ಪ್ರಾಮಾಣಿಕತೆಯ ಸೇವೆ ಸದಾ ಜನಮಾನಸದಲ್ಲಿ ಉಳಿಯುತ್ತದೆ: ಚಿಕ್ಕಮಗಳೂರು ತಾಪಂ ಅಧ್ಯಕ್ಷ ಜಯಣ್ಣ

Update: 2018-09-04 17:24 GMT

ಚಿಕ್ಕಮಗಳೂರು, ಸೆ.4: ಅರ್ಪಣಾ ಮನೋಭಾವ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅಧಿಕಾರಿಗಳು ಹಾಗೂ ನೌಕರರು ನಿವೃತ್ತಿ ನಂತರವೂ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ ಹೇಳಿದರು.

ತಾಲೂಕು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ ರಾಜ್ ಇಲಾಖೆ ನೌಕರರ ಸಂಘ ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ನಿವೃತ್ತ ಅಧಿಕಾರಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಧಿಕಾರ, ಹಣ, ಅಂತಸ್ತು ಶಾಶ್ವತವಲ್ಲ. ಜನರ ಪ್ರೀತಿ, ವಿಶ್ವಾಸ ಮುಖ್ಯ ಎಂದ ಅವರು ಅಧಿಕಾರಿಗಳು ಮತ್ತು ನೌಕರರು ಸೇವಾವಧಿಯಲ್ಲಿ ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದರೆ ಅವರ ಪ್ರೀತಿ ಗಳಿಸುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪಂಚಾಯತ್ ರಾಜ್ ನೌಕರರ ಸಂಘದ ಅಧ್ಯಕ್ಷ ಎನ್.ಎಸ್.ಜಗನ್ನಾಥ್, ಅಧಿಕಾರಿಗಳು ಮತ್ತು ನೌಕರರು ತಮ್ಮ ಸೇವಾವಧಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸುವ ಮೂಲಕ ಅವರ ಪ್ರೀತಿ ವಿಶ್ವಾಸ ಸಂಪಾದಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ, ಇಂದಾವರ ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಜನಾರ್ಧನ್, ಬಿಳೇಕಲ್ಲಹಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಅಣ್ಣೇಗೌಡ, ಮುಗುಳುವಳ್ಳಿ ಗ್ರಾ.ಪಂ. ಕಾರ್ಯದರ್ಶಿ ಸಿದ್ದೇಗೌಡ ಅವರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. ತಾಲೂಕು ಪಂಚಾಯತ್ ಸದಸ್ಯ ವೈ.ಜಿ.ಸುರೇಶ್, ಸಂಘದ ನಿರ್ದೇಶಕರಾದ ಪ್ರವೀಣ್, ಎಂ.ಎನ್.ಪ್ರಕಾಶ್, ಪಿ.ಲಕ್ಷ್ಮಣ, ಪರಮೇಶ್, ವಿಶ್ವನಾಥ್, ಸುಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News