ಕೊಡಗು: ಪ್ರವಾಸಿಗರ ಮೇಲಿನ ನಿರ್ಬಂಧ ಆದೇಶ ಸಡಿಲಿಸಲು ಮನವಿ

Update: 2018-09-01 17:10 GMT

ಮಡಿಕೇರಿ ಸೆ.1: ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಿಗರ ಪ್ರವೇಶದ ಮೇಲೆ ವಿಧಿಸಿರುವ ನಿರ್ಬಂಧವನ್ನು ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳಲ್ಲಿ ಸಡಿಲಗೊಳಿಸುವಂತೆ ಮತ್ತು ಸೆ.9ರ ಬಳಿಕ ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ಬಂಧವನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಕೊಡಗು ಜಿಲ್ಲಾ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಜಿಲ್ಲಾಡಳಿತವನ್ನು ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಶನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು, ಪ್ರಾಕೃತಿಕ ವಿಪತ್ತು ನಿರ್ವಹಣೆಯಲ್ಲಿ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಈ ಹಂತದಲ್ಲೆ ಹೊಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ 15 ರಿಂದ 20 ಸಾವಿರ ಮಂದಿಯ ಅತಂತ್ರ ಬದುಕನ್ನು ಗಮನಿಸಿ ಈಗಿರುವ ನಿರ್ಬಂಧದ ನಿರ್ಧಾರವನ್ನು ಕೈಬಿಡಬೇಕೆಂದು ಮನವಿ ಮಾಡಿದರು.

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ತಮ್ಮ ಸಂಘಟನೆ ಕೂಡ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದು, ಸುಮಾರು 2 ಸಾವಿರ ಕೊಠಡಿಗಳನ್ನು ಸಂತ್ರಸ್ತರು, ಅಧಿಕಾರಿಗಳು ಹಾಗೂ ತಜ್ಞರ ತಂಡಗಳಿಗೆ ಉಚಿತವಾಗಿ ಒದಗಿಸಿ ಸಹಕರಿಸಿದ್ದೇವೆ. ಪ್ರಕೃತಿ ವಿಕೋಪದಿಂದ ಮಡಿಕೇರಿ ತಾಲೂಕಿನಲ್ಲಿ ಹೆಚ್ಚಿನ ಹಾನಿ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಈಗಿನ ಪರಿಸ್ಥಿತಿಯಲ್ಲಿ ಪ್ರವಾಸಿಗರ ಮೇಲಿನ ನಿರ್ಬಂಧವನ್ನು ಸೆ.9 ರವರೆಗೆ ಮಡಿಕೇರಿ ತಾಲೂಕಿಗೆ ಮಾತ್ರ ಸೀಮಿತಗೊಳಿಸುವಂತೆ ಅವರು ಕೋರಿದರು.

ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕುಗಳಲ್ಲಿ ಅತಿವೃಷ್ಟಿಯಿಂದ ಯಾವುದೇ ಹೆಚ್ಚಿನ ಹಾನಿ ಸಂಭವಿಸದಿರುವುದರಿಂದ ಮತ್ತು ಈ ತಾಲೂಕಿನ ಪ್ರವಾಸಿ ಕೇಂದ್ರಗಳಿಗೆ ತೆರಳಲು ಯಾವುದೇ ತೊಂದರೆಗಳು ಇಲ್ಲದಿರುವುದರಿಂದ ಪ್ರವಾಸಿಗರ ಮೇಲಿನ ನಿರ್ಬಂಧವನ್ನು ತೆಗೆದುಹಾಕುವುದು ಸೂಕ್ತವೆಂದು ಅವರು ಸಲಹೆ ಮಾಡಿದರು. ಅಲ್ಲದೆ, ಪ್ರವಾಸಿಗರಿಗೆ ನಿರ್ಬಂಧ ವಿಧಿಸಬಹುದಾದ ಪ್ರೇಕ್ಷಣೀಯ ಸ್ಥಳಗಳನ್ನು ಪಟ್ಟಿ ಮಾಡಿ ನೀಡಿದರೆ ನಾವು ಕೂಡ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವುದಾಗಿ ಹೇಳಿದರು.

ಜಿಲ್ಲಾಡಳಿತ ಮಡಿಕೇರಿ ನಗರದ 13 ವಸತಿಗೃಹಗಳನ್ನು ವಶಕ್ಕೆ ಪಡೆದುಕೊಂಡಿರುವುದು ಸರಿಯಲ್ಲ. ಇದರಿಂದ ಕೇವಲ ಒಂದಷ್ಟು ಮಂದಿಗೆ ಮಾತ್ರ ಹೊರೆಯಾಗಲಿದ್ದು, ಅದರ ಬದಲು ನಗರದಲ್ಲಿರುವ 50 ಕ್ಕೂ ಅಧಿಕ ವಸತಿ ಗೃಹಗಳನ್ನು ಸಂತ್ರಸ್ತರ ವಸತಿಗೋಸ್ಕರ ಹಂಚಿಕೆ ಮಾಡುವುದು ಒಳಿತು. ಇದಕ್ಕೆ ಎಲ್ಲಾ ವಸತಿಗೃಹಗಳ ಮಾಲೀಕರ ಸಹಮತವೂ ಇದೆಯೆಂದು ನಾಗೇಂದ್ರ ಪ್ರಸಾದ್ ಸ್ಪಷ್ಟಪಡಿಸಿದರು.

