೇಳಿದರು.

ಯಾವುದೇ ಮುನ್ನೆಚ್ಚರಿಕೆ ನೀಡದೆ ಜಲಾಶಯಗಳಿಂದ ನೀರನ್ನು ಬಿಡುಗಡೆಗೊಳಿಸಿದ್ದು ಪ್ರವಾಹಕ್ಕೆ ಕಾರಣವಾಗಿತ್ತು ಎಂಬ ಪ್ರತಿಪಕ್ಷದ ಆರೋಪಗಳ ಕುರಿತಂತೆ ಅವರು,ಅನಿರೀಕ್ಷಿತವಾಗಿ ಸುರಿದ ಭಾಳೆ ಮಳೆ ದುರಂತಕ್ಕೆ ಕಾರಣವಾಗಿತ್ತು. ಈ ಅವಧಿಯಲ್ಲಿ ಹವಾಮಾನ ಇಲಾಖೆಯು ಭವಿಷ್ಯ ನುಡಿದಿದ್ದಕ್ಕಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿತ್ತು ಎಂದು ಬೆಟ್ಟು ಮಾಡಿದರು.

57,000 ಹೆಕ್ಟೇರ್ ಕೃಷಿಭೂಮಿ ಪ್ರವಾಹದಲ್ಲಿ ಮುಳುಗಿದ್ದು,ಸಮರೋಪಾದಿಯಲ್ಲಿ ನಡೆಸಲಾದ ರಕ್ಷಣಾ ಕಾರ್ಯಾಚರಣೆಗಳಿಂದ ಸಾವಿನ ಸಂಖ್ಯೆ ಕಡಿಮೆಯಾಗಿದೆ ಎಂದರು.

14.50 ಲಕ್ಷ ಜನರು ನಿರಾಶ್ರಿತರಾಗಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುವಂತಾಗಿತ್ತು. ಈಗಲೂ 59,000ಕ್ಕೂ ಅಧಿಕ ಜನರು 305 ಶಿಬಿರಗಳಲ್ಲಿದ್ದಾರೆ ಎಂದ ಅವರು,ದುರಂತದ ತೀವ್ರತೆಯು ಪರಿಸರಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಗಳನ್ನೆತ್ತಿದೆ. ನಿರ್ವಸಿತರನ್ನು ಭೂಕುಸಿತಗಳು ಸಂಭವಿಸಿದ್ದ ಅದೇ ಪ್ರದೇಶಗಳಲ್ಲಿ ಪುನರ್ವಸತಿಗೊಳಿಸಬೇಕೇ ಎನ್ನುವುದು ಅವುಗಳಲ್ಲಿ ಮುಖ್ಯವಾಗಿದೆ. ಈ ಬಗ್ಗೆ ಒಮ್ಮತವನ್ನು ರೂಪಿಸಬೇಕಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News