ಗೌರಿಕಾಲುವೆಯಲ್ಲಿ ಜಾಗ ಒತ್ತುವರಿ ಪ್ರಕರಣ: ನಗರಸಭೆ ಪರವಾಗಿ ನ್ಯಾಯಾಲಯ ತೀರ್ಪು; ಲೀಲಾ

Update: 2018-08-31 12:11 GMT

ಚಿಕ್ಕಮಗಳೂರು, ಆ.31: ನಗರದ ಗೌರಿ ಕಾಲುವೆ ಬಡಾವಣೆಯಲ್ಲಿದ್ದ ನಗರಸಭೆಗೆ ಸೇರಿದ್ದ ಸರಕಾರಿ ಜಾಗವನ್ನು ಸ್ಥಳೀಯರು ಒತ್ತುವರಿ ಮಾಡಿಕೊಂಡಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ 6 ಪ್ರಕರಣಗಳ ವಿಚಾರಣೆ ನಡೆದಿದೆ. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ ನಗರಸಭೆ ಪರವಾಗಿ ತೀರ್ಪು ಬಂದಿದ್ದು, ಸರಕಾರಿ ಜಾಗವನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರಸಭೆ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಲೀಲಾ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಕಾಲುವೆ ಬಡಾವಣೆಯ ವಾರ್ಡ್ ಸಂಖ್ಯೆ 30ರಲ್ಲಿರುವ ಜಯಪ್ರಕಾಶ್ ನಾರಾಯಣ್ ಹೆಸರಿನ ಪಾರ್ಕ್‍ನ 1 ಎಕರೆ 20 ಗುಂಟೆ ಜಾಗವನ್ನು ಸ್ಥಳೀಯ ನಿವಾಸಿಯಾದ ಗೀತಾ ಎಂಬವರು ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿ ತೆರವಿಗೆ ಮುಂದಾದಾಗ ಅವರು ಜಿಲ್ಲಾನ್ಯಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದರು. ಈ ಸಂಬಂಧ ತಾನು ನಗರಸಭೆ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಿದ್ದು, ಈ ಬಗ್ಗೆ ಇತ್ತೀಚೆಗೆ ಜಿಲ್ಲಾ ನ್ಯಾಯಾಲಯದಲ್ಲಿ ವಿಚಾರಣೆ ಪೂರ್ಣಗೊಂಡು ನ್ಯಾಯಾಲಯ ನಗರಸಭೆ ಪರವಾಗಿ ತೀರ್ಪು ನೀಡಿದೆ. ಒತ್ತುವರಿಯಾಗಿದ್ದ ಜಾಗವನ್ನು ನಗರಸಭೆ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಹಾಗೆಯೇ ವಾರ್ಡ್ ನಂ.30ರಲ್ಲಿ ಸಿಂಗಾರ ನಿಲಯ ಪಾರ್ಕ್‍ನ 1 ಎಕರೆ ಜಾಗ ಸಂಬಂದ 6 ಮಂದಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ಈ ಪೈಕಿ ಐವರು ದಾವೆ ಹಿಂಪಡೆದಿದ್ದರು. ಆದರೆ ರೀಟಾ ಫಯಾಸ್ ಎಂಬವರು ದಾವೆ ಮುಂದುವರಿಸಿದ್ದು, ಇದರ ವಿಚಾರಣೆ ನಡೆದು ನ್ಯಾಯಾಲಯ ನಗರಸಭೆ ಪರವಾಗಿ ಜೂ.22ರಂದು ತೀರ್ಪು ನೀಡಿದೆ. ಇದೇ ವಾರ್ಡ್‍ನ ನಿವಾಸಿ ರಾಮಶೆಟ್ಟಿ ಎಂಬವರು ಬಡಾವಣೆಯ ಅಡ್ಡರಸ್ತೆಯಲ್ಲಿರುವ ಸ.ನಂ.57ರಲ್ಲಿದ್ದ ನಗರಸಭೆ ಜಾಗವನ್ನು ಮಾರಾಟ ಮಾಡಲು ಮುಂದಾಗಿದ್ದರು. ಆದರೆ ತಾನು ಇದಕ್ಕೆ ಅವಕಾಶ ನೀಡದೇ ನ್ಯಾಯಾಲಯದ ಮೂಲಕ ಹೋರಾಟ ಮಾಡಲು ಮುಂದಾದಾಗ ಒತ್ತುವರಿದಾರರು ಸಾಕಷ್ಟು ಬೆದರಿಕೆ, ಒತ್ತಡ ಹಾಕಲಾರಂಭಿಸಿದ್ದರೂ, ಇದ್ಯಾವುದಕ್ಕೂ ಬಗ್ಗದ ತಾನು ನಗರಸಭೆ ವಶಕ್ಕೆ ಜಾಗ ಬಿಡಿಸಿಕೊಳ್ಳಲು ಯಶಸ್ವಿಯಾಗಿದ್ದೇನೆ. ಸದ್ಯ ಈ ಜಾಗವನ್ನು ನಗರಸಭೆ ಪಾರ್ಕನ್ನಾಗಿ ಪರಿವರ್ತಿಸಲಾಗಿದೆ ಎಂದ ಅವರು, ಬಡಾವಣೆಯ ಸ.ನಂ.75ರ ಜಾಗವನ್ನು ಒತ್ತುವರಿ ಮಾಡಿ ಮನೆಕಟ್ಟಲು ಸ್ಥಳೀಯರೊಬ್ಬರು ಮುಂದಾದಾಗಲೂ ಅದನ್ನು ನ್ಯಾಯಾಲಯದ ಮೂಲಕ ವಶಕ್ಕೆ ಪಡೆಯಲಾಗಿದೆ ಎಂದರು.

