ದೇಶಭ್ರಷ್ಟರ ಸ್ವಾಗತಕ್ಕೆ ಸಜ್ಜಾಗುತ್ತಿದೆ ಆರ್ಥರ್ ಜೈಲು !

Update: 2018-08-31 03:57 GMT

ಮುಂಬೈ, ಆ. 31: ಭಾರತದ ಜೈಲುಗಳ ಸ್ಥಿತಿ ದಯನೀಯವಾಗಿದೆ ಎಂದು ಬಹುಕೋಟಿ ವಂಚನೆ ಆರೋಪಿ, ದೇಶಭ್ರಷ್ಟ ವಿಜಯ್ ಮಲ್ಯ ಆರೋಪ ಮಾಡಿರುವ ಹಿನ್ನೆಲೆಯಲ್ಲಿ, ಕೈದಿಗಳ ಹಕ್ಕಿನ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಸಾರವಾಗಿ ಇಲ್ಲಿನ ಆರ್ಥರ್ ಜೈಲಿನಲ್ಲಿ ಹೊಸ ಬ್ಲಾಕ್ ನಿರ್ಮಾಣ ಮಾಡಲಾಗುತ್ತಿದೆ.

ಮುಂಬೈ ಹೃದಯಭಾಗದಲ್ಲಿರುವ 93 ವರ್ಷದ ಈ ಹಳೆ ಜೈಲಿನಲ್ಲಿ ನೆಲ ಅಂತಸ್ತು ಮತ್ತು ಒಂದು ಮಹಡಿ ನಿರ್ಮಾಣವಿದ್ದು, ಇದನ್ನು ಧ್ವಂಸಗೊಳಿಸಿ, ನೆಲಮಹಡಿ ಮತ್ತು ಮೊದಲನೇ ಮಹಡಿಯಲ್ಲಿ ಹನ್ನೆರಡು ಸೆಲ್‌ಗಳನ್ನು ಒಳಗೊಂಡ ಹೊಸ ಬ್ಲಾಕ್‌ ಹಾಗೂ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದೆ. ಈ ನಿರ್ಮಾಣ ಕಾರ್ಯ ಆರು ತಿಂಗಳಲ್ಲಿ ಮುಕ್ತಾಯವಾಗಲಿದ್ದು, ದೇಶಭ್ರಷ್ಟ ಕೋಟ್ಯಧಿಪತಿಗಳನ್ನು ವಾಪಾಸು ಕರೆಸಿ, ಈ ಸೆಲ್‌ಗಳಲ್ಲಿಟ್ಟು ವಿಚಾರಣೆ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ಹೇಳಿವೆ.

"ಈ ಸೆಲ್‌ಗಳು ಯೂರೋಪಿಯನ್ ಮತ್ತು ಬ್ರಿಟನ್ ಕಾರಾಗೃಹ ಮಾನದಂಡಕ್ಕೆ ಅನುಗುಣವಾಗಿದ್ದು, ಎಲ್ಲ ಮಾನವಹಕ್ಕು ಮಾನದಂಡಗಳನ್ನೂ ತಲುಪುವಂತೆ ಸುಸಜ್ಜಿತಗೊಳಿಸಲಾಗುತ್ತದೆ. ಲೋಕೋಪಯೋಗಿ ಇಲಾಖೆ ಈಗಾಗಲೇ ಹಳೆಯ ಕಟ್ಟಡ ತೆರವುಗೊಳಿಸಲು ಟೆಂಡರ್ ಕರೆದಿದೆ" ಎಂದು ಸ್ಪಷ್ಟಪಡಿಸಿವೆ.

"ಜಾಗತಿಕ ಮಾನದಂಡಕ್ಕೆ ಅನುಗುಣವಾಗಿ ನಿರ್ಮಾಣವಾದ ಕೆಲವೇ ಸೆಲ್‌ಗಳು ಸದ್ಯಕ್ಕಿವೆ. ಆದ್ದರಿಂದ ಗಡೀಪಾರುಗೊಂಡ ಕಳ್ಳಸಾಗಾಣಿಕೆದಾರರು, ವಂಚಕರು ಮತ್ತು ವಿದೇಶಗಳಲ್ಲಿ ಅವಿತುಕೊಂಡವರಿಗಾಗಿ ಹೆಚ್ಚು ಆಧುನಿಕ ಸೆಲ್‌ಗಳನ್ನು ನಿರ್ಮಿಸುತ್ತಿದ್ದೇವೆ. ಭಾರತದಲ್ಲಿ ಜೈಲಿನ ಗುಣಮಟ್ಟ ದಯನೀಯವಾಗಿದೆ ಎಂಬ ಸಬೂಬು ಹೇಳುವ ಪ್ರವೃತ್ತಿಯನ್ನು ಇದು ಕೊನೆಗೊಳಿಸಲಿದೆ" ಎಂದು ಅಧಿಕಾರಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News