'ತೈಲಬೆಲೆ ಗಗನಕ್ಕೆ: ರೂಪಾಯಿ ಮೌಲ್ಯ ಪ್ರಪಾತಕ್ಕೆ'

Update: 2018-09-04 04:57 GMT

ಹೊಸದಿಲ್ಲಿ, ಸೆ. 4: ಸತತ ಒಂಬತ್ತನೇ ದಿನವಾದ ಸೋಮವಾರ ಕೂಡಾ ತೈಲ ಬೆಲೆ ಏರಿಕೆ ಮುಂದುವರಿದಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆ ಹಾಗೂ ಡಾಲರ್‌ನೆದುರು ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿದಿರುವುದು ಇದಕ್ಕೆ ಕಾರಣ. ದೇಶಾದ್ಯಂತ ಗ್ರಾಮೀಣ ಹಾಗೂ ನಗರ ಜನತೆಗೆ ತೈಲಬೆಲೆಯೇರಿಕೆಯ ಬಿಸಿ ತಟ್ಟಿದ್ದು, ಹಣದುಬ್ಬರ ಕೂಡಾ ಹೆಚ್ಚುವ ಸಾಧ್ಯತೆ ನಿಚ್ಚಳವಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ 79.15 ರೂಪಾಯಿ ತಲುಪಿದೆ. ರವಿವಾರ ಈ ದರ 78.84 ರೂಪಾಯಿ ಆಗಿತ್ತು. ಸೋಮವಾರ ಪ್ರತಿ ಲೀಟರ್‌ಗೆ 31 ಪೈಸೆ ದರ ಹೆಚ್ಚಳ ಮಾಡಿ ಸರ್ಕಾರಿ ಸ್ವಾಮ್ಯದ ತೈಲಕಂಪನಿಗಳು ಅಧಿಸೂಚನೆ ಹೊರಡಿಸಿವೆ. ದೆಹಲಿಯಲ್ಲಿ ತೈಲಬೆಲೆ ಇತರ ಮೆಟ್ರೋ ಹಾಗೂ ರಾಜ್ಯ ರಾಜಧಾನಿಗಳಿಗೆ ಹೋಲಿಸಿದರೆ ಅತ್ಯಂತ ಅಗ್ಗ. ಮುಂಬೈನಲ್ಲಿ ಸೋಮವಾರ ಪೆಟ್ರೋಲ್ ದರ 86.56 ರೂಪಾಯಿ ಆಗಿದ್ದರೆ, ಕೊಲ್ಕತ್ತಾ ಹಾಗೂ ಚೆನ್ನೈನಲ್ಲಿ  82.24 ರೂಪಾಯಿ ಇತ್ತು.

ಡೀಸೆಲ್ ದರ ಕೂಡಾ ಲೀಟರ್‌ಗೆ 39 ಪೈಸೆ ಹೆಚ್ಚಳವಾಗಿದ್ದು, ಇದು ಇಡೀ ವರ್ಷದಲ್ಲೇ ಒಂದೇ ದಿನ ಹೆಚ್ಚಳವಾದ ಗರಿಷ್ಠ ಮೊತ್ತವಾಗಿದೆ. ದೆಹಲಿಯಲ್ಲಿ ಡೀಸೆಲ್ ದರ ಸರ್ವಕಾಲಿಕ ಗರಿಷ್ಠಮಟ್ಟವನ್ನು ತಲುಪಿದ್ದು, ಲೀಟರ್‌ಗೆ 71.15 ರೂಪಾಯಿ ಆಗಿದೆ. ಡೀಸೆಲ್ ದರ ಮುಂಬೈನಲ್ಲಿ ಪ್ರತಿ ಲೀಟರ್‌ಗೆ 75.54 ರೂಪಾಯಿ ಆಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಈ ವರ್ಷದ ಆರಂಭದಿಂದ ಇದುವರೆಗೆ ಕ್ರಮವಾಗಿ ಶೇಕಡ 13 ಮತ್ತು ಶೇಕಡ 19ರಷ್ಟು ಹೆಚ್ಚಿದೆ. ಅಮೆರಿಕದಲ್ಲಿ ತೈಲಕ್ಷೇತ್ರದಲ್ಲಿ ಕುಸಿಯುತ್ತಿರುವ ಹೂಡಿಕೆ, ಇರಾನ್ ಮೇಲಿನ ದಿಗ್ಭಂಧನ ಮತ್ತಿತರ ಕಾರಣಗಳಿಂದ ತೈಲಬೆಲೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
ತೆರಿಗೆ ಪ್ರಮಾಣ 37% ಹಾಗೂ 47% ಇದ್ದು, ಡೀಲರ್ ಕಮಿಷನ್ 3.8% ಹಾಗೂ 4.8% ಇದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬ್ಕಾರಿ ಸುಂಕವನ್ನು ಒಂದು ರೂಪಾಯಿ ಕಡಿತಗೊಳಿಸಿದರೆ, ಬೊಕ್ಕಸಕ್ಕೆ 13 ಸಾವಿರ ಕೋಟಿ ರೂಪಾಯಿ ನಷ್ಟವಾಗುತ್ತದೆ.

ತೈಲಬೆಲೆ ಏರಿಕೆಗೆ ವಿರೋಧ ಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯಿಸಿವೆ. "ಮೋದಿಜೀ ಹಬ್ಬದ ದಿನವಾದರೂ ಸ್ವಲ್ಪ ಕರುಣೆ ತೋರಿಸಿ...ನಿಮ್ಮ ವಾಗ್ದಾನಗಳಿಗೆ ತೆರಿಗೆ ಇಲ್ಲ; ಆದರೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆ ಯಾವಾಗ ಇಳಿಸುತ್ತೀರಿ ? ನಿರೀಕ್ಷೆಯಲ್ಲಿ- ಹತಾಶ ಜನ" ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಕೃಷ್ಣಾಷ್ಟಮಿಯಂದು ಟ್ವೀಟ್ ಮಾಡಿದ್ದಾರೆ.

ಸಿಪಿಐಎಂ ಪಾಲಿಟ್‌ಬ್ಯೂರೊ ಸದಸ್ಯ ಎಂ.ಡಿ.ಸಲೀಂ ಅವರೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News