ಯಗಚಿ ನದಿಪಾತ್ರದಲ್ಲಿ ಪ್ರಭಾವಿಗಳಿಂದ ಸರಕಾರಿ ಜಾಗ ಒತ್ತುವರಿ: ಆರೋಪ

Update: 2018-09-04 11:59 GMT

ಚಿಕ್ಕಮಗಳೂರು, ಸೆ.4: ನಗರದಿಂದ ಹರಿಯುವ ಯಗಚಿ ನದಿಪಾತ್ರದ ಇಕ್ಕೆಲಗಳಲ್ಲಿ ಸರಕಾರಿ ಜಮೀನನ್ನು ಪ್ರಭಾವಿಗಳು ಅಕ್ರಮ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡಿದ್ದು, ಜಿಲ್ಲಾಡಳಿತ ಕೂಡಲೇ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ನಗರ ಸೇರಿದಂತೆ ಅಲ್ಲಂಪುರ, ರಾಮನಹಳ್ಳಿ, ಅಂಬಳೆ ಗ್ರಾಮಗಳ ವ್ಯಾಪ್ತಿಯಲ್ಲಿ ಯಗಚಿ ನದಿಪಾತ್ರವನ್ನು ಕೆಲವರು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಜಮೀನಿನಲ್ಲಿ ಕೆಲವರು ಮನೆ ನಿರ್ಮಾಣ ಮಾಡಿದ್ದಾರೆ. ಹಲವರು ನಕಲಿ ದಾಖಲೆ ಸೃಷ್ಟಿಸಿ ಖಾತೆ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿದ ಅವರು, ಇಂತಹ ಅಕ್ರಮ ಒತ್ತುವರಿದಾರರನ್ನು ಜಿಲ್ಲಾಡಳಿತ ಕೂಡಲೆ ತೆರವುಗೊಳಿಸಬೇಕೆಂದು ಒತ್ತಾಯಿಸಿದರು.

ಒತ್ತುವರಿ ಸಂಬಂಧ ನಗರಸಭೆ ಗಮನಸೆಳೆದ ಸಂದರ್ಭದಲ್ಲಿ ಅಧಿಕಾರಿಗಳು ತೆರವು ಕಾರ್ಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಿದ್ದಾರೆ. ಸಣ್ಣ ನೀರಾವರಿ ಇಲಾಖೆಗೆ ಪ್ರಶ್ನಿಸಿದರೆ ಸರ್ವೇ ಕಾರ್ಯ ಮಾಡಬೇಕೆಂದು ಸಬೂಬು ಹೇಳುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಯುಜಿಡಿ ಟ್ರೀಟ್‍ಮೆಂಟ್ ಪ್ಲಾಟ್ ಹತ್ತಿರ ಸರಕಾರಿ ಜಮೀನು ಒತ್ತುವರಿ ಮಾಡಿ ನಿರ್ಮಿಸಿಕೊಂಡಿದ್ದ ಅಕ್ರಮ ಶೆಡ್‍ನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಮುಂದಿನ ದಿನಗಳಲ್ಲಿ ಸರಕಾರಿ ಜಮೀನು ಅಕ್ರಮ ಒತ್ತುವರಿಯಾಗದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದ ಅವರು, ಮಲ್ಲಂದೂರು ರಸ್ತೆಯ ಪೆಟ್ರೋಲ್ ಬಂಕ್ ಹಿಂಭಾಗದ ಒಂದು ಎಕರೆಗೂ ಹೆಚ್ಚು ಸರಕಾರಿ ಖರಾಬು ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇನ್ನೂ ಹಲವು ಕಟ್ಟಡಗಳು ಬಾಕಿ ಉಳಿದ್ದಿದ್ದು. ಅವುಗಳನ್ನು ಸಹ ತೆರವುಗೊಳಿಸಬೇಕೆಂದರು.

