ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ: ಬಹುತೇಕ ಶಾಂತಿಯುತ ಮತದಾನ

Update: 2018-08-31 17:41 GMT

ಶಿವಮೊಗ್ಗ, ಆ. 30: ಶಿವಮೊಗ್ಗ ಮಹಾನಗರ ಪಾಲಿಕೆಯ 35 ವಾರ್ಡ್‍ಗಳಿಗೆ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯು, ಯಾವುದೇ ಗೊಂದಲ - ಗಡಿಬಿಡಿಗೆ ಆಸ್ಪದವಾಗದಂತೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಮಳೆ ಕೂಡ ಬಿಡುವು ನೀಡಿದ್ದರಿಂದ ಮತದಾರರು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. 

ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಎಲ್ಲ ಮತಗಟ್ಟೆಗಳಲ್ಲಿ ಮತದಾನ ಆರಂಭವಾಯಿತು. ವಾರ್ಡ್ 1 ರ ಮತಗಟ್ಟೆ ಸಂಖ್ಯೆ 3 ರಲ್ಲಿ ಮತಯಂತ್ರದಲ್ಲಿನ ತಾಂತ್ರಿಕ ಕಾರಣಗಳಿಂದ ಕೆಲ ಸಮಯ ಮತದಾನ ಸ್ಥಗಿತವಾಗಿತ್ತು. ತಕ್ಷಣ ಅದನ್ನು ದುರಸ್ತಿಗೊಳಿಸಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. 
ಜಿ.ಪಂ. ಪಂಚಾಯತ್ ಕಚೇರಿ ಮತಗಟ್ಟೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್, ಪಕ್ಷಗಳ ಚಿಹ್ನೆಯಿರುವ ಮತದಾನದ ಸ್ಲಿಪ್ ನೀಡುತ್ತಿವೆ ಎಂದು ಆರೋಪಿಸಿ ಬಿಜೆಪಿಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದ ಘಟನೆಯೂ ನಡೆಯಿತು. ಕೆಲ ವಾರ್ಡ್‍ಗಳಲ್ಲಿ ಅಭ್ಯರ್ಥಿಗಳ ಬೆಂಬಲಿಗರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿಯಂತಹ ಘಟನೆಗಳು ನಡೆದಿರುವ ಮಾಹಿತಿಗಳು ಬಂದಿವೆ. 

ಬಿರುಸು: 001ಮಧ್ಯಮ ವರ್ಗ, ಸ್ಲಂ, ಗ್ರಾಮೀಣ ಪ್ರದೇಶ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಅತ್ಯಂತ ಉತ್ಸಾಹದಿಂದ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಕೆಲ ಪ್ರತಿಷ್ಠಿತ ಬಡಾವಣೆಗಳ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಬೆಳಿಗ್ಗೆಯ ವೇಳೆ ಮತದಾನ ಪ್ರಕ್ರಿಯೆ ನೀರಸವಾಗಿತ್ತು. ಸುಮಾರು 11 ಗಂಟೆಯ ನಂತರ ಮತದಾನ ಪ್ರಕ್ರಿಯೆ ಬಿರುಸುಗೊಂಡಿತು. 
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತಯಂತ್ರಗಳ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರ ಕೂಡ ಮುದ್ರಿಸಲಾಗಿತ್ತು. ಇದರಿಂದ ಮತದಾರರಿಗೆ ತಮಗೆ ಇಷ್ಟವಾದ ಅಭ್ಯರ್ಥಿಗಳ ಹೆಸರಿನ ಮುಂದೆ ಮತ ಹಾಕಲು ಸಹಾಯಕವಾಗಿತ್ತು. ಹಾಗೆಯೇ ಮತಯಂತ್ರದಲ್ಲಿ 'ಮೇಲ್ಕಂಡ ಯಾವ ಅಭ್ಯರ್ಥಿಯೂ ಇಷ್ಟವಿಲ್ಲ (ನೋಟಾ)' ಎಂಬ ಆಯ್ಕೆಗೂ ಅವಕಾಶ ಕಲ್ಪಿಸಲಾಗಿತ್ತು.  

ವಿವರ: ಶಿವಮೊಗ್ಗ ಪಾಲಿಕೆ ಚುನಾವಣೆಗೆ ಒಟ್ಟು 2,74,218 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ಇವರಲ್ಲಿ 1,35,524 ಪುರುಷ ಹಾಗೂ 1,38,673 ಮಹಿಳಾ ಮತದಾರರು ಮತ್ತು 21 ಇತರೆ ಮತದಾರರಾಗಿದ್ದಾರೆ. ಒಟ್ಟು 303 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿತ್ತು. ಇದರಲ್ಲಿ 86 ಸೂಕ್ಷ್ಮ, 21 ಅತಿ ಸೂಕ್ಷ್ಮ ಮತ್ತು 196 ಸಾಮಾನ್ಯ ಮತಗಟ್ಟೆಗಳಾಗಿದ್ದವು. 

