'ಹಿಂದು ಧರ್ಮದ ವಿರುದ್ಧ ಮಾತನಾಡುವವರು' ಬಂಧಿತರ ಹಿಟ್ ಲಿಸ್ಟ್ ನಲ್ಲಿ: ನ್ಯಾಯಾಲಯಕ್ಕೆ ಎಟಿಎಸ್ ಮಾಹಿತಿ

Update: 2018-09-01 08:02 GMT

ಮುಂಬೈ, ಸೆ.1: ಸ್ಫೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಇತ್ತೀಚೆಗೆ ಬಂಧಿತರಾಗಿರುವ ಐವರು ಶಂಕಿತರ ಹಿಟ್ ಲಿಸ್ಟ್ ನಲ್ಲಿ 'ಹಿಂದು ಧರ್ಮದ ವಿರುದ್ಧ ಮಾತನಾಡುವ' ಹೋರಾಟಗಾರರಾದ ಶ್ಯಾಮ್ ಮಾನವ್, ಮುಕ್ತಾ ದಾಭೋಳ್ಕರ್, ಎನ್‌ಸಿಪಿ ನಾಯಕ ಜಿತೇಂದ್ರ ಆವ್ಹದ್ ಮತ್ತು ಹಲವು ಮಂದಿ ಖ್ಯಾತನಾಮರು ಇದ್ದರು ಎಂದು ಮಹಾರಾಷ್ಟ್ರ ಎಟಿಎಸ್ ಶುಕ್ರವಾರ ವಿಶೇಷ ನ್ಯಾಯಾಲಯದ ಮುಂದೆ ಹೇಳಿದೆ.

ಬಂಧಿತ ಐದು ಮಂದಿಯಲ್ಲಿ ಒಬ್ಬನಾದ ಅವಿನಾಶ್ ಪವಾರ್ ಎಂಬಾತನ ಕಸ್ಟಡಿ ಅವಧಿ ವಿಸ್ತರಿಸುವಂತೆ ಎಟಿಎಸ್ ಮಾಡಿದ ಮನವಿ ಮೇಲಿನ ವಿಚಾರಣೆಯನ್ನು ಕೋರ್ಟ್ ನಡೆಸಿದೆ. ಮುಂಬೈ ಉಪನಗರಿ ಘಾಟ್ಕೊಪರ್ ನಿವಾಸಿಯಾದ ಪವಾರ್(30) ಹಿಂದುತ್ವ ಸಂಘಟನೆ ಶ್ರೀ ಶಿವಪ್ರತಿಷ್ಠಾನ್ ಹಿಂದುಸ್ಥಾನ್ ಜತೆ ನಂಟು ಹೊಂದಿದ್ದಾನೆನ್ನಲಾಗಿದೆ. ನ್ಯಾಯಾಲಯ ಆತನನ್ನು ಸೆಪ್ಟೆಂಬರ್ 4ರ ತನಕ ಎಟಿಎಸ್ ಕಸ್ಟಡಿಗೆ ವಹಿಸಿದೆ.

ಆದರೆ ಆತನ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಲು ಅನುಮತಿ ನೀಡುವ ಮೊದಲು ಎಟಿಎಸ್ ಅದಕ್ಕಾಗಿ ನೀಡಿದ ಹಲವು ಕಾರಣಗಳನ್ನು ನ್ಯಾಯಾಲಯ ಪ್ರಶ್ನಿಸಿತ್ತಲ್ಲದೆ, ಇತರ ಆರೋಪಿಗಳಿಗೆ ಶಸ್ತ್ರಾಸ್ತ್ರ ಖರೀದಿಸಲು ಸಹಾಯ ಮಾಡಿದವರು ಯಾರೆಂದು ನಿಖರವಾಗಿ ತಿಳಿಯುವ ನಿಟ್ಟಿನಲ್ಲಿ ವಿಚಾರಣೆ ನಡೆಸುವ ಸಲುವಾಗಿ ಆತನ ಕಸ್ಟಡಿ ಅವಧಿ ವಿಸ್ತರಿಸುವುದಾಗಿ ತಿಳಿಸಿತು.

ಮಹಾರಾಷ್ಟ್ರದ ಹಲವೆಡೆ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿದ ಆರೋಪದ ವೈಭವ್ ರಾವತ್, ಶರದ್ ಕಲಸ್ಕರ್ ಹಾಗೂ ಸುಧನ್ವ ಗೊಂಧಲೇಕರ್ ಅವರನ್ನು ಮೇಲೆ ಎಟಿಎಸ್ ಬಂಧಿಸಿತ್ತು. ನಂತರ ಬಂಧಿತರು ನೀಡಿದ ಮಾಹಿತಿಯನ್ವಯ ಪವಾರ್ ನನ್ನು ಬಂಧಿಸಲಾಗಿತ್ತು. ಸನಾತನ ಸಂಸ್ಥಾ ಜತೆ ಸಂಬಂಧ ಹೊಂದಿದ್ದಾರೆನ್ನಲಾದ ಮಾಜಿ ಶಿವಸೇನಾ ಕಾರ್ಪೊರೇಟರ್ ಶ್ರೀಕಾಂತ್ ಪಂಗರ್ಕರ್ ಅವರನ್ನೂ ಆರೋಪಿಗಳಿಗೆ ಶಸ್ತ್ರಾಸ್ತ್ರ ಖರೀದಿಸಲು ಹಣಕಾಸು ಒದಗಿಸಿದ ಆರೋಪದ ಮೇಲೆ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News