ಕಳೆದ ಬಾರಿ ಜಿಲ್ಲಾದ್ಯಂತ ಎದುರಾಗಿದ್ದ ಬರ ಪರಿಸ್ಥಿತಿ ಸಂದರ್ಭದಲ್ಲಿ ಜಿಲ್ಲೆಯ ಚಿಕ್ಕಮಗಳೂರು, ತರೀಕೆರೆ, ಕಡೂರು ತಾಲೂಕಿನ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಿದ ಟ್ಯಾಂಕರ್ ಮಾಲಕರಿಗೆ ಜಿಲ್ಲಾಡಳಿತ 4,34,46,000 ರೂ. ಬಾಕಿ ಉಳಿಸಿಕೊಂಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ಮೂರು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸದ ಕಾರಣ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದಾರೆ. ಬದಲಾಗಿ ಗ್ರಾಮ ಪಂಚಾಯತ್‍ಗಳಲ್ಲಿ ಇರುವ 14ನೇ ಹಣಕಾಸು ಯೋಜನೆಯಡಿಯಲ್ಲಿರುವ ಹಣವನ್ನು ಟ್ಯಾಂಕರ್ ಮಾಲಕರಿಗೆ ನೀಡುವಂತೆ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ 14ನೇ ಹಣಕಾಸು ಯೋಜನೆಯ ಅನುದಾನದ ಒಂದೇ ಒಂದು ಬಿಡಿಗಾಸು ಸಹ ಗ್ರಾಮ ಪಂಚಾಯತ್‍ಗಳಲ್ಲಿ ಉಳಿದಿಲ್ಲ, ಇದರಿಂದ ಟ್ಯಾಂಕರ್ ಮಾಲಕರು ಸಂಕಷ್ಟದಲ್ಲಿದ್ದು, ಜಿಲ್ಲಾಡಳಿತ ಕೂಡಲೇ ಟ್ಯಾಂಕರ್ ಮಾಲಕರಿಗೆ ಹಣ ನೀಡಲು ಸರಕಾರಕ್ಕೆ ವಿಶೇಷ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿಯಾದರೂ ಟ್ಯಾಂಕರ್ ಮಾಲಕರಿಗೆ ಹಣ ನೀಡದಿದ್ದರೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಂಕಷ್ಟದ ದಿನಗಳಲ್ಲಿ ಟ್ಯಾಂಕರ್ ಮಾಲಕರು ಜಿಲ್ಲಾಡಳಿತದ ನೆರವಿಗೆ ಬರುವುದಿಲ್ಲ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ, ಮುಖಂಡ ವರಸಿದ್ದಿ ವೇಣುಗೋಪಾಲ್ ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಗಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಮಹಾನಗರ ಪಾಲಿಕೆಗಳಲ್ಲಿಯೂ ಬಿಜೆಪಿ ಮುಂಚೂಣಿಯಲ್ಲಿದೆ. ಬಿಜೆಪಿಯ ಸಂಪ್ರದಾಯಿಕ ಮತದಾರರನ್ನೂ ಹೊಂದಿರದ ಚಿತ್ರದುರ್ಗ, ಹಾಸನ, ಚಾಮರಾಜ ನಗರಗಳಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ಪಾಳಯದಲ್ಲಿ ಜಯಗಳಿಸಿರುವ ಸದಸ್ಯರ ಸಂಖ್ಯೆ ಕಡಿಮೆಯಾದರೂ ಕಾಂಗ್ರೆಸ್ ತನ್ನ ಬೆನ್ನು ತಾನೇ ತಟ್ಟಿಕೊಳ್ಳುತ್ತಿದೆ. ಕಾಂಗ್ರೆಸ್‍ನ ಈ ವರ್ತನೆಗೆ ನಗಬೇಕೋ ಅಳಬೇಕೋ ತಿಳಿಯುತ್ತಿಲ್ಲ ಎಂದು ಅಣಕಿಸಿದ ರವಿ, ಸೋಲು ಅನಿಭವಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತೆ ಒಂದಾಗಲು ಹೊರಟಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.
- ಸಿ.ಟಿ.ರವಿ, ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News