ಗೌರಿ ಲಂಕೇಶ್ ಹತ್ಯೆ ಪ್ರಕರಣ: ಗುಂಡು ಹಾರಿಸಿದ್ದು ವಾಗ್ಮೋರೆ ?

Update: 2018-09-04 13:54 GMT

ಬೆಂಗಳೂರು, ಸೆ.4: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು ಪರಶುರಾಮ್ ವಾಗ್ಮೋರೆ ಎನ್ನುವ ಮಾಹಿತಿ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಿಂದ ದೃಢಪಟ್ಟಿದೆ ಎಂದು ಹೇಳಲಾಗುತ್ತಿದೆ.

ಹತ್ಯೆ ನಡೆದಿದ್ದ ದಿನದಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳು, ವಿಶೇಷ ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದ ಕೆಲವು ಶಂಕಾಸ್ಪದ ವಸ್ತುಗಳು ಮತ್ತು ಮರಣೋತ್ತರ ಪರೀಕ್ಷೆ ವರದಿಯನ್ನು ಗುಜರಾತ್‌ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಇದೀಗ ವರದಿಯಲ್ಲಿ ಗೌರಿಲಂಕೇಶ್ ಅವರನ್ನು ಬೈಕ್ ಹಿಂಭಾಗದಲ್ಲಿ ಕುಳಿತಿದ್ದ ವ್ಯಕ್ತಿಯೇ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ ಎಂದು ವರದಿ ನೀಡಲಾಗಿದೆ. ಈ ವರದಿ ಅನುಸಾರ ಸಿಟ್ ತನಿಖಾಧಿಕಾರಿಗಳು ಪರಶುರಾಮ್ ವಾಗ್ಮೋರೆಯೇ ಹತ್ಯೆಯ ಪ್ರಮುಖ ಆರೋಪಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

2017ರ ಸೆ.5 ಬೈಕ್‌ನಲ್ಲಿ ಬಂದಿದ್ದ ದುಷ್ಕರ್ಮಿಗಳು ಯಾರಿಗೂ ಕಾಣದಂತೆ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಲೆಗೆ ಹೆಲ್ಮೆಟ್ ಧರಿಸಿದ್ದರು. ತಾವು ಹಾಕಿದ್ದ ಬಟ್ಟೆಗಳು ಕೂಡ ಯಾರೂ ಪತ್ತೆ ಮಾಡಬಾರದೆಂಬ ಕಾರಣಕ್ಕಾಗಿ ಶರ್ಟ್ ಮೇಲೆ ಜರ್ಕೀನ್ ಧರಿಸಿದ್ದರಲ್ಲದೆ, ಕಣ್ಣಿಗೆ ಕನ್ನಡಕ, ಕೈಗಳಿಗೆ ಗ್ಲೌಸ್‌ಗಳನ್ನು ಧರಿಸಿದ್ದರು ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ಕೇವಲ 6 ಸೆಕೆಂಡ್: ಕೇವಲ 6 ಸೆಕೆಂಡ್ ಸೆರೆಯಾಗಿದ್ದ ದೃಶ್ಯದ ಮೂಲಕ ‘ಫೊರೆನ್ಸಿಕ್ ಗೇಯ್ಟಿ ಅನಾಲಿಸಿಸ್ ಟೆಕ್ನಿಕ್ಸ್’ ಮೂಲಕ ತಾಂತ್ರಿಕವಾಗಿ ಈ ಆರೋಪ ಸಾಬೀತಾಗಿದೆ. ಇದರಲ್ಲಿ ಸಿಸಿಟಿವಿ ದೃಶ್ಯಾವಳಿ ಮತ್ತು ಅಪರಾಧ ದೃಶ್ಯ ಮರುಚಿತ್ರೀಕರಣದ ವಿಡಿಯೋ ಹೊಂದಾಣಿಕೆ ಆಗುತ್ತಿತ್ತು. ಹೆಲ್ಮೆಟ್ ಧರಿಸಿದ್ದರೂ ಬೈಕ್‌ನಲ್ಲಿ ಇದ್ದದ್ದು ಪರಶುರಾಮ್ ವಾಗ್ಮೋರೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿದುಬಂದಿದೆ.

ಗುಜರಾತ್‌ನಲ್ಲಿರುವ ಪ್ರಯೋಗಾಲಯವು ದೇಶದಲ್ಲೇ ಅತ್ಯುತ್ತಮವಾಗಿದ್ದು, ಇಲ್ಲಿ ಮುಂದುವರೆದ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವುದರಿಂದ ಎಂತಹದ್ದೇ ಪ್ರಕರಣಗಳನ್ನು ಭೇದಿಸಬಹುದಾಗಿದೆ. ಸದ್ಯ ತನಿಖಾಧಿಕಾರಿಗಳ ವಶದಲ್ಲಿರುವ ಪರಶುರಾಮ್ ವಾಗ್ಮೋರೆ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಸದ್ಯದಲ್ಲೇ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News