ಸಂಘಟನೆಯ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ಪ್ರಕೃತಿ ವಿಕೋಪದಿಂದಾಗಿ ಜಿಲ್ಲೆಯ ಬಹುತೇಕ ಮಂದಿ ಒಂದಲ್ಲ ಒಂದು ರೀತಿ ಸಂತ್ರಸ್ತರಾಗಿದ್ದಾರೆ. ವ್ಯಾಪಾರಿಗಳು ವ್ಯಾಪಾರವಿಲ್ಲದೆ, ನಷ್ಟಕ್ಕೆ ಒಳಗಾಗಿದ್ದಾರೆ. ಮಡಿಕೇರಿಯಲ್ಲಿ ವಾಣಿಜ್ಯ ವ್ಯವಹಾರಗಳು ಬಂದ್ ಆಗಿದ್ದು, ಆದಾಯವಿಲ್ಲದೆ ವಾಣಿಜ್ಯೋದ್ಯಮಿಗಳು ಹಾಗೂ ವರ್ತಕರು ಕಂಗಾಲಾಗಿದ್ದಾರೆ. ಸರ್ಕಾರ ಪ್ರತಿ ತಿಂಗಳ 10 ರ ಒಳಗಾಗಿ ಜಿಎಸ್‍ಟಿ ಪಾವತಿಸುವುದನ್ನು ಕಡ್ಡಾಯ ಮಾಡಿದೆ. ಆದರೆ, ಪ್ರಕೃತಿ ವಿಕೋಪದಿಂದ ಹಲವರ ದಾಖಲೆಗಳು ಕಳೆದುಹೋಗಿವೆ ಮತ್ತು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇಂದಿನ ಈ ಪರಿಸ್ಥಿತಿಯಲ್ಲಿ ಜಿಎಸ್‍ಟಿ ಪಾವತಿ ಅಸಾಧ್ಯವಾಗಿರುವುದರಿಂದ ಇದನ್ನು ತಿಂಗಳ ಮಟ್ಟಿಗೆ ರದ್ದು ಮಾಡಬೇಕು ಮತ್ತು ಪರ್ಯಾಯ ವ್ಯವಸ್ಥೆಯ ಬಗ್ಗೆ ಸಲಹೆಗಳನ್ನು ನೀಡಬೇಕೆಂದು ಮನವಿ ಮಾಡಿದರು. ಆದಾಯತೆರಿಗೆ ಪಾವತಿಸುವುದು ಕಷ್ಟ ಸಾಧ್ಯವಾಗಿರುವುದರಿಂದ ಈ ವರ್ಷದ ಮಟ್ಟಿಗೆ ಆದಾಯ ತೆರಿಗೆಯಲ್ಲಿ ರಿಯಾಯಿತಿ ಘೋಷಿಸಲು ಜನಪ್ರತಿನಿಧಿಗಳು ಶಿಫಾರಸ್ಸು ಮಾಡಬೇಕೆಂದು ಚಿದ್ವಿಲಾಸ್ ಹೇಳಿದರು.

ಅಧ್ಯಕ್ಷ ನಾಗೇಂದ್ರ ಪ್ರಸಾದ್ ಮಾತನಾಡಿ, ಬಹುತೇಕ ವ್ಯಾಪಾರ ವಹಿವಾಟು ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ನೆಲ ಕಚ್ಚಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆರು ತಿಂಗಳ ಮಟ್ಟಿಗೆ ಸಾಲದ ಕಂತುಗಳ ಮರುಪಾವತಿಗೆ ರಜೆಯನ್ನು ಘೋಷಿಸುವುದರೊಂದಿಗೆ ಆ ಹಣವನ್ನು ಬಡ್ಡಿ ರಹಿತವಾಗಿ ಮುಂದಿನ ದಿನಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಬೇಕೆಂದು  ಸರ್ಕಾರವನ್ನು ಒತ್ತಾಯಿಸಿದರು. ಕೇರಳ ರಾಜ್ಯದಲ್ಲಿ ಈ ಕ್ರಮವನ್ನು ಜಾರಿಗೆ ತರಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಖಜಾಂಚಿ ಭಾಸ್ಕರ್, ನಿರ್ದೇಶಕರುಗಳಾದ ಮಂಜುನಾಥ್, ಬಿ.ಎಸ್. ಸದಾನಂದ, ಹಾಗೂ ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್‍ನ ನಿರ್ದೇಶಕ ಅಂಬೆಕಲ್ ನವೀನ್ ಕುಶಾಲಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News