ಕೊಡಗು ಮಳೆಹಾನಿ: ಸ್ವಂತ ನೆಲೆಗಾಗಿ ಹಾತೊರೆಯುತ್ತಿರುವ ದು:ಖದ ಮನಸ್ಸುಗಳು

Update: 2018-08-31 13:06 GMT

ಮಡಿಕೇರಿ, ಆ.31: ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಸುರಿದ ಭಾರೀ ಮಳೆಯ ತೀವ್ರತೆ ಗಣನೀಯ ಮಟ್ಟದಲ್ಲಿ ಕುಸಿದು, ಪ್ರಾಕೃತಿಕ ವಿಕೋಪದ ಆತಂಕ ನಿಧಾನವಾಗಿ ದೂರಾಗುತ್ತಿರುವ ಹಂತದಲ್ಲೆ ಬದುಕಿನ ಭೂಮಿ, ನೆರಳಿನ ಮನೆ ಕಳೆದುಕೊಂಡ ಸಂತ್ರಸ್ತರಲ್ಲಿ ಶಾಶ್ವತ ನೆಲೆ ಕಂಡುಕೊಳ್ಳುವ ಆತುರ ಹೆಚ್ಚಾಗುತ್ತಿದೆ.

ಮಹಾಮಳೆಯಿಂದ ಉಂಟಾದ ಭೂಕುಸಿತ ಮತ್ತು ಕೆಸರಿನಾರ್ಭಟಕ್ಕೆ ಊರನ್ನು ತೊರೆದು ಬಂದ ನೂರಾರು ಸಂತ್ರಸ್ತರು, ಮಳೆಯ ಬಿಡುವಿನ ಹಿನ್ನೆಲೆಯಲ್ಲಿ ತಮ್ಮ ತಮ್ಮ ಗ್ರಾಮಗಳತ್ತ ಹೆಜ್ಜೆ ಹಾಕಿ, ಮತ್ತೆ ಗ್ರಾಮದಲ್ಲಿ ವಾಸ ಮಾಡಬಹುದೇ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ತೋಟಗಳು ಯಥಾಸ್ಥಿತಿಯಲ್ಲಿ ಇದೆಯೇ ಅಥವಾ ಕೊಚ್ಚಿ ಹೋಗಿದೆಯೇ ಎನ್ನುವ ಬಗ್ಗೆಯೂ ಕುತೂಹಲಿಗರಾದ ಗ್ರಾಮಸ್ಥರು ತಮ್ಮ ತಮ್ಮ ತವರು ಗ್ರಾಮಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕಡಿದಾದ ಬೆಟ್ಟ ಪ್ರದೇಶಗಳಲ್ಲಿರುವ ಎರಡನೇ ಮೊಣ್ಣಂಗೇರಿ ಗ್ರಾಮದ ನಿವಾಸಿ ಕುಡಿಯರ ಕೆ.ದೇವಯ್ಯ ಅವರು, 'ತಾವು ತಮ್ಮ ಕುಟುಂಬದೊಂದಿಗೆ ನಗರದ ಮೈತ್ರಿ ಭವನದ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇವರು ದಿನದ ಹಿಂದೆಯಷ್ಟೆ ಕಾಲ್ನಡಿಗೆಯಲ್ಲಿ ಗ್ರಾಮದತ್ತ ಹೆಜ್ಜೆ ಹಾಕಿ ಬಂದಿದ್ದಾರೆ. ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಇವರ ಮನೆ ಸಂಪೂರ್ಣ ಕುಸಿದು ಬಿದ್ದಿದ್ದು, ಕಷ್ಟಪಟ್ಟು ಮಾಡಿದ್ದ ಕಾಫಿ, ಅಡಿಕೆ ಮೊದಲಾದ ಕೃಷಿಗೆ ಹಾನಿಯಾಗಿದ್ದರೂ, ತೋಟ ಹಾಗೆ ಇದೆ ಎನ್ನುವ ನೆಮ್ಮದಿ ಅವರ ಮಾತಲ್ಲಿ ವ್ಯಕ್ತವಾಯಿತು.

‘ಮಳೆ ಕಳೆಯುವವರೆಗೆ ಜಿಲ್ಲಾಡಳಿತ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದಲ್ಲಿ, ಬಳಿಕ ತಮ್ಮ ಗ್ರಾಮಕ್ಕೆ ತೆರಳುವುದು ಅನಿವಾರ್ಯ. ಗ್ರಾಮದಲ್ಲೆ ಮನೆಗಳನ್ನು ನಿರ್ಮಿಸಿಕೊಡುವುದು ಒಳಿತು. ನಮ್ಮ ಊರಲ್ಲೆ ಕೃಷಿ ಚಟುವಟಿಕೆಗಳನ್ನು ಮತ್ತೆ ಮಾಡುವ ಮೂಲಕ ಬದುಕು ಕಟ್ಟಿಕೊಳ್ಳುತ್ತೇವೆ’ ಎನ್ನುತ್ತಾರೆ ಕುಡಿಯರ ದೇವಯ್ಯ.

