ದಲಿತ ಪದದ ಜಾಡು ಹಿಡಿದು

Update: 2018-08-31 18:50 GMT

ದಲಿತ ಪದದ ಮೂಲ ಸಂಸ್ಕೃತ ಭಾಷೆಯಾಗಿದ್ದು ನಂತರ ಮರಾಠಿ ಭಾಷೆಯಲ್ಲಿ ಬಳಕೆಗೆ ಬಂದಿದೆ. ನಾಮದೇವ ಡಸಾಳ್ ಎಂಬ ದಲಿತ ಸಾಹಿತಿಯು 1973ರಲ್ಲಿ ದಲಿತ ಪದಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟಿದ್ದಾರೆ. ‘‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನವಬೌದ್ಧರು, ಕಾರ್ಮಿಕರು, ಭೂರಹಿತರು, ಬಡರೈತರು, ಮಹಿಳೆಯರು ಮತ್ತು ರಾಜಕೀಯ ಹಾಗೂ ಆರ್ಥಿಕವಾಗಿ ತುಳಿತಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರೂ ದಲಿತ ಪದದ ಅರ್ಥವ್ಯಾಪ್ತಿಗೆ ಬರುತ್ತಾರೆ’’ ಎಂದವರು ವ್ಯಾಖ್ಯಾನಿಸಿದರು. ಆದರೆ, ಭಾರತೀಯ ಸಮಾಜವು ದಲಿತ ಪದವನ್ನು ಸಮಷ್ಟಿ ಪ್ರಜ್ಞೆಯಿಂದ ಅರ್ಥಮಾಡಿಕೊಂಡಿಲ್ಲ. ಅದನ್ನು ನಿರ್ದಿಷ್ಟ ಕೋಮುಗಳ ಗುಂಪಿಗೆ ಸೀಮಿತಗೊಳಿಸಿದೆ.


ದಲಿತ ಸಂಘ ಸಂಸ್ಥೆಗಳ ಸಭೆಗಳಲ್ಲಿ ‘ದಲಿತ’ ಪದ ಬಳಕೆಯ ಕುರಿತು ಇತ್ತೀಚೆಗೆ ಚರ್ಚೆಗಳಾಗುತ್ತಿವೆ. ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ‘ದಲಿತ’ ಎಂಬ ಪದವನ್ನು ಸರಕಾರಿ ದಾಖಲೆಗಳಲ್ಲಿ ಬಳಸಬಾರದು ಎಂದು ಜನವರಿ 15, 2018ರಲ್ಲಿ ತೀರ್ಪಿತ್ತಿದೆ. ದಲಿತ ಪದವನ್ನು ಸಂವಿಧಾನದಲ್ಲಿ ಅಥವಾ ಮತ್ತಾವುದೇ ಸರಕಾರದ ಅಧಿನಿಯಮಗಳಲ್ಲಿ ಬಳಸಿಲ್ಲ ಎಂಬ ಅಂಶ ತೀರ್ಪಿನಲ್ಲಿದೆ.

ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯವು ದಲಿತ ಪದಬಳಕೆಯನ್ನು ಕೈಬಿಡುವಂತೆ ಮಾರ್ಚ್ 15, 2018ರ ಸುತ್ತೋಲೆಯಲ್ಲಿ ತಿಳಿಸಿದೆ. ಮಾಧ್ಯಮಗಳಲ್ಲಿಯೂ ಕೂಡ ‘ದಲಿತ’ ಎಂಬ ಪದ ಬಳಕೆಯನ್ನು ಕೈಬಿಡಬೇಕೆಂಬ ಮಾತೂ ಕೇಳಿಬರುತ್ತಿದೆ. ಮುಂಬೈಯ ಉಚ್ಚನ್ಯಾಯಾಲಯವು ಜೂನ್ 6, 2018 ರ ತೀರ್ಪಿನಲ್ಲಿ ಭಾರತೀಯ ಮಾಧ್ಯಮ ಪರಿಷತ್ತಿಗೆ ನಿರ್ದೇಶನ ನೀಡಿ, ಮಾಧ್ಯಮಗಳಲ್ಲಿ ದಲಿತ ಪದ ಬಳಕೆಯನ್ನು ಕೈಬಿಡಲು ಸಂಬಂಧಿಸಿದವರಿಗೆ ನಿರ್ದೇಶನ ನೀಡಲು ಆರು ವಾರಗಳ ಗಡುವು ಕೊಟ್ಟಿತ್ತು. ‘ದಿ ವೈರ್’ ಎಂಬ ಅಂತರ್ಜಾಲ ನಿಯತಕಾಲಿಕವು ಜೂನ್ 15, 2018 ರಂದು ಪ್ರಕಟಿಸಿದ ಲೇಖನದಲ್ಲಿ ‘‘ಶೋಷಿತ ಸಮುದಾಯವು ‘ದಲಿತ’ ಎಂಬ ಪದವನ್ನು ಒಪ್ಪಿಕೊಂಡಿರುವುದರಿಂದ ನ್ಯಾಯಾಲಯಗಳ ಷರತ್ತುಗಳು ಸರಿಯೇ?’’ ಎಂಬ ಮರಾಠಿ ದಲಿತ ಲೇಖಕ ಜೆ. ವಿ. ಪವಾರ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿದೆ. ಈ ಎಲ್ಲಾ ಕಾರಣಗಳಿಂದಾಗಿ ದಲಿತ ಸಮುದಾಯದಲ್ಲಿ ದಲಿತ ಎಂಬ ಪದ ಬಳಕೆಯ ಬಗ್ಗೆ ಜಿಜ್ಞಾಸೆ ಮೂಡಿದೆ.