ಚುನಾವಣೆಯನ್ನು ಸುಗಮವಾಗಿ ನಡೆಸಲು 320 ಮತಗಟ್ಟೆ ಅಧಿಕಾರಿಗಳು, 320 ಮತಗಟ್ಟೆ ಸಹಾಯಕ ಅಧಿಕಾರಿಗಳು, 640 ಮತಗಟ್ಟೆ ಸಿಬ್ಬಂದಿ, 303 ಸಹಾಯಕರು, 303 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 1886 ಅಧಿಕಾರಿ-ಸಿಬ್ಬಂದಿಗಳನ್ನು ನೇಮಿಸಲಾಗಿತ್ತು. 

ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಹಾಗೂ ಯಾವುದೇ ಆರೋಪಗಳಿಗೆ ಆಸ್ಪದವಾಗಬಾರದೆಂಬ ಕಾರಣದಿಂದ, ಶಿವಮೊಗ್ಗ ನಗರ ಹಾಗೂ ತಾಲೂಕು ಹೊರತುಪಡಿಸಿ ಜಿಲ್ಲೆಯ ನೆರೆಯ ತಾಲೂಕುಗಳ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಕ್ಕಾಗಿ ಜಿಲ್ಲಾಡಳಿತ ನಿಯೋಜಿಸಿತ್ತು. 

ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಇತರ 22 ಭಾವಚಿತ್ರವಿರುವ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಯಿಯನ್ನು ಹಾಕಲಾಯಿತು. ಮತದಾನ ಕೇಂದ್ರದ ಸುತ್ತಲೂ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.  

ಮತ ಎಣಿಕೆ: ಮತ ಎಣಿಕೆ ಕಾರ್ಯ ಸೆಪ್ಟಂಬರ್ 3ರಂದು ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಏಕ ಕಾಲದಲ್ಲಿ ನಡೆಯಲಿದೆ. ಇದಕ್ಕಾಗಿ 2 ಭದ್ರತಾ ಕೊಠಡಿಗಳು, 7 ಮತ ಎಣಿಕೆ ಹಾಲ್, 49 ಮತ ಎಣಿಕೆ ಟೇಬಲ್ ಹಾಗೂ 147 ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ. 

ರಾತ್ರಿ ಹರಿದಿದೆ 'ಹಣದ ಹೊಳೆ..!'

ಚುನಾವಣಾ ಮುನ್ನಾ ದಿನದ ರಾತ್ರಿಯಂದು ನಗರದ ಹಲವು ವಾರ್ಡ್‍ಗಳಲ್ಲಿ ಹಣ-ಆಮಿಷಗಳ ಹೊಳೆಯೇ ಹರಿದಿರುವ ಹಲವು ಮಾಹಿತಿಗಳು ಕೇಳಿಬಂದಿವೆ. ಬಹುತೇಕ ವಾರ್ಡ್‍ಗಳಲ್ಲಿ ಜಿದ್ದಾಜಿದ್ದಿನ ಅಖಾಡ ಏರ್ಪಟ್ಟಿದೆ. ಶತಾಯಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಕೆಲ ಅಭ್ಯರ್ಥಿಗಳು ಭಾರೀ ಪ್ರಮಾಣದಲ್ಲಿ ಹಣ ವ್ಯಯಿಸಿದ್ದಾರೆ. ಮತದಾರರ ಮನವೊಲಿಕೆಗಾಗಿ ಪ್ರತಿ ವೋಟ್‍ಗೆ ಇಂತಿಷ್ಟು ಹಣ ನೀಡಿದ್ದಾರೆ. ಮತದಾರರ ಮನಮನೆಗೆ ತೆರಳಿ ಪೈಪೋಟಿಯ ಮೇಲೆ ಹಣ ವಿತರಿಸಿದ್ದಾರೆ. ಮತ್ತೆ ಕೆಲ ಮತದಾರರಿಗೆ ನಾನಾ ರೀತಿಯ ಉಡುಗೊರೆಗಳನ್ನು ಕೊಟ್ಟಿದ್ದಾರೆ ಎಂಬಿತ್ಯಾದಿ ದೂರುಗಳು ಕೇಳಿಬಂದಿವೆ. 

ಬಿಗಿ ಪೊಲೀಸ್ ಭದ್ರತೆ
ಮತಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿತ್ತು. ಸೂಕ್ಷ್ಮ- ಅತೀ ಸೂಕ್ಷ್ಮ ಮತಕೇಂದ್ರಗಳಿಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮತಕೇಂದ್ರಗಳ 100 ಮೀಟರ್ ಸುತ್ತಮುತ್ತಲು 144 ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹಾಗೆಯೇ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ನಗರದಾದ್ಯಂತ ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿತ್ತು. ಆಯಕಟ್ಟಿನ ಜಾಗಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿತ್ತು. 

ಮತದಾನ ಮಾಡಿದ ಪ್ರಮುಖರು
ಶಾಸಕ ಕೆ.ಎಸ್.ಈಶ್ವರಪ್ಪ, ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ರುದ್ರೇಗೌಡ, ಆಯನೂರು ಮಂಜುನಾಥ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್, ಮಾಜಿ ಶಾಸಕರಾದ ಶಾರದಾಪೂರ್ಯನಾಯ್ಕ್, ಕೆ.ಬಿ.ಪ್ರಸನ್ನಕುಮಾರ್, ಮಾಜಿ ಸೂಡಾಧ್ಯಕ್ಷ ಇಸ್ಮಾಯಿಲ್ ಖಾನ್ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ಮುಖಂಡರು ನಗರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಮಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News