ಮುಂಬೈ ಲೋಕಲ್ ಟ್ರೈನ್‌ನಿಂದ ಬಿದ್ದು ಮೃತರಾಗುವವರ ಸಂಖ್ಯೆ ಹೆಚ್ಚಳ

Update: 2018-09-03 14:05 GMT

ಮುಂಬೈ, ಸೆ.3: ಪ್ರಯಾಣಿಕರಿಂದ ಕಿಕ್ಕಿರಿದು ತುಂಬುವ ಮುಂಬೈಯ ಲೋಕಲ್ ಟ್ರೈನ್‌ನಲ್ಲಿ ಪ್ರಯಾಣಿಸುವ ಸಂದರ್ಭ ಕೆಳಗೆ ಬಿದ್ದು ಸಾವನ್ನಪ್ಪಿದ ಹಾಗೂ ಗಾಯಗೊಂಡವರ ಸಂಖ್ಯೆ ಈ ವರ್ಷ ಹೆಚ್ಚಿದೆ. ಕಳೆದ ಏಳು ತಿಂಗಳಲ್ಲಿ ರೈಲಿನಿಂದ (ಜನವರಿಯಿಂದ ಜುಲೈವರೆಗೆ) ಬಿದ್ದು ಸಾವನ್ನಪ್ಪಿರುವ ಪ್ರಯಾಣಿಕರ ಸಂಖ್ಯೆ 406. ಅಂದರೆ ಪ್ರತೀ ದಿನ ಇಬ್ಬರು ಪ್ರಯಾಣಿಕರು ರೈಲಿನಿಂದ ಬಿದ್ದು ಮೃತರಾಗಿದ್ದಾರೆ.

 ಇದೇ ಅವಧಿಯಲ್ಲಿ ತೀವ್ರವಾಗಿ ಗಾಯಗೊಂಡ ಪ್ರಯಾಣಿಕರ ಸಂಖ್ಯೆ 871 ಎಂದು ರೈಲ್ವೇ ಪೊಲೀಸ್ ಆಯುಕ್ತ ನಿಕೇತ್ ಕೌಶಿಕ್ ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 360 ಪ್ರಯಾಣಿಕರು ಮೃತಪಟ್ಟಿದ್ದು 654 ಮಂದಿ ಗಾಯಗೊಂಡಿದ್ದರು. 2011ರಲ್ಲಿ ಉಪನಗರಗಳಲ್ಲಿ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರ ನಿಬಿಡತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಮುಂಬೈ ರೈಲ್ ವಿಕಾಸ ಕಾರ್ಪೊರೇಶನ್ ಲಿ.(ಎಂಆರ್‌ವಿಸಿ) ಅಧ್ಯಯನ ನಡೆಸಿ ತಯಾರಿಸಿದ ವರದಿಯ ಶಿಫಾರಸುಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಾರದಿರುವುದು ಸಾವಿನ ಪ್ರಮಾಣ ಹೆಚ್ಚಳಕ್ಕೆ ಪ್ರಧಾನ ಕಾರಣವಾಗಿದೆ ಎಂದು ಹೇಳಲಾಗಿದೆ.

 12 ಮತ್ತು 15 ಕಾರ್ ರ್ಯಾಕ್ಸ್‌ಗಳ ಅಳವಡಿಕೆ, ಕ್ಯಾಬ್ ಸಿಗ್ನಲ್ ವ್ಯವಸ್ಥೆ, ಸಂವಹನ ಆಧರಿತ ರೈಲು ನಿಯಂತ್ರಣ ವ್ಯವಸ್ಥೆ(ಸಿಬಿಡಿಟಿ) ಜಾರಿಗೊಳಿಸುವುದು ಮುಂತಾದ ಶಿಫಾರಸುಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಕಾರ್ ರ್ಯಾಕ್ಸ್ ಅಳವಡಿಸುವ ಸಲಹೆ ಮಾತ್ರ ಅನುಷ್ಟಾನಕ್ಕೆ ಬಂದಿದೆ. 2011ರಿಂದ 2018ರ ಅವಧಿಯಲ್ಲಿ ಉಪನಗರ ರೈಲ್ವೇ ಜಾಲದ ಮೂಲಕ ಪ್ರಯಾಣಿಸುವವರ ಸಂಖ್ಯೆ 8 ಮಿಲಿಯನ್‌ಗೆ(ಈ ಹಿಂದೆ 6.5 ಮಿಲಿಯನ್) ಹೆಚ್ಚಿದೆ. ಇದೇ ಸಂದರ್ಭ ಕೇಂದ್ರ ರೈಲ್ವೇ 462 ಹೆಚ್ಚುವರಿ ರೈಲು ಸೇವೆಯನ್ನು ಮತ್ತು ಪಶ್ಚಿಮ ರೈಲ್ವೇ 415 ಹೆಚ್ಚುವರಿ ರೈಲು ಸೇವೆಯನ್ನು ಒದಗಿಸಿದರೂ, ರೈಲ್ವೇ ಸೇವೆಗಳ ಹೆಚ್ಚಳ ಹಾಗೂ ಪ್ರಯಾಣಿಕರ ಹೆಚ್ಚಳ ಯಥೋಚಿತವಾಗಿಲ್ಲ.

