ಸರಕಾರ ನಿರ್ಲಕ್ಷಿಸಿದರೆ ನಮ್ಮ ನೆಲೆಯನ್ನು ನಾವೇ ಪುನರ್ ನಿರ್ಮಿಸುತ್ತೇವೆ: ಸಿಎನ್‍ಸಿ ಪ್ರತಿಪಾದನೆ

Update: 2018-08-31 18:06 GMT

ಮಡಿಕೇರಿ, ಆ.31: ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ನೆಲೆ ಕಳೆದುಕೊಂಡವರಿಗೆ ಸರಕಾರ ಸಕಾಲದಲ್ಲಿ ಪುನರ್ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ನಮ್ಮ ನೆಲೆಯನ್ನು ನಾವೇ ಪುನರ್ ನಿರ್ಮಿಸಿಕೊಳ್ಳುತ್ತೇವೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಪ್ರತಿಪಾದಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಭೂಕುಸಿತದ ಮೂಲಕ ಕೊಡವ ಪ್ರದೇಶಕ್ಕೆ ಹಾನಿಯಾಗಿರುವುದು ಅಂತರರಾಷ್ಟ್ರೀಯ ವಿಪತ್ತಾಗಿದೆ. ಇದನ್ನು ನಿರ್ವಹಣೆ ಮಾಡಲು ಸರಕಾರದಿಂದ ಸಾಧ್ಯವಾಗದಿದ್ದಲ್ಲಿ ನಮಗೆ ಬಿಟ್ಟು ಕೊಡಿ ಎಂದು ಒತ್ತಾಯಿಸಿದರು. ಕೊಡಗು ಕೇಂದ್ರಾಡಳಿತ ಪ್ರದೇಶವಾದರೆ, ಪತನವಾದ ನಮ್ಮ ನೆಲೆಯನ್ನು ನಾವೇ ಪುನರ್ ನಿರ್ಮಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. 

ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕನ್ನೊಳಗೊಂಡ ವಾಯವ್ಯ ಕೊಡಗಿನ 6 ನಾಡುಗಳ 35 ಗ್ರಾಮಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ  ಸಂತ್ರಸ್ತರಾದವರಿಗೆ ಅದೇ ಪ್ರದೇಶಗಳಲ್ಲಿ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಸಂಘಟನೆ ವತಿಯಿಂದ ಸೆ.1 ಮಡಿಕೇರಿಯಲ್ಲಿ ವಾಹನ ಜಾಥಾ ನಡೆಸುವುದರೊಂದಿಗೆ ಜಿಲ್ಲಾಡಳಿತದ ಮೂಲಕ ಕೇಂದ್ರ ಸರಕಾರ ಮತ್ತು ವಿಶ್ವಸಂಸ್ಥೆಯ ಗಮನ ಸೆಳೆಯಲಾಗುವುದು ಎಂದರು.

ಆ.12 ರಿಂದ 19 ರವರೆಗೆ ಕೊಡಗಿನ ವಾಯವ್ಯ ಭಾಗದಲ್ಲಿ ನಡೆದ ಭೀಕರ ಭೂಕುಸಿತವನ್ನು ಅಂತಾರಾಷ್ಟ್ರೀಯ ವಿಪತ್ತು ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಬೇಕು. ಆ ಮೂಲಕ ನಿರಾಶ್ರಿತರಿಗೆ ಸಮರೋಪಾದಿಯಲ್ಲಿ ಶಾಸನಬದ್ಧ ಪುನರ್ವಸತಿ ಕಲ್ಪಿಸಲು ಸಿದ್ಧತೆ ಮತ್ತು ಬದ್ಧತೆ ತೋರಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಭೂಕಂಪನ ಮತ್ತು ಭೂಕುಸಿತದಿಂದ ನಿರಾಶ್ರಿತರಾದ ಸಂತ್ರಸ್ತರ ಶಾಶ್ವತ ಪುನರ್ವಸತಿಗೆ ಒತ್ತಾಯಿಸುವ ನಿಟ್ಟಿನಲ್ಲಿ ಸೆ.1ರಂದು ಸಿ.ಎನ್.ಸಿಯು 24ನೇ ವರ್ಷದ ಸಾರ್ವತ್ರಿಕ ಕೈಲ್‍ಪೊವ್ದ್ ನಮ್ಮೆಯನ್ನು ಸಾಂಕೇತಿಕ ಆಯುಧ ಪೂಜೆ ಮತ್ತು  ಮೌನ ಶೋಕಾಚರಣೆಯ ಮೂಲಕ ವಾಹನ ಜಾಥಾ ನಡೆಸಿ ಹಕ್ಕೊತ್ತಾಯ ಮಂಡಿಸಲಿದೆ ಎಂದು ಹೇಳಿದರು.