ಕಳೆದ ಶತಮಾನದ ಎಂಬತ್ತನೇ ದಶಕವು ಕರ್ನಾಟಕದಲ್ಲಿ ದಲಿತ ಚಳವಳಿ ಹುಟ್ಟಿದ ಪರ್ವಕಾಲ. ದಲಿತ ಸಂಘರ್ಷ ಸಮಿತಿಯು ಕರಪತ್ರ ಮತ್ತು ಗೋಡೆ ಬರಹಗಳ ಮೂಲಕ ದಲಿತ ಪದದ ವ್ಯಾಖ್ಯಾನ ಕೊಟ್ಟಿತು. ‘‘ದಲಿತರು ಎಂದರೆ ಎಲ್ಲಾ ಜಾತಿಯ ಬಡವರು’’ ಎಂಬ ಗೋಡೆ ಬರಹ ನಾಡಿನ ಉದ್ದಗಲಕ್ಕೂ ಕಂಡುಬಂತು. ದಲಿತ ಎಂಬ ಪದವು ಸಮಾಜದ ಅವ್ಯವಸ್ಥೆಗಳಿಗೆ ಚಿಕಿತ್ಸಾರೂಪದಲ್ಲಿ ಅನುರಣಿಸಿತು. ಅದೇ ಕಾಲಕ್ಕೆ ದಲಿತ ಸಾಹಿತ್ಯವೂ ಹುಟ್ಟಿಕೊಂಡಿತು. ದಲಿತ ಪದದ ಮೂಲ ಸಂಸ್ಕೃತ ಭಾಷೆಯಾಗಿದ್ದು ನಂತರ ಮರಾಠಿ ಭಾಷೆಯಲ್ಲಿ ಬಳಕೆಗೆ ಬಂದಿದೆ. ನಾಮದೇವ ಡಸಾಳ್ ಎಂಬ ದಲಿತ ಸಾಹಿತಿಯು 1973ರಲ್ಲಿ ದಲಿತ ಪದಕ್ಕೆ ವಿಶಾಲವಾದ ಅರ್ಥವನ್ನು ಕೊಟ್ಟಿದ್ದಾರೆ. ‘‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ನವಬೌದ್ಧರು, ಕಾರ್ಮಿಕರು, ಭೂರಹಿತರು, ಬಡರೈತರು, ಮಹಿಳೆಯರು ಮತ್ತು ರಾಜಕೀಯ ಹಾಗೂ ಆರ್ಥಿಕವಾಗಿ ತುಳಿತಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರೆಲ್ಲರೂ ದಲಿತ ಪದದ ಅರ್ಥವ್ಯಾಪ್ತಿಗೆ ಬರುತ್ತಾರೆ’’ ಎಂದವರು ವ್ಯಾಖ್ಯಾನಿಸಿದರು. ಆದರೆ, ಭಾರತೀಯ ಸಮಾಜವು ದಲಿತ ಪದವನ್ನು ಸಮಷ್ಟಿ ಪ್ರಜ್ಞೆಯಿಂದ ಅರ್ಥಮಾಡಿಕೊಂಡಿಲ್ಲ. ಅದನ್ನು ನಿರ್ದಿಷ್ಟ ಕೋಮುಗಳ ಗುಂಪಿಗೆ ಸೀಮಿತಗೊಳಿಸಿದೆ.