ಮಂಗಳೂರು ರಸ್ತೆಯ ಮದೆನಾಡು ವಿಭಾಗಕ್ಕಾಗಿ ಬೆಟ್ಟ ಪ್ರದೇಶದ ಒಂದನೇ ಮತ್ತು ಎರಡನೇ ಮೊಣ್ಣಂಗೇರಿಗೆ ಅಲ್ಲಿನ ನಿವಾಸಿಗಳು ಹಿಂದೆ ತೆರಳುತ್ತಿದ್ದು. ಪ್ರಸ್ತುತ ಮಂಗಳೂರು ರಸ್ತೆಗಾಗಿ ಸಂಪರ್ಕ ಕಡಿತವಾಗಿರುವುದರಿಂದ, ಈ ಗ್ರಾಮಗಳ ಮಂದಿ ಗಾಳಿಬೀಡು ಮಾರ್ಗವಾಗಿ ಕಾಲ್ನಡಿಗೆಯ ಮೂಲಕ ತಮ್ಮ ಗ್ರಾಮಕ್ಕೆ ತೆರಳಬೇಕಾದ ಅನಿವಾರ್ಯತೆ ಇದೆ.

ಕುಸಿದು ಬಿದ್ದ ಮನೆಗಳೆಷ್ಟೋ..: ಗಾಳಿಬೀಡು ಪಂಚಾಯತ್ ಗೆ ಒತ್ತಿಕೊಂಡಂತೆ ಇರುವ ಹೆಬ್ಬೆಟ್ಟಗೇರಿ ಗ್ರಾಮ, ಅತೀ ಹೆಚ್ಚು ಹಾನಿಗೆ ಒಳಗಾಗಿರುವ ಗ್ರಾಮಗಳಲ್ಲಿ ಒಂದು. ಬೆಟ್ಟಕ್ಕೆ ಬೆಟ್ಟವೇ ಕುಸಿದು ಹಲವರ ತೋಟ, ಮನೆಗಳು ಸರ್ವನಾಶವಾಗಿದ್ದು, ಗ್ರಾಮದ ಹಲವು ಮಂದಿ ನಗರದ ಪುನರ್ವಸತಿ ಕೇಂದ್ರ, ಬಂಧು ಬಾಂಧವರ ಮನೆಗಳಲ್ಲಿ ನೆಲೆಸಿದ್ದಾರೆ. 

ಆಕಾಶವೇ ಕಳಚಿ ಬಿದ್ದಂತೆ ಸುರಿದ ಮಳೆ, ಹಠಾತ್ತನೆ ಜಾರಿದ ಬೆಟ್ಟ, ಕುಸಿದು ಕೊಚ್ಚಿ ಹೋದ ಮನೆಗಳ ನಿವಾಸಿಗಳಿಗೆ ತಮ್ಮ ಜಾಗ, ಮನೆ ಇದ್ದ ಪ್ರದೇಶವನ್ನೆ ಗುರುತಿಸಲಾಗದ ಸ್ಥಿತಿ ಹಾನಿಗೀಡಾದ ಪ್ರದೇಶದಲ್ಲಿದೆ. ಹಲವಾರು ಮಂದಿ ತಮ್ಮ ಬದುಕು ರೂಪಿಸಿಕೊಂಡ ಜಾಗ, ಮನೆಗಳ ದಾಖಲೆಗಳನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಇಂತಹ ಕುಟುಂಬಗಳಿಗೆ ಮಾನವೀಯ ನೆಲೆ ಗಟ್ಟಿನಲ್ಲಿ ನೆರವು ಅತ್ಯವಶ್ಯವಾಗಿದ್ದು, ಜಿಲ್ಲಾಡಳಿತ ಮತ್ತು ಸರಕಾರದ ಮೇಲೆ ಸಂತ್ರಸ್ತರ ವಿಶ್ವಾಸ ಹೆಚ್ಚಾಗುತ್ತಲೇ ಇದೆ. ಆದರೆ ಎಲ್ಲವನ್ನೂ ಕಳೆದುಕೊಂಡ ದು:ಖದ ಮನಸ್ಸುಗಳು ಸ್ವಂತ ಆಶ್ರಯಕ್ಕಾಗಿ ಹಾತೊರೆಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News