ಕೊಡಗಿನ ವಾಯುವ್ಯ ಭಾಗದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಕೊಡಗಿನ ಹೃದಯ ಭಾಗದಲ್ಲಿ ನಿರ್ಮಿಸಿರುವ ಹಾರಂಗಿ ಜಲಾಶಯವೇ ಕಾರಣ ಎಂದು ಪ್ರತಿಪಾದಿಸಿದ ನಾಚಪ್ಪ ಅವರು, ಪ್ರಸಕ್ತ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಆಯಾ ಪ್ರದೇಶಗಳಲ್ಲೇ ಪುನರ್ವಸತಿ ಕಲ್ಪಿಸುವ ಮುನ್ನ ಹಾರಂಗಿ ಜಲಾಶಯವನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.   

ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಾರ್ಯ ಪೂರ್ಣಗೊಳ್ಳುವವರೆಗೆ 10 ವರ್ಷಗಳ ಕಾಲ ಅವರ ಜೀವನ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾಥ ಪ್ರಜ್ಞೆ ಕಾಡದಂತೆ ಭರವಸೆ ಮೂಡಿಸುವ ಸಲುವಾಗಿ, ಸಂತ್ರಸ್ತರು ಬಾಡಿಗೆ ಮನೆ ಪಡೆದುಕೊಂಡು ವಾಸಿಸಲು ಆ ಮನೆ ಬಾಡಿಗೆ ಮತ್ತು ಜೀವನ ನಿರ್ವಹಣೆಗೆ ಆರ್ಥಿಕ ಸಹಾಯದ ವಿಶೇಷ ಪ್ಯಾಕೇಜ್‍ನ ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಪ್ರಸಕ್ತ ಸಂಭವಿಸಿರುವ ಪ್ರಕೃತಿ ವಿಕೋಪದ ಹೆಸರಿನಲ್ಲಿ ಸಂತ್ರಸ್ತರಲ್ಲದವರು ಲಾಭ ಪಡೆಯುವ ಸಂಭವವಿದೆ. ಕಾವೇರಿ ನದಿ ದಂಡೆಯಲ್ಲಿ ಅಕ್ರಮವಾಗಿ ನೆಲೆ ನಿಂತು ಪ್ರತಿವರ್ಷ ಗಂಜಿ ಕೇಂದ್ರ ಸೇರಿ ಪರಿಹಾರ ಪಡೆದು ಪ್ರವಾಹ ಇಳಿಮುಖವಾದ ಮೇಲೆ ತಮ್ಮ ಅಕ್ರಮ ನೆಲೆಗಳಿಗೆ ತೆರಳುವವರೂ ಇದ್ದಾರೆ. ವಿಪರೀತ ಮಳೆಯಿಂದಾಗಿ ಕಾಫಿ ತೋಟ ಮತ್ತು ಗದ್ದೆ ಬೆಳೆ ಕಳೆದುಕೊಂಡವರು ನೈಜ ಸಂತ್ರಸ್ತರಾಗಿದ್ದು, ನೈಜ ಭೂಕುಸಿತದಿಂದ ಸಂತ್ರಸ್ತರರಾದವರ ಕಲ್ಯಾಣಕ್ಕೆ ಮತ್ತು ಪುನರ್ವಸತಿಗೆ ತಲುಪಲಿರುವ ಪ್ಯಾಕೇಜ್‍ನ ದಿಕ್ಕು ತಪ್ಪಿಸಬಾರದು ಎಂದೂ ನಾಚಪ್ಪ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News