ದಲಿತ್ ಪ್ಯಾಂಥರ್ ಪ್ರೇರಣೆ

ಅಮೆರಿಕದ ಕಪ್ಪುಜನರ ಸಂಘಟನೆಯಾದ ‘ಬ್ಲಾಕ್ ಪ್ಯಾಂಥರ್’ ನಿಂದ ಪ್ರೇರಣೆ ಪಡೆದು ಮಹಾರಾಷ್ಟ್ರದಲ್ಲಿ ಮೆ 29, 1972ರಲ್ಲಿ ಆರಂಭವಾದ ‘ದಲಿತ್ ಪ್ಯಾಂಥರ್’ ಸಂಘಟನೆಯು ‘ದಲಿತ’ ಎಂಬ ಪದಬಳಕೆಯನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಮುಟ್ಟಿಸಿತು. ನಾಮದೇವ ಡಸಾಳ್, ಜೆ. ವಿ. ಪವಾರ್, ರಾಜಾ ಧಾಳೆ ಮತ್ತು ದಯಾ ಪವಾರ್ ಎಂಬ ದಲಿತ ಮರಾಠಿ ಸಾಹಿತಿಗಳು ‘ದಲಿತ್ ಪ್ಯಾಂಥರ್’ ಸಂಘಟನೆಯನ್ನು ಹುಟ್ಟು ಹಾಕಿದರು. ಕರ್ನಾಟಕ ಮತ್ತಿತರ ರಾಜ್ಯಗಳ ದಲಿತ ಚಳವಳಿಗಳ ಹುಟ್ಟಿಗೆ ದಲಿತ್ ಪ್ಯಾಂಥರ್ ಪ್ರೇರಣೆಯಾಯಿತು. ದಲಿತ ಪ್ಯಾಂಥರ್ ಚಳವಳಿಯ ಹೋರಾಟಗಳು ಶೋಷಿತರನ್ನು ಸಂಘಟಿಸುವಲ್ಲಿ ಯಶಸ್ಸು ಪಡೆದವು. ದಲಿತ ಕವಿ ಸಿದ್ದಲಿಂಗಯ್ಯನವರು ‘‘ದಲಿತರು ಬರುವರು ದಾರಿ ಬಿಡಿ, ದಲಿತರ ಕೈಗೆ ರಾಜ್ಯ ಕೊಡಿ’’ ಎಂಬ ಚಳವಳಿ ಗೀತೆಯನ್ನು ಬರೆದರು. ದಲಿತ ಪ್ಯಾಂಥರ್ ಸಂಘಟನೆ ಮತ್ತು ದಲಿತ ಸಂಘರ್ಷ ಸಮಿತಿಯು ದಲಿತರಲ್ಲಿ ಹೋರಾಟದ ಕಿಚ್ಚನ್ನು ಹತ್ತಿಸಿತು. ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಪ್ರಜ್ಞೆಗೆ ನಾಂದಿಯಾಯಿತು. ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಕಾನ್ಶೀರಾಂರವರು ಮೊದಲಿಗೆ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ (ಡಿಎಸ್4) ಎಂಬ ಸಂಸ್ಥೆ ಯನ್ನು ಡಿಸೆಂಬರ್ 6, 1981ರಲ್ಲಿ ಸ್ಥಾಪಿಸಿದರು. ಕಾಲಾನಂತರದಲ್ಲಿ, ದಲಿತ ಪದಕ್ಕೆ ಬೇಡುವವರು ಎಂಬ ಅರ್ಥವಿದೆ ಎಂದು ವ್ಯಾಖ್ಯಾನಿಸಿದ ಅವರು ದಲಿತ ಪದಬಳಕೆಯನ್ನು ಬಹಿರಂಗ ಸಭೆಗಳಲ್ಲಿ ಟೀಕಿಸಿದರು. ‘‘ನಾವು ಬೇಡು ವವರಾಗಬಾರದು, ನೀಡುವವರಾಗಬೇಕು, ಅದಕ್ಕಾಗಿ ರಾಜಕೀಯ ಅಧಿಕಾರ ಹಿಡಿಯಬೇಕು’’ ಎಂಬ ಚಿಂತನೆಯ ಮೂಲಕ ಅವರು ಬಹುಜನ ಸಮಾಜ ಪಕ್ಷವನ್ನು ಡಾ. ಅಂಬೇಡ್ಕರ್ ಹುಟ್ಟುಹಬ್ಬದ ದಿನವಾದ ಎಪ್ರಿಲ್ 14, 1984ರಲ್ಲಿ ಕಟ್ಟಿದರು. ಡಿಎಸ್4 ಅನ್ನು ಬಹುಜನ ಸಮಾಜ ಪಕ್ಷದಲ್ಲಿ ವಿಲೀನಗೊಳಿಸಿದರು.

