ನಗರ ನಕ್ಸಲ್‌ವಾದ ಎಂಬುದೇ ಇಲ್ಲ: ಪಿ. ಚಿದಂಬರಂ

Update: 2018-09-02 17:00 GMT

ನಾಗಪುರ, ಸೆ. 2: ನಗರ ನಕ್ಸಲ್‌ವಾದದಂತಹ ವಿಚಾರವೇ ಅಸ್ತಿತ್ವದಲ್ಲಿ ಇಲ್ಲ. ಗೃಹಬಂಧನದಲ್ಲಿರುವ ಐವರು ಎಡಪಂಥೀಯ ಬುದ್ಧಿಜೀವಿಗಳು ಎಂದು ಕೇಂದ್ರದ ಮಾಜಿ ಗೃಹ ಸಚಿವ ಪಿ. ಚಿದಂಬರಂ ಶನಿವಾರ ಪ್ರತಿಪಾದಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಜನವರಿಯಲ್ಲಿ ನಡೆದ ಭೀಮಾ-ಕೋರೆಗಾಂವ್ ಹಿಂಸಾಚಾರದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಇತ್ತೀಚೆಗೆ ಐದು ಮಂದಿ ಸಾಮಾಜಿಕ ಹೋರಾಟಗಾರರನ್ನು ಬಂಧಿಸಿರುವುದನ್ನು ಖಂಡಿಸಿರುವ ಅವರು, ‘ನಗರ ನಕ್ಸಲೀಯರು’ ಎಂಬ ವ್ಯಾಖ್ಯಾನವನ್ನು ತಾನು ಒಪ್ಪಿಕೊಳ್ಳಲಾರೆ ಎಂದಿದ್ದಾರೆ. ಮಾವೋವಾದಿಗಳ ನಂಟು ಇದೆ ಎಂಬ ಆರೋಪದಲ್ಲಿ ಸಾಮಾಜಿಕ ಹೋರಾಟಗಾರರಾಗಿರುವ ಪಿ. ವರವರ ರಾವ್, ಗೌತಮ್ ನೌಲಾಖಾ, ಸುಧಾ ಭಾರದ್ವಾಜ್, ಅರುಣ್ ಫೆರೇರಾ ಹಾಗೂ ವೆರ್ನೆನ್ ಗೋನ್ಸಾಲ್ವಿಸ್ ಅವರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದರು.

‘‘ಅವರು ಎಡಪಂಥೀಯ ಬುದ್ಧಿಜೀವಿಗಳು. ಬುಡಕಟ್ಟು ಜನರು ಹಾಗೂ ದುರ್ಬಲರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಲಪಂಥೀಯ ವಿಚಾರಧಾರೆಯನ್ನು ಅವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಆದುದರಿಂದ ಸರಕಾರ ಅವರಲ್ಲಿ ಭೀತಿ ಹುಟ್ಟಿಸುತ್ತಿದೆ. ಈ ಬಂಧನದ ಬಗ್ಗೆ ಸುಪ್ರೀಂ ಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ ಹಾಗೂ ಅವರನ್ನು ಬಂಧನದಿಂದ ಬಿಡುಗಡೆಗೊಳಿಸಿದೆ. ಅವರನ್ನು ಬಂಧಿಸಿ ಕೆಲವು ದಿನಗಳಾದರೂ ಪೊಲೀಸರು ಯಾವುದೇ ಪುರಾವೆಗಳನ್ನು ಬಹಿರಂಗಪಡಿಸುತ್ತಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಹಾಗೂ ವಿರೋಧಿ ಸಿದ್ಧಾಂತಗಳನ್ನು ನಾಶಮಾಡುವ ಪ್ರಯತ್ನ. ಬಿಜೆಪಿ ಸರಕಾರದ ವಿರುದ್ಧ ಮಾತನಾಡುವ ಅವರಲ್ಲಿ ಭೀತಿ ಹುಟ್ಟಿಸಲು ಬಂಧಿಸಲಾಯಿತು’’ ಎಂದು ಅವರು ಹೇಳಿದ್ದಾರೆ.

 ನಾಗರಿಕ ಹಕ್ಕು ಹೋರಾಟ ಪ್ರಜಾಪ್ರಭುತ್ವದ ಸುರಕ್ಷಾ ಕವಾಟ ಎಂದು ಸುಪ್ರೀಂ ಕೋರ್ಟ್‌ನ ಆದೇಶ ಹೇಳಿದೆ. ಬಂಧಿತರೆಲ್ಲರೂ ಬುದ್ಧಿಜೀವಿ, ಕವಿ ಹಾಗೂ ಸಾಮಾಜಿಕ ಹೋರಾಟಗಾರರು ಎಂದು ಚಿದಂಬರಂ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News