ವಕ್ಫ್ ಆಸ್ತಿ ಹಗರಣದ ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಎಂಎಲ್ಸಿ ಗಳಿಂದ ಧರಣಿ: ಎಂ.ಕೆ.ಪ್ರಾಣೇಶ್

Update: 2018-09-04 17:30 GMT

ಮೂಡಿಗೆರೆ, ಸೆ.4: ರಾಜ್ಯ ವಕ್ಫ್ ಬೋರ್ಡ್‍ನಲ್ಲಿ ನಡೆದ ಬಹುಕೋಟಿ ಹಗರಣದ ಬಗೆಗಿನ ವಿಶೇಷ ವರದಿಯನ್ನು ಜಂಟಿ ಸದನದಲ್ಲಿ ಮಂಡಿಸಲು ಮತ್ತು ಸಿಬಿಐ ತನಿಖೆಗೆ ಒತ್ತಾಯಿಸಿ ಸೆ.6ರಂದು ಬೆಂಗಳೂರಿನ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ವಿಧಾನಪರಿಷತ್ ಸದಸ್ಯರಿಂದ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಮ್ಮೆಲ್ಸಿ ಎಂ.ಕೆ.ಪ್ರಾಣೇಶ್ ತಿಳಿಸಿದರು.

ಕಳೆದ 65 ವರ್ಷಗಳಿಂದ ವಕ್ಫ್ ಬೋರ್ಡ್ ಅಧೀನದಲ್ಲಿರುವ ಆಸ್ತಿಗಳನ್ನು ಕಾಂಗ್ರೆಸ್‍ನ ಚುನಾಯಿತ ಪ್ರತಿನಿಧಿಗಳು ಮತ್ತು ವಕ್ಫ್ ಬೋರ್ಡ್ ಅಧಿಕಾರಿಗಳು ಕಬಳಿಸಿದ್ದಾರೆ. 4 ಲಕ್ಷ ಕೋಟಿಗೂ ಅಧಿಕ ಮೌಲ್ಯದ 54 ಸಾವಿರ ಎಕರೆ ಆಸ್ತಿಯ ಪೈಕಿ 2.30 ಲಕ್ಷ ಕೋಟಿ ಮೌಲ್ಯದ 27 ಸಾವಿರ ಎಕರೆ ಭೂಮಿ ಕಬಳಿಕೆಯಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಇದರ ತನಿಖೆಗೆ ಅಂದಿನ ಬಿಜೆಪಿ ಸರ್ಕಾರ ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿತ್ತು. ಅದರಂತೆ ಸಮಗ್ರ ತನಿಖೆ ನಡೆಸಿ, 2012 ಮಾ.26ರಂದು ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರಿಗೆ ವರದಿ ನೀಡಿದ್ದರು ಎಂದು ತಿಳಿಸಿದರು.

ಮಾಣಿಪ್ಪಾಡಿ ಸಮಿತಿ ವರದಿಯಲ್ಲಿ ವಕ್ಫ್ ಆಸ್ತಿ ಅತಿಕ್ರಮಣ ಹಾಗೂ ಒತ್ತುವರಿ ಬಗ್ಗೆ ಸತ್ಯಾಸತ್ಯತೆ ಪರಿಶೀಲಿಸಿ ಆಸ್ತಿ ಸಂರಕ್ಷಣೆ, ಜೀರ್ಣೋದ್ಧಾರದ ಬಗ್ಗೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2012 ಮೇ.15ರಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಆಯೋಗದ ವರದಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಮತ್ತು ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, 2012 ಜೂ.4ರಂದು ಕರ್ನಾಟಕ ಲೋಕಾಯುಕ್ತ ಅಧಿನಿಯಮ ಕಲಂ 07 (2ಎ) ರಡಿ ಪ್ರದತ್ತವಾದ ಅಧಿಕಾರ ಬಳಸಿ ಲೋಕಾಯುಕ್ತ ತನಿಖೆ ನಡೆಸಲು ಅಂದಿನ ಸರ್ಕಾರ ಅನುಮತಿ ನೀಡಿತ್ತು. ಆಯೋಗದ ವಿಶೇಷ ವರದಿಯಲ್ಲಿನ ಶಿಫಾರಸು ಮತ್ತು ಹೈಕೋರ್ಟ್ ಮೇಲ್ಮನವಿ ಸಂಖ್ಯೆ 4372/1985, ಜ.28,1998ರಲ್ಲಿ ನೀಡಿರುವ ಆದೇಶದಂತೆ ವಕ್ಫ್ ಸೊತ್ತುಗಳನ್ನು ಮರಳಿ ಪಡೆಯಲು ವಕ್ಫ್ ಆಸ್ತಿಗಳ ಕಾರ್ಯಪಡೆ ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಸದನದಲ್ಲಿ ವರದಿ ಮಂಡಿಸುವ ಭರವಸೆಯನ್ನು ಅಂದಿನ ಸಭಾನಾಯಕ ಜಿ.ಪರಮಶ್ವರ್ ಮೂಲಕ ನೀಡಿತ್ತು. ಆ ಬಳಿಕ ಬಂದ ಕಾಂಗ್ರೆಸ್ ಸರ್ಕಾರ ತನ್ನದೇ ಪಕ್ಷದ ಘಟಾನುಘಟಿ ಮುಖಂಡರಿಗೆ ಸಂಚಕಾರವಾಗುವ ಸುಳಿವು ಅರಿತು ವರದಿ ಮಂಡನೆಗೆ ಹಿಂದೇಟು ಹಾಕಿತ್ತು. ಬಿಜೆಪಿ ಈ ಬಗ್ಗೆ ಹೋರಾಟ ಮುಂದುವರಿಸಿಕೊಂಡು ಬಂದಿದೆ ಎಂದರು.