ಜ್ಯೋತಿಬಾ ಫುಲೆಯಿಂದ ಕುದ್ಮುಲ್ ರಂಗರಾಯರವರೆಗೆ

‘‘ನನ್ನ ಶಾಲೆಯಲ್ಲಿ ಕಲಿತ ಒಬ್ಬ ದಲಿತ ಜನಾಂಗದ ಹುಡುಗ ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಯಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ಎದ್ದ ಧೂಳು ನನ್ನ ತಲೆಗೆ ತಾಗಿದರೆ ನನ್ನ ಜನ್ಮ ಸಾರ್ಥಕ’’ ಎಂದವರು ದಲಿತೋದ್ಧಾರಕ ಕುದ್ಮುಲ್ ರಂಗರಾವ್. ಕುದ್ಮುಲ್ ರಂಗರಾಯರ ಕುರಿತು ನಾನು ಲೇಖನವನ್ನು ಪ್ರಕಟಿಸಿದಾಗ, ರಂಗರಾಯರ ಕಾಲದಲ್ಲಿ ‘ದಲಿತ’ ಎಂಬ ಪದವನ್ನು ಬಳಸಲಾಗು ತ್ತಿತ್ತೇ ಎಂಬ ಪ್ರಶ್ನೆಯನ್ನು ಹಲವರು ಎತ್ತಿದರು. ಸಂವಿಧಾನ ಶಿಲ್ಪಿಡಾ. ಅಂಬೇಡ್ಕರರು ತಮ್ಮ ಗುರುವೆಂದು ಬಿಂಬಿಸಿಕೊಂಡ ಜ್ಯೋತಿಬಾ ಫುಲೆಯವರು ‘ದಲಿತ’ ಎಂಬ ಪದವನ್ನು ರಂಗರಾಯರಿಗಿಂತ ಮೊದಲೇ ಬಳಸಿದ್ದಾರೆ ಎಂಬ ಮಾಹಿತಿಯಿದೆ. ಈ ಪದಕ್ಕೆ ‘ಒಡೆದುಹೋದವರು, ಹಂಚಿಹೋದವರು’ ಎಂಬ ಅರ್ಥಗಳಿವೆ. ಮಹಾತ್ಮಾ ಗಾಂಧಿಯವರ ಹರಿಜನ ಪದ ಬಳಕೆಯು ತೀವ್ರ ಟೀಕೆಗೆ ಗುರಿಯಾಯಿತು. ಈಗ ನ್ಯಾಯಾಲಯದ ತೀರ್ಪಿನ ಪ್ರಕಾರ ದಲಿತ ಎಂಬ ಪದವನ್ನು ಅಧಿಕೃತವಾಗಿ ಸರಕಾರ ಬಳಸುವಂತಿಲ್ಲ. ಆದರೆ, ಅನಿವಾರ್ಯವಾಗಿ ಕೆಲ ಸಂದರ್ಭಗಳಲ್ಲಿ ಬಳಸಲೇಬೇಕಾಗುತ್ತದೆ. ಸರಕಾರವು ದಲಿತ ಸಂಘಟನೆಗಳನ್ನು ಮಾತು ಕತೆಗೆ ಆಹ್ವಾನಿಸಿದಾಗ, ಪತ್ರವ್ಯವಹಾರ ನಡೆಸುವಾಗ ಸಂಘಟನೆಯ ಹೆಸರಿನಲ್ಲಿ ದಲಿತ ಎಂಬ ಪದವಿರುವುದರಿಂದ ಅದನ್ನು ಉಲ್ಲೇಖ ಮಾಡಲೇಬೇಕಾಗುತ್ತದೆ, ಈ ಅರ್ಥದಲ್ಲಿ ದಲಿತ ಎಂಬ ಪದ ಬಳಕೆಯನ್ನು ಸಂಪೂರ್ಣವಾಗಿ ನಿಷಿದ್ಧ್ದ ಮಾಡಲು ಸದ್ಯಕ್ಕೆ ಸಾಧ್ಯವಿಲ್ಲವೆನಿಸುತ್ತದೆ.

