ಶಾಟ್‌ಪುಟ್ ಪಟುವಿನ ಚಿನ್ನದ ಸಂಭ್ರಮಕ್ಕೆ ಸೂತಕದ ಛಾಯೆ !

Update: 2018-09-04 03:39 GMT

ಹೊಸದಿಲ್ಲಿ, ಸೆ. 4: ಏಷ್ಯನ್‌ಗೇಮ್ಸ್‌ನಲ್ಲಿ ಚಿನ್ನದ ಸಾಧನೆ ಮಾಡಿದ ಶಾಟ್‌ಪುಟ್ ಪಟು ತೇಜಿಂದರ್ ಪಾಲ್ ಸಿಂಗ್ ತೂರ್ ಅವರ ಜೀವಮಾನದ ನಿರೀಕ್ಷೆ ಇನ್ನೇನು ಈಡೇರುವ ಸಮಯ. ಆದರೆ ವಿಧಿಯಾಟ ಬೇರೆ ಇತ್ತು. ಜೀವಮಾನದ ಶ್ರೇಷ್ಠ ಸಾಧನೆಗೆ ಸಂದ ಚಿನ್ನದ ಪದಕವನ್ನು ತಂದೆಗೆ ಅರ್ಪಿಸಬೇಕು ಎಂದು ಜಕಾರ್ತದಿಂದ ಓಡೋಡಿ ಹುಟ್ಟೂರಿಗೆ ಬಂದ ಅಥ್ಲೀಟ್‌ಗೆ ತಂದೆಯ ನಿಧನದ ಸುದ್ದಿ ಬರಸಿಡಿಲಿನಂತೆ ಬಂದೆರಗಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಸಾಧನೆ ತೋರಿದ್ದ ತೂರ್, ಅನಾರೋಗ್ಯ ಪೀಡಿತರಾಗಿದ್ದ ತಂದೆಗೆ ತಾವು ಗಳಿಸಿದ ಚಿನ್ನದ ಪದಕವನ್ನು ಉಡುಗೊರೆಯಾಗಿ ನೀಡಬೇಕು ಎಂಬ ಕನಸು ಹಾಗೆಯೇ ಉಳಿಯಿತು. ಮಗನ ಉಜ್ವಲ ಭವಿಷ್ಯಕ್ಕಾಗಿ ಹಲವು ತ್ಯಾಗಗಳನ್ನು ಮಾಡಿದ್ದ ತಂದೆ ಎರಡು ವರ್ಷಗಳಿಂದ ಕ್ಯಾನ್ಸರ್ ಜತೆ ಹೋರಾಡುತ್ತಿದ್ದರು.

ಸೋಮವಾರ ಸಂಜೆ ಜಕಾರ್ತದಿಂದ ದೆಹಲಿಗೆ ಬಂದಿಳಿದ ತೂರ್, ತಮ್ಮ ಹುಟ್ಟೂರಾದ ಪಂಜಾಬ್‌ನ ಮೋಗಾದತ್ತ ಪ್ರಯಾಣ ಬೆಳೆಸಿದ್ದರು. ಸಂಭ್ರಮದ ಕ್ಷಣವನ್ನು ತಂದೆಯೊಂದಿಗೆ ಹಂಚಿಕೊಳ್ಳುವ ಹಂಬಲದಿಂದ ಪ್ರಯಾಣಿಸುತ್ತಿದ್ದಾಗಲೇ ತಂದೆ ಕರಮ್ ಸಿಂಗ್ ನಿಧನರಾದ ಸುದ್ದಿ ಬರಸಿಡಿಲಿನಂತೆ ಬಂದೆರಗಿತು.

ತಂದೆಯ ಆರೋಗ್ಯ ಹದಗೆಡುತ್ತಿರುವ ವಿಷಯದ ಅರಿವಿದ್ದ ತೂರ್, ದೆಹಲಿಗೆ ಬಂದ ತಕ್ಷಣ ರಸ್ತೆ ಮೂಲಕ ಮೋಗಾ ಪಟ್ಟಣಕ್ಕೆ ಪ್ರಯಾಣ ಆರಂಭಿಸಿದರು. ಆದರೆ ಹುಟ್ಟೂರಿಗೆ ಕೆಲವೇ ಕಿಲೋಮೀಟರ್ ಅಂತರದಲ್ಲಿ ಈ ಆಘಾತಕಾರಿ ಸುದ್ದಿ ತಿಳಿಯಿತು. ದೇಶಕ್ಕಾಗಿ ಪದಕ ಗೆದ್ದ ಮಗನ ಚಿನ್ನದ ಪದಕ ನೋಡುವ ತಂದೆಯ ಆಸೆ ಕೊನೆಗೂ ಈಡೇರಲೇ ಇಲ್ಲ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News