ಐಪಿಪಿಬಿ ಸೇವೆಯಿಂದ ಅಂಚೆ ಇಲಾಖೆಗೆ ಮರುಹುಟ್ಟು: ಶಾಸಕ ಸಿ.ಟಿ.ರವಿ

Update: 2018-09-01 11:42 GMT

ಚಿಕ್ಕಮಗಳೂರು, ಸೆ.1: 160 ವರ್ಷಗಳ ಇತಿಹಾಸ ಹೊಂದಿರುವ ದೇಶದ ಅಂಚೆ ಇಲಾಖೆ ಶೀಘ್ರ ಕಾಲಗರ್ಭದಲ್ಲಿ ಲೀನವಾಗಲಿದೆ ಎಂಬ ಸ್ಥಿತಿಯಲ್ಲಿದ್ದಾಗಲೇ, ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್(ಐಪಿಪಿಬಿ) ಸೇವೆಯ ಮೂಲಕ ಇಲಾಖೆ ಹೊಸ ಚೈತನ್ಯ ಪಡೆದುಕೊಂಡಿದೆ. ಈ ಸೇವೆ ಅಂಚೆ ಇಲಾಖೆಗೆ ಆರ್ಥಿಕ ಶಕ್ತಿ ನೀಡುವುದಲ್ಲದೇ, ಗ್ರಾಹಕರಲ್ಲಿ ಹೊರ ಭರವಸೆಯನ್ನು ಹುಟ್ಟುಹಾಕಲಿದೆ ಎಂದು ಶಾಸಕ ಸಿ.ಟಿ.ರವಿ ಅಭಿಪ್ರಾಯಿಸಿದ್ದಾರೆ.

ನಗರದ ಕುವೆಂಪು ಕಲಾ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಸೇವೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೇವೆಗೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಅಂಚೆ ಇಲಾಖೆ ತನ್ನದೇಯಾದ ಪರಂಪರೆಯನ್ನು ಹೊಂದಿದ್ದು, ಹಿಂದಿನ ಕಾಲದಲ್ಲಿ ಅಂಚೆ ಇಲಾಖೆ ಸಾರ್ವಜನಿಕರ ಬದುಕಿನ ಭಾಗವಾಗಿತ್ತು. ಆದರೆ ಮೋಬೈಲ್ ಹಾಗೂ ಅಂತರ್ಜಾಲಗಳಂತಹ ಆಧುನಿಕ ತಂತ್ರಜ್ಞಾನಗಳ ಕೊಡುಗೆಗಳಿಂದಾಗಿ ಅಂಚೆ ಇಲಾಖೆ ಆಯುಷ್ಯವೇ ಮುಗಿಯಿತು ಎಂಬ ಬಗ್ಗೆ ವ್ಯಾಪಕವಾದ ಚರ್ಚೆ ನಡೆದಿತ್ತು. ಆದರೆ ಕೇಂದ್ರ ಸರಕಾರದ ದೂರದೃಷ್ಟಿಯ ಫಲವಾಗಿ ಅಂಚೆ ಇಲಾಖೆ ಪ್ರಸಕ್ತ ಡಿಜಿಟಲೀಕರಗೊಂಡು ಗ್ರಾಹಕರ ವಿಶ್ವಾಸದೊಂದಿಗೆ ಹೆಜ್ಜೆ ಇಡುತ್ತಿದೆ ಎಂದ ಅವರು, ಐಪಿಪಿಬಿ ಸೇವೆಗಳ ಮೂಲಕ ಮನೆಬಾಗಿಲಿಗೆ ಗ್ರಾಹಕರ ಹಣ ಬರುವಂತಹ ಯೋಜನೆಗೆ ಚಾಲನೆ ನೀಡಿರುವುದು ಇಲಾಖೆಯ ಇತಿಹಾದಲ್ಲೇ ಕ್ರಾಂತಿಕಾರಿ ಸುಧಾರಣೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂಚೆ ಇಲಾಖೆ ನಷ್ಟದಲ್ಲಿರುವ ಬಗ್ಗೆ ಕೇಂದ್ರ ಸರಕಾರದ ಟಾಸ್ಕ್ ಪೋರ್ಸ್ ಸಮಿತಿ ಕೇಂದ್ರ ಸರಕಾರಕ್ಕೆ ವರದಿ ನೀಡಿ, ಸರಕಾರ ಮುಂದೆ ಎರಡು ಆಯ್ಕೆಗಳನ್ನು ನೀಡಿತ್ತು. ಇಲಾಖೆಯ ಬಾಗಿಲು ಮುಚ್ಚಿ ನೌಕರರು, ಸಿಬ್ಬಂದಿಗೆ ಬೇರೆ ಇಲಾಖೆಗಳನ್ನು ಕೆಲಸ ನೀಡುವುದು ಒಂದು ಆಯ್ಕೆಯಾಗಿದ್ದರೇ, ಇಲಾಖೆಯನ್ನು ಪುನಃಶ್ಚೇತನಗೊಳಿಸಲು ಅಗತ್ಯ ಕ್ರಮವಹಿಸುವುದು ಮತ್ತೊಂದು ಆಯ್ಕೆಯಾಗಿತ್ತು. ಪ್ರಧಾನಿ ಇಲಾಖೆಯ ಬಾಗಿಲು ಮುಚ್ಚುವುದುನ್ನು ಒಪ್ಪದೇ ಅದರ ಪುರ್ನಶ್ಚೇತನಕ್ಕೆ ಮುಂದಾದರು. ಕೇಂದ್ರದ ಸುಕನ್ಯಾ ಸಮೃದ್ಧಿಯೋಜನೆ ಅಂಚೆ ಇಲಾಖೆಗೆ ಕಾಯಕಲ್ಪ ಸಿಕ್ಕಿದೆ. ಸದ್ಯ ಐಪಿಪಿಬಿ ಸೇವೆಯ ಮೂಲಕ ಭವಿಷ್ಯದಲ್ಲಿ ಅಂಚೆ ಇಲಾಖೆ ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಲಿದ್ದು, ಈ ಸೇವೆ ಇಲಾಖೆಗೆ ಮರುಹುಟ್ಟು ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಯೋಜನೆ ದೇಶದ 125 ಕೋಟಿ ಜನರನ್ನೂ ತಲುಪುವಂತಾಗಲಿ ಎಂದು ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಧಾನ ಅಂಚೆ ಇಲಾಖೆ ಅಧೀಕ್ಷಕ ಜಿ.ಸಿ.ಶ್ರೀನಿವಾಸ್, ಆಧುನಿಕ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೌಲಭ್ಯವನ್ನು ಗ್ರಾಹಕರ ಮನೆ ಬಾಗಿಲಿಗೆ ನೀಡುವುದು ಈ ಸೇವೆಯ ಉದ್ದೇಶವಾಗಿದೆ. ಸಾಲಸೌಲಭ್ಯ ಹೊರತು ಪಡಿಸಿ ಉಳಿದೆಲ್ಲಾ ಬ್ಯಾಂಕಿಂಗ್ ಸೌಲಭ್ಯಗಳು ಐಪಿಪಿಬಿ ಸೇವೆಯಡಿಯಲ್ಲಿ ಲಭ್ಯವಿದೆ. ವರ್ಷಾಂತ್ಯಕ್ಕೆ ಜಿಲ್ಲೆಯ ಎಲ್ಲಾ ಶಾಖೆಗಳಲ್ಲೂ ಈ ಸೇವೆ ಲಭ್ಯವಾಗಲಿದೆ ಎಂದ ಅವರು, ಗ್ರಾಹಕರು ಶೂನ್ಯ ಮೊತ್ತದಲ್ಲಿ ಖಾತೆ ತೆರೆಯುವ ಸೌಲಭ್ಯವಿದ್ದು, ನೋಂದಾಯಿತ ಮೊಬೈಲ್ ಸಂಖ್ಯೆಗೆ ಗ್ರಾಹಕರು ಎಸ್‍ಎಂಸ್ ಮಾಡಿದಲ್ಲಿ ಅಂಚೆಪೇದೆ ಮನೆ ಬಾಗಿಲಿಗೆ ಹಣ ತಂದು ಕೊಡುವುದೂ ಸೇರಿದಂತೆ ಮನೆ ಬಾಗಿಲಲ್ಲೇ, ಖಾತೆ ತೆರೆಯುವ, ಠೇವಣಿ ಮಾಡುವ, ಹಣ ವರ್ಗಾಯಿಸುವ ಸೇವೆಗಳೂ ಐಪಿಪಿಬಿ ಸೇವಾ ವ್ಯಾಪ್ತಿಯಲ್ಲಿದೆ. ಗ್ರಾಹಕರು ಇದರ ಲಾಭ ಪಡೆಯಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಪ್ರಧಾನಿ ಮೋದಿ ಅವರು ಐಪಿಪಿಬಿ ಸೇವೆಯ ಉದ್ಘಾಟನಾ ಭಾಷಣದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು. ಸಮಾರಂಭದಲ್ಲಿ ಜಿಪಂ ಸದಸ್ಯರಾದ ಜಸಂತಾ ಅನಿಲ್‍ಕುಮಾರ್, ಬೆಳವಾಡಿ ರವೀಂದ್ರ, ಸೋಮಶೇಖರ್, ತಾಪಂ ಅಧ್ಯಕ್ಷ ಜಯಣ್ಣ, ಸದಸ್ಯರಾದ ಹಿರಿಗಯ್ಯ, ಸುರೇಶ್, ಸಹಾಯಕ ಅಂಚೆ ಅಧೀಕ್ಷಕ ಎನ್.ರಮೇಶ್, ಐಪಿಪಿಬಿ ವ್ಯವಸ್ಥಾಪಕ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

ದೇಶಾದ್ಯಂತ 650 ಶಾಖೆಗಳಲ್ಲಿ ಐಪಿಪಿಬಿ ಸೇವೆಗೆ ಶನಿವಾರದಂದು ಪ್ರಧಾನಿ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶಾದ್ಯಂತ 3,250 ಆಕ್ಸೆಸ್ ಪಾಯಿಂಟ್‍ಗಳೂ ಉದ್ಘಾಟನೆಗೊಂಡಿವೆ. ರಾಜ್ಯದಲ್ಲಿ 31 ಶಾಖೆಗಳಲ್ಲಿ ಈ ಸೇವೆಗೆ ಚಾಲನೆ ನೀಡಲಾಗಿದೆ. ಚಿಕ್ಕಮಗಳೂರು ವಿಭಾಗದಲ್ಲಿ ಚಿಕ್ಕಮಗಳೂರು ಪ್ರಧಾನ ಅಂಚೆ ಕಚೇರಿ, ರಾಮನಹಳ್ಳಿ ಉಪ ಶಾಖೆ ಹಾಗೂ ಗ್ರಾಮಾಂತರ ಶಾಖೆಗಳಾದ ಕಬ್ಬಿನಹಳ್ಳಿ, ಕರ್ತಿಕೆರೆ, ಮುಗುಳುವಳ್ಳಿ ಶಾಖೆಗಳಲ್ಲಿ ಈ ಸೇವೆ ಕಾರ್ಯಾರಂಭವಾಗಿದೆ. ಕಳೆದ 10 ದಿನಗಳಲ್ಲಿ ಈ ಸೇವೆಯಡಿಯಲ್ಲಿ ಚಿಕ್ಕಮಗಳೂರಿನಲ್ಲಿ 5677 ಖಾತೆಗಳನ್ನು ತೆರೆಯಲಾಗಿದೆ.
- ಜಿ.ಸಿ.ಶ್ರೀನಿವಾಸ್, ಅಂಚೆ ಇಲಾಖೆ ಅಧೀಕ್ಷಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News