ದಲಿತ ಪದ ಬಳಸದ ಅಂಬೇಡ್ಕರ್

ಡಾ. ಅಂಬೇಡ್ಕರರು ತಮ್ಮ ಹೋರಾಟದಲ್ಲಿ ಡಿಪ್ರೆಸ್ಡ್ ಕ್ಲಾಸಸ್ (ಶೋಷಿತ ವರ್ಗಗಳು) ಎಂಬ ಪದವನ್ನು ಬಳಸಿದರು. ದಲಿತ ಎಂಬ ಪದವನ್ನು ಅವರು ಬಳಸಿಲ್ಲ. ಅದು ಭಾರತೀಯ ಭಾಷೆಯ ಪದ ಎಂಬ ಕಾರಣವಿರಬಹುದು. ಸೌಥ್‌ಬರೋ ಕಮಿಷನ್ (1919) ಮತ್ತು ಸೈಮನ್ ಕಮಿಷನ್ (1928) ಮುಂದೆ ವಾದ ಮಂಡಿಸುವಾಗಲೆಲ್ಲಾ ಅಂಬೇಡ್ಕರರು ‘ಡಿಪ್ರೆಸ್ಡ್ ಕ್ಲಾಸಸ್’ ಎಂಬ ಪದವನ್ನು ಪರಿಣಾಮಕಾರಿಯಾಗಿ ಬ್ರಿಟಿಷರೆದುರು ಮಂಡಿಸಿದರು. ಭಾರತದ ರಾಜ್ಯಪತ್ರದಲ್ಲಿ ಜೂನ್ 6, 1936ರಲ್ಲಿ ಪ್ರಕಟವಾದ ಕಾಯ್ದೆಯಲ್ಲಿ ಮೊತ್ತಮೊದಲಿಗೆ ಶೆಡ್ಯೂಲ್ಡ್ ಕ್ಯಾಸ್ಟ್ಸ್ ಎಂಬ ಪದಬಳಕೆಯನ್ನು ಮಾಡಲಾಯಿತು. ಈ ಪದಗಳನ್ನು ಕನ್ನಡಕ್ಕೆ ಅಥವಾ ಭಾರತೀಯ ಭಾಷೆಗಳಿಗೆ ‘ಪರಿಶಿಷ್ಟ ಜಾತಿ’ ಅಥವಾ ‘ಅನುಸೂಚಿತ ಜಾತಿ’, ಅಥವಾ ‘ನಿಮ್ನ ಜಾತಿಗಳು’ ಎಂದು ತರ್ಜುಮೆ ಮಾಡಲಾಗಿದೆ. ‘ಪರಿಶಿಷ್ಟ’ ಎಂಬ ಪದವೂ ಕೂಡ ಚರ್ಚೆಗೊಳಗಾಗಿದೆ. ಶಿಷ್ಟರು ಎಂದರೆ ಉತ್ತಮರು, ‘ಪರಿಶಿಷ್ಟರು’ ಎಂದರೆ ಉತ್ತಮರ ಆಚೆಯವರು ಎಂಬ ಅರ್ಥವನ್ನು ಪರಿಶಿಷ್ಟರು ಎಂಬ ಪದ ಹೊರಡಿಸುತ್ತದೆಯಾದ್ದರಿಂದ ಪರಿಶಿಷ್ಟರು ಎಂಬ ಪದಬಳಕೆಯೂ ಸಮಂಜಸವಲ್ಲ ಎಂಬ ಸಾಹಿತ್ಯಕ ಚರ್ಚೆಗಳಾಗಿವೆ. ಹಲವಾರು ಸೌಲಭ್ಯಗಳಿಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಜಾತಿಗಳ ಪಟ್ಟಿ ಮಾಡಿವೆ. ಮಂಡಲ ಆಯೋಗವು ಹಿಂದುಳಿದವರ ಪಟ್ಟಿ ಮಾಡಿದೆ. ಅಲ್ಲೆಲ್ಲಿಯೂ ದಲಿತ ಎಂಬ ಪದ ಬಳಕೆ ಇಲ್ಲ. ಯಾಕೆಂದರೆ, ದಲಿತ ಎನ್ನುವುದು ಒಂದು ನಿರ್ದಿಷ್ಟ ಜಾತಿಯಲ್ಲ. ಅದು ಹಲವು ಜಾತಿಗಳ ಬಡವರ ಹಾಗೂ ಶೋಷಿತರ ಸಮೂಹ. ನಾಮದೇವ ಡಸಾಳ್ ಅವರು ಕೊಟ್ಟ ವ್ಯಾಖ್ಯಾನದಂತೆ ಎಲ್ಲಾ ಜಾತಿಯ ಬಡವರು ಎಂಬ ಅರ್ಥವನ್ನು ಹೊಂದಿದ್ದ ದಲಿತ ಪದ ಕಾಲಕ್ರಮೇಣ ಪರಿಶಿಷ್ಟರಿಗೆ ಸೀಮಿತವಾಗಿದೆ. ವಿಮೋಚನೆಯ ಹೋರಾಟಗಳಿಗೆ ದಲಿತ ಪದ ಬಳಕೆಯ ಅಗತ್ಯವಿದೆ ಎಂದು ವಾದಿಸುವವರು ಕೆಲವರಾದರೆ, ಅಷ್ಟೇ ತೀವ್ರವಾಗಿ ಅದನ್ನು ವಿರೋಧಿಸುವವರೂ ಇದ್ದಾರೆ.

