ದೇಶದಲ್ಲಿ ಕ್ಷೀಣಿಸುತ್ತಿರುವ ಸಾರ್ವಜನಿಕ ಸಾರಿಗೆ

Update: 2018-09-03 05:44 GMT

ಹೊಸದಿಲ್ಲಿ, ಸೆ.3: ಭಾರತದಲ್ಲಿ ಆಟೊಮೊಬೈಲ್ ಉದ್ಯಮದ ದಾಳಿಗೆ ತತ್ತರಿಸಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಗಣನೀಯವಾಗಿ ಕ್ಷೀಣಿಸುತ್ತಿದೆ. ಜನ ಬಸ್ ಹಾಗೂ ರೈಲುಯಾನದ ಬದಲು ಕಾರು ಹಾಗೂ ದ್ವಿಚಕ್ರ ವಾಹನಗಳ ಮೊರೆ ಹೋಗುತ್ತಿರುವ ಪ್ರವೃತ್ತಿ ಕಂಡುಬಂದಿದೆ. ಇದರಿಂದಾಗಿ ಒಟ್ಟಾರೆ ಸಂಚಾರ ವ್ಯವಸ್ಥೆಯಲ್ಲಿ ಸಾರ್ವಜನಿಕ ಸಾರಿಗೆ ಪಾಲು ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದು, ವರ್ಷದಿಂದ ವರ್ಷಕ್ಕೆ ಪರಿಸ್ಥಿತಿ ಹದಗೆಡುತ್ತಿದೆ.

ದೇಶದ ಪ್ರಮುಖ ನಗರಗಳಲ್ಲಿ 1994ರಲ್ಲಿ ಪ್ರಯಾಣಿಕರ ಪೈಕಿ ಶೇಕಡ 60ರಿಂದ ಶೇಕಡ 80ರಷ್ಟು ಮಂದಿ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದರೆ, ಈ ಪಾಲು 2018ರಲ್ಲಿ ಶೇಕಡ 25-35ಕ್ಕೆ ಇಳಿಯುವ ನಿರೀಕ್ಷೆ ಇದೆ. ಇದಕ್ಕೆ ಮುಖ್ಯ ಕಾರಣ ನಗರ ಬಸ್ಸುಗಳ ಮೂಲಸೌಕರ್ಯದ ಕೊರತೆ. ಕಳೆದ ನಾಲ್ಕು ವರ್ಷಗಳಲ್ಲಿ ಬಸ್ಸುಗಳ ಸಂಖ್ಯೆ ಅಗತ್ಯಕ್ಕೆ ತಕ್ಕಂತೆ ಹೆಚ್ಚದಿರುವುದು ಜನ ವಿಮುಖವಾಗಲು ಮುಖ್ಯ ಕಾರಣ. ದ್ವಿಚಕ್ರ ಹಾಗೂ ಚತುಶ್ಚಕ್ರ ವಾಹಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ನಗರ ರಸ್ತೆಗಳಲ್ಲಿ ವಾಹನದಟ್ಟಣೆಗೆ ಕಾರಣವಾಗಿದೆ.

ಕಳೆದ 10-15 ವರ್ಷಗಳಲ್ಲಿ ದಿಲ್ಲಿ ಮತ್ತು ಬೆಂಗಳೂರು ನಗರಗಳಲ್ಲಿ ಮೆಟ್ರೊ ನಿರ್ಮಾಣ ಕ್ಷಿಪ್ರವಾಗಿ ಆಗುತ್ತಿದ್ದರೂ, ಮುಂಬೈ, ಜೈಪುರ ಮತ್ತು ಲಕ್ನೋದಂಥ ನಗರದಲ್ಲಿ ನಿರೀಕ್ಷಿತ ವೇಗದಲ್ಲಿಲ್ಲ ಎನ್ನುವುದು ಜಾಗತಿಕ ಕನ್ಸಲ್ಟಿಂಗ್ ಕಂಪನಿಯಾದ ಎ.ಟಿ.ಕೀರ್ನಿ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. 2014-17ರ ಅವಧಿಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳ ಸಂಖ್ಯೆ ವಾರ್ಷಿಕ ಶೇಕಡ 8-10ರಷ್ಟು ಹೆಚ್ಚುತ್ತಿದೆ. ಆದರೆ ಬಸ್ಸುಗಳ ಸಂಖ್ಯೆ 2017ರಿಂದೀಚೆಗೆ ಕುಸಿಯುತ್ತಿದೆ.

ಇದು ಆತಂಕಕಾರಿ ಪರಿಸ್ಥಿತಿಗೆ ಕಾರಣವಾಗಿದೆ ಎನ್ನುವುದು ನಗರ ಯೋಜನಾ ತಜ್ಞರ ಸ್ಪಷ್ಟ ಅಭಿಪ್ರಾಯ. "ಕಾರು ಅಥವಾ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯಿಂದ ನೇರವಾಗಿ ಕಚೇರಿಗೆ ತೆರಳುವುದು ಸುಲಭ. ಜತೆಗೆ ಸಾರ್ವಜನಿಕ ಸಾರಿಗೆ ಬಳಸಲು ಯಾವುದೇ ಪ್ರೋತ್ಸಾಹಕವಾಗಲೀ, ಸ್ವಂತ ವಾಹನಗಳನ್ನು ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಅಧಿಕ ಪಾರ್ಕಿಂಗ್ ಶುಲ್ಕ ಅಥವಾ ಅಧಿಕ ನೋಂದಣಿ ಶುಲ್ಕದಂಥ ಯಾವ ನಿರುತ್ತೇಜಕ ಕ್ರಮಗಳೂ ಇಲ್ಲದಿರುವುದು ಸಮಸ್ಯೆಗೆ ಮೂಲ" ಎಂದು ಸರ್ಕಾರಿ ಅಧಿಕಾರಿಯೊಬ್ಬರು ಹೇಳುತ್ತಾರೆ.

ಒಟ್ಟು 19 ಲಕ್ಷ ನೋಂದಣಿಯಾದ ಬಸ್ಸುಗಳ ಪೈಕಿ ಕೇವಲ 1.4 ಲಕ್ಷ ಮಾತ್ರ ಸಾರಿಗೆ ಸಂಸ್ಥೆಯ ಅಧೀನದಲ್ಲಿದೆ. ಉಳಿದ ಶೇಕಡ 90ರಷ್ಟು ಬಸ್ಸುಗಳನ್ನು ಖಾಸಗಿ ಸಂಘ ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳು ಓಡಿಸುತ್ತಿವೆ ಎನ್ನುವುದು ಅಧ್ಯಯನ ವರದಿಯಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News