ಚಿಕ್ಕಮಗಳೂರು: ರತ್ನಗಿರಿ ಬೋರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಡಿಸಿ ಸೂಚನೆ

Update: 2018-09-01 12:10 GMT

ಚಿಕ್ಕಮಗಳೂರು, ಸೆ.1: ನಗರದ ರತ್ನಗಿರಿಬೋರೆಯಲ್ಲಿ ಮಕ್ಕಳ ಉದ್ಯಾನವನವನ್ನು ಮೇಲ್ದರ್ಜೆಗೇರಿಸಲು ಕೈಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು. 

ರತ್ನಗಿರಿ ಬೋರೆಯಲ್ಲಿರುವ ಮಕ್ಕಳ ಉದ್ಯಾನವನದ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ  ಅಧಿಕಾರಿಗಳ ಹಾಗೂ ರತ್ನಗಿರಿ ಗಾರ್ಡನ್ ಟ್ರಸ್ಟ್ ನ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜುಲೈ 16 ರಂದು ನಡೆದ ಸಭೆಯಲ್ಲಿ ಲ್ಯಾಂಡ್‍ಸ್ಕೇಪ್ ಕಾಮಗಾರಿಗೆ 5 ಲಕ್ಷ ರೂ., ಜನರೇಟರ್, ಪಂಪ್ಸ್ ಅಂಡ್ ಪೈಪ್‍ಲೈನ್ ವರ್ಕ್ಸ್ 25 ಲಕ್ಷ ರೂ. ಡೆವಲಪ್‍ಮೆಂಟ್ ಆಫ್ ಚಿಲ್ರ್ಡನ್ಸ್ ಪ್ಲೇ ಏರಿಯಾ, ಸ್ಟೇಜ್-2 ಕಾಮಗಾರಿಗಳಿಗೆ 25 ಲಕ್ಷ ರೂ. ಕ್ರಿಯಾ ಯೋಜನೆ ಅನುಮೋದಿಸಿ ಟೆಂಡರ್ ಕರೆದು ಕೆಲಸ ಪ್ರಾರಂಭಿಸುವಂತೆ ಸೂಚಿಸಲಾಗಿತ್ತು. ಈ ಕೆಲಸಗಳನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದ್ದು, ಕೆಲಸ ಪ್ರಾರಂಭಿಸಲಾಗಿದೆ. ವಿದ್ಯುತ್ ಕಾರಂಜಿ ಉದ್ಯಾನವನದ ಗೇಟ್‍ವೇ ಪೈಪ್‍ಲೈನ್ ಸೇರಿದಂತೆ ಹಲವು ಕಾಮಗಾರಿಗಳ ಕೆಲಸ ಇನ್ನೂ ಪ್ರಾರಂಭವಾಗಿಲ್ಲ, ತ್ವರಿತಗತಿಯಲ್ಲಿ ಕೆಲಸ ಪೂರ್ಣಗೊಳಿಸುವಂತೆ ಹೇಳಿದರು.

ಗೃಹ ರಕ್ಷಕ ದಳದಿಂದ ಉದ್ಯಾನವನಕ್ಕೆ ನಾಲ್ವರು ಸೆಕ್ಯುರಿಟಿ ಗಾರ್ಡ್‍ಗಳನ್ನ ನೇಮಿಸುವಂತೆ ಈಗಾಗಲೇ ತಿಳಿಸಲಾಗಿದೆ. ಕೂಡಲೇ ಸೆಕ್ಯುರಿಟಿ ಗಾರ್ಡ್‍ಗಳನ್ನು ನೇಮಿಸುವಂತೆ ತಿಳಿಸಿದ ಅವರು, ಉದ್ಯಾನವನದಲ್ಲಿ ಶೌಚಾಲಯವನ್ನು ದುರಸ್ಥಿ ಪಡಿಸುವಂತೆ ಹಾಗೂ ಸ್ವಚ್ಚತೆ ಕಾಪಾಡಲು ಕ್ರಮ ವಹಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.

ಚಿಕ್ಕಮಗಳೂರಿನಲ್ಲಿ ಸಾರ್ವಜನಿಕವಾಗಿ ಹಾಗೂ ಪ್ರವಾಸಿಗರಿಗೆ ಮನರಂಜನೆ ನೀಡುವಂತಹ ಏಕೈಕ ಉದ್ಯಾನವನ ಇದಾಗಿದ್ದು, ಆದಷ್ಟು ತ್ವರಿತಗತಿಯಲ್ಲಿ ಹಾಗೂ ಆಕರ್ಷಣೀಯವಾಗಿ ಕಾಮಗಾರಿಯನ್ನು ಮಾಡುವಂತೆ ಅನುಷ್ಠಾನ ಏಜೆನ್ಸಿಯವರಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಜಿ.ಪಂ.ಮುಖ್ಯಕಾನಿರ್ವಹಣಾಧಿಕಾರಿ ಸಿ.ಸತ್ಯಭಾಮ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಸವರಾಜಯ್ಯ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರು, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News