ಪರ್ಯಾಯ ಪದಗಳ ಪ್ರಯೋಗ 
ದಲಿತ ಪದದ ಬದಲಿಗೆ ಬಳಸಲಾದ ಪರ್ಯಾಯ ಪದಗಳ ಪ್ರಯೋಗಗಳಿಗೆ ಪ್ರಾಮುಖ್ಯತೆ ಸಿಗಲಿಲ್ಲ. ಪಂಚಮ ಎನ್ನುವುದು ದಲಿತ ಸಂಘರ್ಷ ಸಮಿತಿಯ ಮುಖವಾಣಿ ಪತ್ರಿಕೆಯಾಗಿತ್ತು. ಡಾ. ಸಿದ್ದಲಿಂಗಯ್ಯನವರು ‘ಪಂಚಮ’ ಮತ್ತು ‘ನೆಲಸಮ’ ಎಂಬ ಎರಡು ನಾಟಕಗಳನ್ನು ಬರೆದರು. ದಲಿತರಿಗಾಗಿ ಸ್ಥಾಪಿಸಿದ ಶಾಲೆಗಳನ್ನು ಕುದ್ಮುಲ್ ರಂಗರಾಯರು ‘ಪಂಚಮ ಶಾಲೆ’ಗಳೆಂದು ಕರೆದರು. ಪಂಚಮರು ಎಂದರೆ ಐದನೆಯ ವರ್ಣದವರು. ಪಂಚಮ ಪದವನ್ನು ಒಪ್ಪಿಕೊಳ್ಳುವುದೆಂದರೆ ವರ್ಣಾಶ್ರಮ ಪದ್ಧತಿಯನ್ನು ಒಪ್ಪಿಕೊಂಡಂತೆ ಎಂಬ ಟೀಕೆಗಳಿವೆ.
ಸಂಸ್ಕೃತಿ ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯನವರು ‘ಆದಿಮ’ ಪದವನ್ನು ಬಳಸಲು ಇಷ್ಟಪಡುತ್ತಾರೆ. ಕೋಲಾರದ ಶತಶೃಂಗ ಪರ್ವತದ ಮೇಲೆ ಶೋಷಿತ ಸಮುದಾಯದ ವಿಮೋಚನೆಯ ನೆಲೆಗಟ್ಟಿನಲ್ಲಿ ಅವರು ಸ್ಥಾಪಿಸಿದ ಸಾಂಸ್ಕೃತಿಕ ಸಂಸ್ಥೆಗೆ ‘ಆದಿಮ ಸಾಂಸ್ಕೃತಿಕ ಸಂಸ್ಥೆ’ ಎಂಬ ಹೆಸರಿಟ್ಟಿದ್ದಾರೆ.