ಗೌರಿ ಕಾಲುವೆಯ ಚರ್ಚ್ ಮುಂಭಾಗದಲ್ಲಿರು ಖಾಲಿ ನಿವೇಶನಗಳನ್ನು ನಗರಸಭೆ ಹರಾಜು ಹಾಕಲು ಮುಂದಾದಾಗ ಸ್ಥಳೀಯ 6 ಮಂದಿ ನಿವಾಸಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದರು. ನ್ಯಾಯಾಲಯ ಇದರ ವಿಚಾರಣೆ ನಡೆಸಿ ನಗರಸಭೆ ಪರ ತೀರ್ಪು ನೀಡಿದ್ದರಿಂದ ನಿವೇಶನ ಜಾಗ ನಗರಸಭೆಯ ವಶಕ್ಕೆ ಬಂದಿದೆ. ಗೌರಿ ಕಾಲುವೆ ಬಡಾವಣೆಯಲ್ಲಿರುವ ನಗರಸಭೆ ಜಾಗ ಒತ್ತುವರಿ ಸಂಬಂಧ ಇನ್ನೂ ಎರಡೂ ಪ್ರಕರಣಗಳು ಜಿಲ್ಲಾನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದ ಅವರು, ಈ ಪ್ರಕರಣಗಳಲ್ಲೂ ತಮಗೆ ಜಯ ಸಿಗುವ ವಿಶ್ವಾಸವಿದೆ ಎಂದರು.

ನಗರಸಭೆ ಜಾಗವನ್ನು ನ್ಯಾಯಾಲಯದ ಮೂಲಕ ವಶಕ್ಕೆ ಪಡೆಯುವಲ್ಲಿ ಕ್ಷೇತ್ರದ ಶಾಸಕರು, ನಗರಸಭೆ ಸದಸ್ಯರು, ಅಧಕಾರಿಗಳು ಸಹಕಾರ ನೀಡಿದ್ದಾರೆಂದ ಅವರು, ಪ್ರಕರಣಗಳ ಬಗ್ಗೆ ನಗರಸಭೆ ವಕೀಲ ಉತ್ತಯ್ಯ ಅವರು ನಗರಸಭೆ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌರಿ ಕಾಲುವೆ ನಿವಾಸಿ ವೆಂಕಟೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News