ಅಯ್ಯಂಗೇರಿ ಸರಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದ ಎಂಎಲ್‍ಸಿ ಶರವಣ

Update: 2018-09-04 13:46 GMT

ಮಡಿಕೇರಿ, ಸೆ.4 : ಭಾಗಮಂಡಲ ಸಮೀಪವಿರುವ ಅಯ್ಯಂಗೇರಿ ಸರಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆಯುವುದಾಗಿ ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ಮುಖಂಡ ಆರ್.ಶರವಣ ಘೋಷಿಸಿದ್ದಾರೆ. 

ಮಡಿಕೇರಿಗೆ ಆಗಮಿಸಿದ ಅವರು ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರವಣ, ಭಾರಿ ಮಳೆ ಮತ್ತು ಪ್ರವಾಹದಿಂದ ಕೊಡಗು ಜಿಲ್ಲೆ ನಲುಗಿದ್ದು, ಕಳೆದ ಎರಡು ದಿನಗಳಿಂದ ಜಿಲ್ಲೆ ಸಹಜ ಸ್ಥಿತಿಗೆ ಮರಳುತ್ತಿದೆ.  ಮಳೆಯಿಂದ ಹಾನಿಗೀಡಾದ ಅಯ್ಯಂಗೇರಿ ಸರಕಾರಿ ಶಾಲೆಯನ್ನು ದತ್ತು ಪಡೆದು ಅದನ್ನು ಜಿಲ್ಲೆಯಲ್ಲಿಯೇ ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸು ಹೊಂದಿದ್ದೇನೆ. ತನ್ನ ಹುಟ್ಟು ಹಬ್ಬದ ಸಂದರ್ಭ ಈ ಬಗ್ಗೆ ತೀರ್ಮಾನ ತೆಗೆದುಕೊಂಡಿದ್ದೆ. ಹೆಚ್ಚುವರಿ ಕಟ್ಟಡ ವ್ಯವಸ್ಥೆ, ಪೀಠೋಪಕರಣ ಸೇರಿದಂತೆ ಶಾಲೆಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಒದಗಿಸುವುದಾಗಿ ಶರವಣ ಹೇಳಿದರು. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರಾಶ್ರಿತ ಕೇಂದ್ರಗಳಿಗೆ ಬೇಕಾಗುವ ವಸ್ತುಗಳನ್ನು ಲಾರಿಯಲ್ಲಿ ತರಲಾಗಿದ್ದು, ಅಗತ್ಯವಿದ್ದಲ್ಲಿ ಮತ್ತಷ್ಟು ವಸ್ತುಗಳನ್ನು ಒದಗಿಸಲು ಸಿದ್ದವಿರುವುದಾಗಿ ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿ ಹೆಚ್‍ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಜನ ಬೆಂಬಲವಿರುವುದು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಬೀತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶರವಣ ಹೇಳಿದರು. ಬಿಜೆಪಿ ಮುಖಂಡರು ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆ ಪ್ರತಿ ದಿನವೂ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾ ಟೀಕಿಸುತ್ತಿದ್ದರು. ಈ ಟೀಕೆಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದ ಮತದಾರರು ಸಮರ್ಪಕ ಉತ್ತರ ನೀಡಿ ಸಮ್ಮಿಶ್ರ ಸರಕಾರಕ್ಕೆ ಆಶೀರ್ವಾದ ಮಾಡಿದ್ದಾರೆ. ಬಿಜೆಪಿ ಮುಖಂಡರು ಇನ್ನು ಮುಂದಾದರು ಟೀಕೆ ಮಾಡುವುದನ್ನು ಬಿಟ್ಟು ಸರಕಾರಕ್ಕೆ ಸಹಕಾರ ನೀಡಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News