ಶೋಷಿತ ಸಮುದಾಯಕ್ಕೆ ‘ಮೂಲನಿವಾಸಿಗಳು’ ಎಂಬ ಪರ್ಯಾಯ ಪದವನ್ನು ಕೆಲವರು ಬಳಸಿದ್ದಾರೆ. ಅಂಬೇಡ್ಕರ್‌ವಾದಿಗಳಾದ ಎಂ. ಗೋಪಿನಾಥ್ ಅವರು ‘ದಲಿತ್ ಈಸ್ ಡಿಗ್ನಿಫೈಡ್’ ಎಂಬುದನ್ನು ಪ್ರಚುರಪಡಿಸಿದರು. ಪ್ರೊ. ಕಾಂಚಾ ಐಲಯ್ಯನವರು ದಲಿತ ಪದ ಬಳಕೆಯನ್ನು ಬೆಂಬಲಿಸುತ್ತಾರೆ. ಭಾಷೆ ಮತ್ತು ಸಂಸ್ಕೃತಿಗಳ ಭೇದವಿಲ್ಲದೆ ರಾಷ್ಟ್ರ ಮಟ್ಟದಲ್ಲಿ ದಲಿತ ಪದವು ಶೋಷಿತರನ್ನು ಒಗ್ಗೂಡಿಸಿದೆ ಎಂದಿದ್ದಾರೆ. ಅಂಬೇಡ್ಕರ್ ವಾದಿ ಮಹಿಳೆಯಾದ ಗೇಲ್ ಆಮ್‌ವೆಡ್ಟ್ ಅವರು ಪ್ರತಿರೋಧ ವ್ಯಕ್ತಪಡಿಸುವ ದಲಿತ ಪದ ಚಳವಳಿಗಳಿಗೆ ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ದಲಿತ ಪದ ಬಳಕೆ ಬೇಡ ಎನ್ನುವುದು ಒಡೆದು ಆಳುವ ಸಂಸ್ಕೃತಿಯ ಮುಂದುವರಿದ ಭಾಗ ಎಂಬ ಅನುಮಾನ ಮೂಡುತ್ತದೆ, ಇದರ ಹಿಂದೆ ರಹಸ್ಯ ಕಾರ್ಯಸೂಚಿಯಿದೆ, ದಲಿತ ಪದವು ಜಾತಿ ಪದ್ಧತಿಯ ಆಚೆಗಿನ ಪದ, ದಲಿತ ಪದ ಘನತೆಯ ಪದ ಎಂಬ ಅಭಿಪ್ರಾಯ ಲೇಖಕ ಲಕ್ಷೀಪತಿ ಕೋಲಾರ ಅವರದು. ಮಾಧ್ಯಮ ರಂಗದಲ್ಲಿ ‘ದಲಿತ್ ದಸ್ತಕ್’ ಎಂಬ ಹಿಂದಿ ಪತ್ರಿಕೆ ಮತ್ತು ವೆಬ್ ವಾಹಿನಿಯಿದೆ. ‘ದಲಿತ್ ಕ್ಯಾಮರಾ’ ಎಂಬ ಯೂಟ್ಯೂಬ್ ವಾಹಿನಿಯು ದಲಿತ ವಿದ್ಯಾರ್ಥಿಗಳ ಮೇಲಿನ ದಬ್ಬಾಳಿಕೆ, ದೌರ್ಜನ್ಯವನ್ನು ಸಮಾಜದ ಗಮನಕ್ಕೆ ತರುತ್ತಿದೆ. ‘ದಲಿತ್ ವಾಯ್ಸಿ’ ಎಂಬ ಪತ್ರಿಕೆಯು ವಿ. ಟಿ. ರಾಜಶೇಖರ ಶೆಟ್ಟಿಯವರ ಸಂಪಾದಕತ್ವದಲ್ಲಿ ಬರುತ್ತಿತ್ತು. ‘ದಲಿತ್ ಚೇತನಾ’ ಎಂಬ ಗುಜರಾತಿ ಪತ್ರಿಕೆಯಿದೆ. ಮಾಧ್ಯಮ ರಂಗದಲ್ಲಿ ದಲಿತ ಪದ ಬಳಕೆ ಬೇಡವೆಂದರೆ ಹೇಗೆ ಎಂಬ ಪ್ರಶ್ನೆಯೇಳುವುದು ಸಹಜ. ವಿವಿಧ ಭಾಷೆಗಳ ಸಾವಿರಾರು ಪುಸ್ತಕಗಳ ಹೆಸರುಗಳಲ್ಲಿಯೇ ದಲಿತ ಪದದ ಬಳಕೆಯಿದೆ. ಹೀಗಿರುವಾಗ, ಸಂಘಟನಾತ್ಮಕವಾಗಿ ಶೋಷಿತ ಸಮುದಾಯವನ್ನು ಒಂದು ಬೊಗಸೆಯಲ್ಲಿ ಹಿಡಿದಿಡುವ ಪರಿಣಾಮಕಾರಿ ಪರ್ಯಾಯ ಪದ ಯಾವುದು ಎಂಬುದನ್ನು ಅರಿಯಬೇಕಿದೆ. ಪ್ರಜ್ಞಾಪೂರ್ವಕವಾಗಿ ದಲಿತ ಪದವನ್ನು ಒಪ್ಪಿಕೊಳ್ಳಲಾಗಿದೆ. ದಲಿತ ಪದವು ಅಖಂಡ ಪದವಾಗಿದೆ. ಜನಮಾನಸದಲ್ಲಿ ದಲಿತ ಪದವೇ ಉಳಿದುಕೊಳ್ಳಲಿದೆ.

Writer - ಪ್ರೊ.ಎಂ.ನಾರಾಯಣ ಸ್ವಾಮಿ

contributor

Editor - ಪ್ರೊ.ಎಂ.ನಾರಾಯಣ ಸ್ವಾಮಿ

contributor

Similar News