ಶಿವಮೊಗ್ಗ: ಎರಡು ಗುಂಪುಗಳ ನಡುವೆ ಘರ್ಷಣೆ; ಬಿಗಿ ಪೊಲೀಸ್ ಪಹರೆ

Update: 2018-09-02 17:03 GMT

ಶಿವಮೊಗ್ಗ, ಸೆ. 2: ಚಪ್ಪಲಿ ಮಾರಾಟ ಅಂಗಡಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಶನಿವಾರ ರಾತ್ರಿ ನಡೆದ ಘರ್ಷಣೆಯ ನಂತರ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ನಗರದ ಕಸ್ತೂರ್ ಬಾ ಸುತ್ತಮುತ್ತಲಿನ ರಸ್ತೆಗಳಲ್ಲಿ ಭಾನುವಾರ ಶಾಂತ ಪರಿಸ್ಥಿತಿ ಮನೆ ಮಾಡಿತ್ತು. 

ಘರ್ಷಣೆ ನಡೆದ ಕಸ್ತೂರ ಬಾ ರಸ್ತೆ ಸೇರಿದಂತೆ ಈ ರಸ್ತೆಗೆ ಹೊಂದಿಕೊಂಡಂತಿರುವ ಗಾಂಧಿ ಬಜಾರ್, ಎಂ.ಕೆ.ಕೆ.ರಸ್ತೆ ಹಾಗೂ ಅಡ್ಡ ರಸ್ತೆಗಳಲ್ಲಿ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಗಸ್ತು ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. 

ಕಸ್ತೂರ ಬಾ ರಸ್ತೆಯಲ್ಲಿ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ವಾಹನ ಸಂಚಾರ ಕೂಡ ವಿರಳವಾಗಿತ್ತು. ಉಳಿದಂತೆ ಈ ರಸ್ತೆಗೆ ಹೊಂದಿಕೊಂಡಂತಿದ್ದ ಇತರೆ ರಸ್ತೆಗಳಲ್ಲಿ ಜನ-ವಾಹನ, ವ್ಯಾಪಾರ-ವಹಿವಾಟು ಎಂದಿನಂತಿತ್ತು. ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಭಾನುವಾರ ಈ ರಸ್ತೆಗಳಲ್ಲಿ ಸಂಚರಿಸಿ ಪರಿಸ್ಥಿತಿಯ ಖುದ್ದು ಅವಲೋಕನ ನಡೆಸಿದರು. 

ಘಟನೆ ಹಿನ್ನೆಲೆ: ಶನಿವಾರ ರಾತ್ರಿ ಸರಿಸುಮಾರು 8 ಗಂಟೆಯ ವೇಳೆ ಕಸ್ತೂರ ಬಾ ರಸ್ತೆಯಲ್ಲಿ ಚಪ್ಪಲಿ ಖರೀದಿಗೆಂದು ಆಗಮಿಸಿದ್ದ ಅನ್ಯ ಕೋಮಿನ ಯುವತಿಯ ಜೊತೆ, ಅಂಗಡಿಯವರು ಅಸಭ್ಯವಾಗಿ ವರ್ತಿಸಿದರೆಂಬ ಆರೋಪ ಕೇಳಿಬಂದಿತ್ತು. ಈ ಕುರಿತಂತೆ ಯುವತಿಯ ಕಡೆಯವರು ಅಂಗಡಿಗೆ ಆಗಮಿಸಿ ಮಾತುಕತೆ ನಡೆಸುತ್ತಿದ್ದರು. ಇದೇ ಹಂತದಲ್ಲಿ ಸಂಘಪರಿವಾರದ ಕೆಲ ಕಾರ್ಯಕರ್ತರು ಅಂಗಡಿ ಮುಂಭಾಗ ಜಮಾಯಿಸಿದ್ದರು. ಉದ್ವಿಗ್ನ ಪರಿಸ್ಥಿತಿ ನೆಲೆಸಿತ್ತು. ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು, ಕಲ್ಲು ತೂರಾಟ ಕೂಡ ನಡೆದಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ್ದ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದ್ದರು. ಕಲ್ಲು ತೂರಾಟ, ಘರ್ಷಣೆಯಲ್ಲಿ ಈರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಘರ್ಷಣೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ.  

ಯಾವುದೇ ಗೊಂದಲವಿಲ್ಲ- ಪರಿಸ್ಥಿತಿ ಶಾಂತ': ಎಸ್.ಪಿ.ಅಭಿನವ್ ಖರೆ
ನಗರದ  ಕಸ್ತೂರ ಬಾ ರಸ್ತೆಯಲ್ಲಿ ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಶಾಂತವಾಗಿದೆ. ಯಾವುದೇ ಗೊಂದಲ-ಗಡಿಬಿಡಿ ಇಲ್ಲವಾಗಿದೆ. ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ನಾಗರೀಕರು ಆತಂಕಪಡುವ ಅಗತ್ಯವಿಲ್ಲ. ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ತಿಳಿಸಿದ್ದಾರೆ. 

ಭಾನುವಾರ ಎಸ್.ಪಿ. ಅಭಿನವ್ ಖರೆಯವರು ಕಸ್ತೂರ ಬಾ ರಸ್ತೆ, ಗಾಂಧಿಬಜಾರ್ ರಸ್ತೆಗೆ ಭೇಟಿಯಿತ್ತು ಪರಿಸ್ಥಿತಿಯ ಅವಲೋಕನ ನಡೆಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು. 'ಶಾಂತಿ-ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು. ನಾಗರಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು' ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News