ಕಾಂಗ್ರೆಸ್ ಅಭ್ಯರ್ಥಿಯ ವಿಜಯೋತ್ಸವ ಮೆರವಣಿಗೆ ಮೇಲೆ ರಾಸಾಯನಿಕ ದಾಳಿ: 25ಕ್ಕೂ ಹೆಚ್ಚು ಮಂದಿಗೆ ಗಾಯ

Update: 2018-09-03 11:56 GMT

ತುಮಕೂರು, ಸೆ.03: ನಗರಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ವಿಜಯೋತ್ಸವ ಆಚರಿಸುವ ವೇಳೆ ಅಪರಿಚಿತ ದುಷ್ಕರ್ಮಿಯೊಬ್ಬ ಆ್ಯಸಿಡ್ ಮಾದರಿ ರಾಸಾಯನಿಕ ದಾಳಿ ನಡೆಸಿದ್ದು, 25 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಡೆದಿದೆ.

ಆಗಸ್ಟ್ 31 ರಂದು ನಡೆದಿದ್ದ ತುಮಕೂರು ಮಹಾನಗರಪಾಲಿಕೆಯ ಚುನಾವಣೆಯ ಮತ ಎಣಿಕೆ ಸೋಮವಾರ ಮುಕ್ತಾಯಗೊಂಡಿದ್ದು, 16ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಇನಾಯತುಲ್ಲಾಖಾನ್ ಜಯಗಳಿಸಿದ್ದರು. ಗೆದ್ದ ಅಭ್ಯರ್ಥಿಯನ್ನು ಬೆಂಬಲಿಗರು ವಾರ್ಡಿನಲ್ಲಿ ಮೆರವಣಿಗೆ ಮಾಡುವ ವೇಳೆ, ಮೆರವಣಿಗೆ ಬಾರ್ ಲೈನ್ ರಸ್ತೆಯಲ್ಲಿರುವ ಮಾಜಿ ಶಾಸಕ ಎಸ್. ಶಪಿ ಅಹಮದ್ ಮನೆ ವೃತ್ತಕ್ಕೆ ಬಂದಾಗ ದುಷ್ಕರ್ಮಿಯೊಬ್ಬ ಬಾಟಲಿನಲ್ಲಿ ಆ್ಯಸಿಡ್ ಮಾದರಿಯ ರಾಸಾಯನಿಕ ತುಂಬಿಕೊಂಡು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಎರಚಿದ್ದು, ಇದರಿಂದ ಸುಮಾರು 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ನಗರದ ಕೋತಿ ತೋಪಿನಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಷಯ ತಿಳಿದ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪ್ರಕರಣವನ್ನು ಖಂಡಿಸಿ, ಕೆಲ ಕಾಲ ರಸ್ತೆ ನಡೆಸಿದರು. ಆಸ್ಪತ್ರೆಗೆ ಮಾಜಿ ಸಚಿವ ಎಸ್.ಶಿವಣ್ಣ, ಮಾಜಿ ಶಾಸಕರಾದ ಎಸ್. ಶಪಿ ಅಹಮದ್, ಡಾ.ಎಸ್.ರಫೀಕ್ ಅಹಮದ್ ಭೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು. 

ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ಬಂಧನ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರ ಮೇಲೆ ಎಸೆದಿರುವುದು ಆ್ಯಸಿಡ್ ಅಲ್ಲ,ರಾಸಾಯನಿಕ. ಈಗಾಗಲೇ ರಸಾಯನಿಕ ಎರಚುತ್ತಿರುವ ವಿಡಿಯೋ ಪೂಟೇಜ್ ಪೊಲೀಸರಿಗೆ ಲಭ್ಯವಾಗಿದ್ದು, ಶೀಘ್ರವೇ ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News