ರೈಲು ಸೇವೆಯ ರದ್ದತಿಯ ಘಟನೆ ಹೆಚ್ಚಾಗಿರುವುದೂ ರೈಲು ಸಂಬಂಧಿ ಅಪಘಾತಗಳ ಪ್ರಕರಣ ಹೆಚ್ಚಲು ಕಾರಣವಾಗಿದೆ. ಕಳೆದ 15 ವರ್ಷಗಳಲ್ಲಿ ರೈಲು ಸೇವೆ ರದ್ದತಿ ಘಟನೆಯ ಸರಾಸರಿ ಶೇ.0.1ರಿಂದ ಶೇ.4ಕ್ಕೆ ಹೆಚ್ಚಿದೆ. ಪ್ರಯಾಣಿಕರಿಗೆ ಯಾವುದೇ ಸೂಚನೆ ನೀಡದೆ ಪ್ರತೀ ದಿನ ಸುಮಾರು 100 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗುತ್ತದೆ. ಇದರಿಂದ ಇತರ ರೈಲುಗಳಲ್ಲಿ ಪ್ರಯಾಣಿಕರ ನಿಬಿಡತೆ ಹೆಚ್ಚಿ, ಪ್ರಯಾಣಿಕರು ಸಿಕ್ಕಿದೆಡೆ, ಹೆಚ್ಚಿನ ಸಂದರ್ಭ ಬಾಗಿಲಲ್ಲೇ ನೇತಾಡಿಕೊಂಡು ಪ್ರಯಾಣಿಸುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

 ರೈಲಿನಿಂದ ಕೆಳಗೆ ಬಿದ್ದು ಸಂಭವಿಸುವ ಅಪಘಾತಗಳನ್ನು ಕಡಿಮೆ ಮಾಡಬೇಕಿದ್ದರೆ ರೈಲ್ವೇ ಸೇವೆಗಳನ್ನು ಹೆಚ್ಚಿಸಬೇಕು ಮತ್ತು ರೈಲು ಸೇವೆ ರದ್ದುಗೊಳಿಸುವುದನ್ನು ಕಡಿಮೆ ಮಾಡಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕನಿಷ್ಟ 200 ರೈಲು ಸಂಚಾರವನ್ನು ಹೆಚ್ಚುವರಿಯಾಗಿ ಆರಂಭಿಸಬೇಕು ಎಂದು ಭಾರತೀಯ ರೈಲ್ವೇಯ ಮಾಜಿ ವಿಭಾಗೀಯ ವ್ಯವಸ್ಥಾಪಕ ವಿವೇಕ್ ಸಹಾಯ್ ಹೇಳಿದ್ದಾರೆ.

  ಡಬಲ್ ಡೆಕ್ಕರ್ ರೈಲುಗಳನ್ನು ಆರಂಭಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದರಿಂದ ಹೆಚ್ಚುವರಿ ರೈಲು ಸೇವೆ ಆರಂಭಿಸುವ ಅಗತ್ಯವಿರದು ಹಾಗೂ ರೈಲುಗಳಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸಬಹುದು. ಹೆಚ್ಚುವರಿ ರೈಲು ಹಳಿಗಳ ನಿರ್ಮಾಣ, ಎಕ್ಸ್‌ಪ್ರೆಸ್ ರೈಲುಗಳ ಮಾರ್ಗವನ್ನು ಪ್ರತ್ಯೇಕ ಹಳಿಗೆ ತಿರುಗಿಸುವುದು ಮುಂತಾದ ಕ್ರಮಗಳಿಂದ ಪ್ರಯಾಣಿಕರ ನಿಬಿಡತೆಯನ್ನು ತಡೆಯಬಹುದು ಎಂದು 2011ರಲ್ಲಿ ನಡೆಸಲಾಗಿದ್ದ ಎಂಆರ್‌ವಿಸಿ ಅಧ್ಯಯನ ತಂಡದಲ್ಲಿದ್ದ ಪ್ರೊ ಎಸ್.ತೇಕಿ ಹೇಳಿದ್ದಾರೆ.

ಲೋಕಲ್ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಲು ಮೂಲಭೂತ ಸೌಕರ್ಯ ಸಮಸ್ಯೆ ಕಾರಣ . ಇದಕ್ಕೆ ರೈಲು ಸೇವೆಯ ಹೆಚ್ಚಳವೇ ಸೂಕ್ತ ಪರಿಹಾರವಾಗಿದೆ ಎಂದು ರೈಲ್ವೇ ಸುರಕ್ಷತಾ ಪಡೆಯ ಹಿರಿಯ ವಿಭಾಗೀಯ ಆಯುಕ್ತ ಅನೂಪ್ ಶುಕ್ಲಾ ಹೇಳುತ್ತಾರೆ.

  ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು, ರೈಲಿನ ಟಾಪ್ ಮೇಲೆ ಕುಳಿತು ಸಂಚರಿಸುವುದು, ಚಲಿಸುತ್ತಿರುವ ರೈಲುಗಳನ್ನು ಏರುವುದು ಮತ್ತು ಇಳಿಯುವುದು ಮುಂತಾದವುಗಳನ್ನು ನಿಷೇಧಿಸುವ ನಿಯಮವನ್ನು ಕಠಿಣವಾಗಿ ಬಳಕೆಗೆ ತಂದರೆ ರೈಲು ಸಂಬಂಧಿ ಅಪಘಾತಗಳನ್ನು ನಿಯಂತ್ರಿಸಬಹುದು. ಈ ವರ್ಷ ಆಗಸ್ಟ್ 19ರವರೆಗೆ ಫುಟ್‌ಬೋರ್ಡ್‌ನಲ್ಲಿ ನಿಂತು ಪ್ರಯಾಣಿಸಿದ 5,105 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಕಳೆದ ವರ್ಷ ಈ ಸಂಖ್ಯೆ 3,318 ಆಗಿತ್ತು. ನಿಯಮ ಮೀರಿ ಪ್ರಯಾಣಿಸುವ ಪ್ರಯಾಣಿಕರಿಗೆ ಟಿಕೆಟ್ ಪರಿವೀಕ್ಷಕರೂ ದಂಡ ವಿಧಿಸಿದ್ದಾರೆ ಎಂದು ಅನೂಪ್ ಶುಕ್ಲ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News