ಯೋಧರಿಗೆ ಸ್ಮಾರ್ಟ್‌ಫೋನ್ ನಿಷೇಧ ಅಸಾಧ್ಯ: ಬಿಪಿನ್ ರಾವತ್

Update: 2018-09-04 13:47 GMT

ಹೊಸದಿಲ್ಲಿ, ಸೆ.4: ಯೋಧರು ಸ್ಮಾರ್ಟ್‌ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸಬಾರದೆಂದು ನಿಷೇಧಿಸಲು ಸಾಧ್ಯವಿಲ್ಲ. ಆದರೆ ಇವುಗಳ ಬಳಕೆಯಲ್ಲಿ ಶಿಸ್ತು, ಆತ್ಮಸಂಯಮ ಇರಬೇಕು ಎಂದು ಸೇನಾ ಮುಖ್ಯಸ್ಥ ಜ ಬಿಪಿನ್ ರಾವತ್ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮಗಳಿಂದ ದೂರ ಇರುವಂತೆ ನಮ್ಮ ಯೋಧರಿಗೆ ಸಲಹೆ ಮಾಡಬೇಕು ಎಂದು ಹಲವರು ಅಭಿಪ್ರಾಯ ಸೂಚಿಸಿದ್ದಾರೆ. ಆದರೆ ಯೋಧರು ಸ್ಮಾರ್ಟ್‌ಫೋನ್ ಹೊಂದಿರಬಾರದೆಂದು ಹೇಳಲು ಸಾಧ್ಯವೇ. ಸ್ಮಾರ್ಟ್‌ಫೋನ್ ಬಳಕೆಯನ್ನು ತಡೆಯಲು ಸಾಧ್ಯವಿಲ್ಲದಿರುವಾಗ ಸಾಮಾಜಿಕ ಮಾಧ್ಯಮಗಳಿಂದ ದೂರ ಇರಿಸಲು ಸಾಧ್ಯವೇ ಎಂದವರು ಪ್ರಶ್ನಿಸಿದ್ದಾರೆ.

 ಮನೋವೈಜ್ಞಾನಿಕ ಹೋರಾಟ ಮತ್ತು ತಂತ್ರಗಾರಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಈ ಮಾಧ್ಯಮವನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳ ಮೂಲಕ ಜ್ಞಾನ ಭಂಡಾರವನ್ನು ವಿಸ್ತರಿಸಿಕೊಳ್ಳಲು ಸಾಧ್ಯವಿದೆ ಎಂದು ರಾವತ್ ಹೇಳಿದ್ದಾರೆ.

ಯೋಧರು ತಮ್ಮ ಮೇಲಧಿಕಾರಿಗಳು ಹಾಗೂ ಸಶಸ್ತ್ರ ಪಡೆಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ಮಾಡುತ್ತಿರುವ ಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾರಣ ಯೋಧರು ಸ್ಮಾರ್ಟ್‌ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಬೇಕು ಎಂಬ ಅಭಿಪ್ರಾಯ ಹಲವೆಡೆಯಿಂದ ಕೇಳಿ ಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News