ಹನೂರು: ಮೂಲಭೂತ ಸೌಲಭ್ಯ ವಂಚಿತ ಕ್ರೀಡಾಂಗಣ; ಗ್ರಾಮಸ್ಥರಿಂದ ಅಧಿಕಾರಿಗಳಿಗೆ ತರಾಟೆ

Update: 2018-09-04 13:32 GMT

ಹನೂರು,ಸೆ.4: ಕ್ರೀಡಾಂಗಣ ಲೋಕಾರ್ಪಣೆಗೊಂಡು ದಶಕಗಳೇ ಕಳೆದರೂ ಸಹ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಅಭಿವೃದ್ದಿಯಲ್ಲಿ ತೀರಾ ಹಿಂದುಳಿದಿದೆ. ಇದಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸ್ಥಳೀಯ ಕ್ರೀಡಾಪಟುಗಳು ಮತ್ತು ಪಟ್ಟಣದ ನಿವಾಸಿಗಳು ಆರೋಪಿಸಿದರು.

ಪಟ್ಟಣದ ಮಲೈಮಹದೇಶ್ವರ ಕ್ರೀಡಾಂಗಣಕ್ಕೆ ಆಗಮಿಸಿದ್ದ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭ ಸ್ಥಳೀಯ ಕ್ರೀಡಾಪಟುಗಳು ಮತ್ತು ಪಟ್ಟಣದ ವಾಸಿಗಳು ಮಾತನಾಡಿ, ಕ್ರೀಡಾಂಗಣವು ಜಿಲ್ಲೆಯಲ್ಲಿ ಪ್ರಥಮ ಕ್ರೀಡಾಂಗಣವಾಗಿ ಹೊರ ಹೊಮ್ಮಿ ಜಿಲ್ಲೆಗೆ ಮಾದರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿಯಲ್ಲಿ ಕುಂಠಿತವಾಗಿದೆ. ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿ ಸಂಪೂರ್ಣ ದುರಸ್ಥಿಗೆ ಬಂದಿದ್ದು, ಮತ್ತು ಇಲ್ಲಿಗೆ ಆಗಮಿಸುವ ಶಾಲಾ ಮಕ್ಕಳಿಗೆ ಹೊರಾಂಗಣದಲ್ಲಿ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ಟ್ಯಾಂಕ್, ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಮಳೆ ಬಂದಾಗ ಕ್ರೀಡಾಂಗಣ ನೀರಿನಿಂದ ಭರ್ತಿಯಾಗುತ್ತಿದ್ದು, ಈ ಕೂಡಲೇ ಅಗತ್ಯ ಕ್ರಮವಹಿಸಿ ಎಂದು ಹಲವಾರು ಬಾರಿ ತಮ್ಮ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.  

ಮಾಜಿ ಸಚಿವ ದಿ.ರಾಜುಗೌಡರ ದೂರದೃಷ್ಟಿ ಮತ್ತು ಅವರ ಶ್ರಮದ ಫಲವಾಗಿ ಜಿಲ್ಲೆಯಲ್ಲಿ ನಿರ್ಮಾಣವಾದ ಪ್ರಥಮ ಕ್ರೀಡಾಂಗಣ ಇದಾಗಿದ್ದರೂ, ಕ್ರೀಡಾಂಗಣ ಅಭಿವೃದ್ದಿಯಲ್ಲಿ ಹಿಂದಿದೆ. ಈ ದಿಸೆಯಲ್ಲಿ ಜಿಪಂ ಅಧ್ಯಕ್ಷರು ಈ ಕ್ರೀಡಾಂಗಣದ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಅಭಿವೃದ್ದಿ ರೂಪುರೇಷಗಳ ಕುರಿತು ಪಟ್ಟಿಮಾಡಿ ಅಧಿಕಾರಿಗಳ ಜೊತೆ ಚರ್ಚಿಸಿ ಕಾರ್ಯಪ್ರವೃತ್ತರಾಗುವುದನ್ನು ಬಿಟ್ಟು ಇಲ್ಲಿ ಕಳೆದ 15 ವರ್ಷಗಳಿಂದ ಕಾವಲುಗಾರರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ನೌಕರರ ಉದ್ಯೋಗವನ್ನು ಕಸಿದು ತಮ್ಮ ಸಂಬಂಧಿಕರಿಗೆ ಒದಗಿಸಲು ಮುಂದಾಗಿದ್ದಾರೆಂದು ಆರೋಪಿಸಿದರಲ್ಲದೇ, ಈ ಕ್ರೀಡಾಂಗಣ ಜಿಪಂ ಆಡಳಿತ ಮಂಡಳಿಯ ನಿರ್ಲಕ್ಷದಿಂದ ಅಭಿವೃದ್ದಿಯಲ್ಲಿ ಹಿಂದಿದ್ದರೂ, ಕಾವಲುಗಾರರ ಕರ್ತವ್ಯ ನಿಷ್ಠೆ, ಸಮಯ ಪಾಲನೆಯಿಂದ ಜಿಲ್ಲೆಯ ಇನ್ನಿತರ ಕ್ರೀಡಾಂಗಣಕ್ಕಿಂತ ಸ್ವಚ್ಚಂದವಾಗಿದೆ ಎಂದು ಪ್ರಶಂಸಿಸಿ ಜಿಪಂ ಅಧ್ಯಕ್ಷರ ನಡೆಗೆ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News