ಜನವಿರೋಧಿ ಆದೇಶದಿಂದ ಮಲೆನಾಡಿಗೆ ಮರಣಶಾಸನ: ಕಲ್ಕುಳಿ ವಿಠಲ್ ಹೆಗ್ಡೆ ಟೀಕೆ

Update: 2018-09-04 11:21 GMT

ಶೃಂಗೇರಿ, ಸೆ.4: ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧದ ಡಾ.ಕಸ್ತೂರಿರಂಗನ್ ವರದಿಯ ಕರಡು ಪ್ರಸ್ತಾಪದ ವಿರುದ್ಧ ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ರಾಜ್ಯ ಸರಕಾರ ಸಲ್ಲಿಸಿದ್ದ ತಕರಾರುಗಳನ್ನು ಬದಿಗಿಟ್ಟು ರಾಷ್ಟ್ರೀಯ ಹಸಿರು ನ್ಯಾಯಪೀಠವು ವರದಿಯ ಯಥಾವತ್ ಜಾರಿಗೆ ಆದೇಶಿಸಿರುವುದು ಜನವಿರೋಧಿ, ಅಸಾಂವಿಧಾನಿಕ ಮತ್ತು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ನಿಲುವಾಗಿದೆ ಎಂದು ಪರಿಸರ ಹೋರಾಟಗಾರ, ಚಿಂತಕ ಕಲ್ಕುಳಿ ವಿಠಲಹೆಗ್ಡೆ ಟೀಕಿಸಿದ್ದಾರೆ.

ಅವರು ಆ.28ರ ಹಸಿರು ನ್ಯಾಯಪೀಠದ ಯಥಾವತ್ ಜಾರಿಯ ಆದೇಶದಿಂದ ಮಲೆನಾಡಿನ ಸಾರ್ವಜನಿಕರಿಗೆ ಆಗಬಹುದಾದ ತೀವ್ರ ಹಾನಿಯ ಬಗ್ಗೆ ಎಚ್ಚರಿಸುವ ಸಲುವಾಗಿ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಆದೇಶದಲ್ಲಿ 2017ರ ಫೆ.27ರ ನಂತರ ಯಾವುದೇ ಸರಕಾರಗಳು ಸಾರ್ವಜನಿಕರಿಗಾಗಿ ಮಾಡಿರುವ ಮಾರ್ಪಾಟು, ಒಪ್ಪಂದ, ಆದೇಶಗಳು ಸಿಂಧುವಲ್ಲ ಎಂದು ತಿಳಿಸಲಾಗಿದೆ. ತಾಲೂಕಿನ ಶೇ.70ರಷ್ಟು ಭಾಗವು ಅನುಸೂಚಿತ ಪ್ರದೇಶದಲ್ಲಿ ಬರುವುದರಿಂದ ಇದು ಮಲೆನಾಡಿಗೆ ಕಂಟಕವಾಗಿದೆ. ಪರಿಸರದೊಂದಿಗೆ ಸಾರ್ವಜನಿಕರ ಸಹಬಾಳ್ವೆಗೆ ಇರುವ ಎಲ್ಲಾ ಅವಕಾಶಗಳನ್ನು ವರದಿಯಲ್ಲಿ ನಿರ್ಬಂಧಿಸಿರುವುದರಿಂದ ಮುಂದೆ ಇಲ್ಲಿ ಕೃಷಿಜೀವನ ಮಾಡುವುದು ದುಸ್ತರವಾಗಲಿದೆ ಎಂದು ಅವರು ಎಚ್ಚರಿಸಿದರು.

ಈ ಹಿಂದೆ ಪ್ರಕಟಿಸಿದ್ದ ಕರಡು ಸೂಚನೆಗೆ ಪೀಠವು ಆಹ್ವಾನಿಸಿದಂತೆ ನಾವು ತಕರಾರುಗಳನ್ನು ಲಿಖಿತವಾಗಿ ಸಲ್ಲಿಸಿದ್ದೆವು. ಆದರೆ ಇದಕ್ಕೆ ಯಾವುದೇ ಬೆಲೆ ನೀಡದ ಪೀಠವು ಏಕಪಕ್ಷೀಯವಾಗಿ ಆದೇಶ ಹೊರಡಿಸಿದೆ ಎಂದು ಆರೋಪಿಸಿದ ಅವರು, ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಮಳೆ ಮತ್ತು ಜಲದುರಂತಗಳಿಗೆ ಭೂಕಂಪ ಹಾಗೂ ಡ್ಯಾಂ ನೀರಿನ ಹೊರಹರಿವು ಕಾರಣ ಇರಬಹುದಾಗಿದೆ. ಈ ಬಗ್ಗೆ ವೈಜ್ಞಾನಿಕವಾದ ನಿಖರ ಕಾರಣವನ್ನು ಕಂಡು ಹಿಡಿಯುವ ಮೊದಲೇ ಗೋವಾ ಫೌಂಡೇಶನ್ ಎಂಬ ಎನ್‍ಜಿಒ ಸಂಸ್ಥೆಯು ದುರಂತಕ್ಕೆ ಪರಿಸರ ಹಾನಿಯೇ ಕಾರಣ ಎಂದಿದ್ದನ್ನು ಪೀಠವು ಮಾನ್ಯಮಾಡಿ ಗಡಿಬಿಡಿಯಲ್ಲಿ ಈ ಆದೇಶ ಹೊರಡಿಸಿರುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಟೀಕಿಸಿದರು.

ಒಂದು ಗ್ರಾಮದಲ್ಲಿ ಶೇ.50ರಷ್ಟು ಪರಿಸರ ಸೂಕ್ಷ್ಮತೆ ಇದ್ದಲ್ಲಿ ಅದನ್ನು ವರದಿ ವ್ಯಾಪ್ತಿಗೆ ಒಳಪಡಿಸುವಂತೆ ಮಾರ್ಪಾಟು ಮಾಡುವಂತೆ ನಾವು ಇಟ್ಟಿದ್ದ ಕೋರಿಕೆಗೆ ಮಾನ್ಯತೆ ನೀಡದೇ ಶೇ.25ರ ಸೂಕ್ಷ್ಮ ಪ್ರದೇಶಕ್ಕೂ ಸೂಕ್ಷ್ಮ ಪ್ರದೇಶದ ನಿಯಮ ಜಾರಿ ಮಾಡಿರುವುದರಿಂದ ಇಲ್ಲಿ ಮನುಷ್ಯ ಜೀವಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ವರದಿ ಜಾರಿಯಿಂದ ಗಣಿಗಾರಿಕೆ, ನಗರಿಕರಣಕ್ಕೆ ತಡೆ ಬೀಳುವುದನ್ನೇ ಪ್ರಮುಖವಾಗಿ ತೋರಿಸಲಾಗುತ್ತಿದೆ. ಆದರೆ, ನಿವಾಸಿಗಳು ಇಲ್ಲಿ ಕಲ್ಲು, ಮರಳು ಬಳಸುವುದರಿಂದ ಹಿಡಿದು, ಅಡಿಕೆಗೆ ಬೋರ್ಡೊ ಮಿಶ್ರಣ ಸಿಂಪರಣೆ ಮಾಡುವುದಕ್ಕೂ ಕಾಯ್ದೆ ವಿರೋಧವಾಗಲಿದೆ. ಕೃಷಿ ನಿಷೇಧದ ಜೊತೆಗೆ ರೈತರು 4.1ರ ಅನ್ವಯ ಒತ್ತುವರಿ ಮಾಡಿದ ಕಂದಾಯ ಜಮೀನಿನ ಸಕ್ರಮೀಕರಣವೂ ಇನ್ನು ಕನಸಾಗಲಿದೆ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು ಎಂದರು.

ಈ ಆದೇಶ ಜಾರಿಯಾಗದಂತೆ ತಡೆಯಾಜ್ಞೆ ತಂದು, ಪರಿಸರದೊಂದಿಗೆ ಜನರ ಸಹಬಾಳ್ವೆ ಇರುವ ಪರಿಷ್ಕೃತ ವರದಿ ತಯಾರಿಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರಕಾರದ ಮೇಲೆ ರಾಜ್ಯ ಹಾಗೂ ಜನಪ್ರತಿನಿಧಿಗಳು, ಸಂಸದರು ಮತ್ತು ಸಾರ್ವಜನಿಕರು ತುರ್ತು ಒತ್ತಡ ತರಬೇಕು ಎಂದು ವಿಠಲ ಹೆಗ್ಡೆ ಕೋರಿದ್ದಾರೆ.

ಡಾ.ಕಸ್ತೂರಿರಂಗನ್ ವರದಿ ಜಾರಿಯಲ್ಲಿ ಅನುಸೂಚಿತ ಪ್ರದೇಶದಲ್ಲಿ ರಾಸಾಯನಿಕಗಳ ಬಳಕೆಯನ್ನು ನಿಷೇದಿಸಲಾಗಿದೆ. ಅಡಿಕೆ ಕೊಳೆರೋಗಕ್ಕೆ ಸಿಂಪಡಿಸುವ ಬೋರ್ಡೊ ದ್ರಾವಣವು ಒಂದು ರಾಸಾಯನಿಕ ಆಗಿದೆ. ಇದನ್ನು ಬಳಸದೇ ಅಥವಾ ಇದಕ್ಕೆ ಪರ್ಯಾಯ ಕೊಳೆನಿರೋಧಕ ದ್ರಾವಣವನ್ನು ಸೂಚಿಸದೇ ಹೋದಲ್ಲಿ ಇಲ್ಲಿ ಅಡಿಕೆ ಕೃಷಿ ಹೇಗೆ ಸಾಧ್ಯ? ಡಾ.ಕಸ್ತೂರಿರಂಗನ್ ವರದಿಯ ಕರಡು ವರದಿಯ ಜಾರಿಯಾಗದಂತೆ ರಾಜ್ಯ ಸರಕಾರ ಜನಪ್ರತಿನಿಧಿಗಳು, ಸಂಸದರು ಜನರೊಂದಿಗೆ ಇರುವಾಗ ವಿರೋಧಿಸಿದ್ದರು. ಆದರೆ, ಇದಕ್ಕಾಗಿ ಹಸಿರುಪೀಠ ಕರೆದಿದ್ದ ನಿರ್ಣಾಯಕ ಸಭೆಯಲ್ಲಿ ನಮ್ಮ ಸಂಸದರು ಭಾಗವಹಿಸದೇ ದೊಡ್ಡ ಲೋಪ ಮಾಡಿದ್ದಾರೆ. 
-ಕಲ್ಕುಳಿ ವಿಠಲಹೆಗ್ಡೆ, ಪರಿಸರ ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News