ಹೈಕೋರ್ಟ್ ಕೆ.ಎಸ್.ಕಾಂತ ಅವರ ಅರ್ಜಿಯಂತೆ ಪೂರ್ಣ ವರದಿ ಮಂಡಿಸಲು ಆದೇಶ ನೀಡಿತ್ತು. ಸದನದಲ್ಲಿ ಮತ್ತೆ ಹೋರಾಟ ಮುಂದುವರಿಸಿ ಪೂರ್ಣವರದಿ ಮಂಡಿಸುವಂತೆ ಬಿಜೆಪಿ ಆಗ್ರಹಿಸಿದಾಗ ಸಭಾಪತಿಯವರು ಮಾಣಿಪ್ಪಾಡಿ ಸಮಿತಿ ಪೂರ್ಣ ವರದಿ ಮಂಡಿಸುವಂತೆ ಆದೇಶ ನೀಡಿದ್ದರು. ಆದರೆ ಸರ್ಕಾರ ಪೂರ್ಣ ವರದಿ ಮಂಡಿಸಲು ಹಿಂದೇಟು ಹಾಕುತ್ತಿದ್ದು, ಭ್ರಷ್ಟರ ರಕ್ಷಣೆಗೆ ನಿಂತಿದ್ದು, ಸಭಾಪತಿ ಶಂಕರಮೂರ್ತಿ ರಾಜ್ಯ ಸರ್ಕಾರ ವರದಿ ಮಂಡಿಸುವ ತನ್ನ ಮಾತನ್ನು ತಪ್ಪಿದೆ. ಈ ಬಗ್ಗೆ ಮಾರ್ಗದರ್ಶನ ನೀಡುವಂತೆ ರಾಜ್ಯಪಾಲರ ಮೊರೆ ಹೋಗಿದ್ದಾರೆ. 2018 ಜು.12ರಂದು ವಿಧಾನಪರಿಷತ್‍ನಲ್ಲಿ ಅರುಣ್ ಶಹಾಪೂರ್ ಅವರ ಪ್ರಶ್ನೆಗೆ ಉತ್ತರಿಸಿದ ವಕ್ಫ್ ಸಚಿವ ಝಮೀರ್ ಅಹಮ್ಮದ್ ಖಾನ್ ಇಡೀ ಪ್ರಕಣರವನ್ನು ಸಿಬಿಐ ತನಿಖೆಗೆ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಕಾಂಗ್ರೆಸ್‍ನ ನಾಯಕರನ್ನು ಉಳಿಸುವ ಸಲುವಾಗಿ ಪ್ರಕರಣದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ ಎಂದು ಆರೋಪಿಸಿದ ಅವರು, ಸರ್ಕಾರ ಕೊಟ್ಟ ಭರವಸೆಯಂತೆ ಜಂಟಿ ಸದನದಲ್ಲಿ ವರದಿಯನ್ನು ಮಂಡಿಸಬೇಕು ಮತ್ತು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು. 

ಬಿಜೆಪಿ ಮಂಡಲ ಅಧ್ಯಕ್ಷ ಪ್ರಮೋದ್ ದುಂಡುಗ, ಜಿಲ್ಲಾ ಎಸ್‍ಟಿ ಮೋರ್ಚಾ ಅಧ್ಯಕ್ಷ ಮುತ್ತಪ್ಪ, ತಾಲೂಕು ಎಸ್‍ಸಿ ಮೋರ್ಚಾ ಅಧ್ಯಕ್ಷ ಜಯಪಾಲ್, ಪ್ರಶಾಂತ್, ಮನೋಜ್ ಹಳೇಕೋಟೆ ಮತ್ತಿತರರು ಇದ್ದರು. 

ಈ ಬಾರಿಯ ಅತಿವೃಷ್ಟಿಯಿಂದ ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಕಾಫಿ, ಭತ್ತ, ಕಾಳುಮೆಣಸು ಸಹಿತ ರೈತರ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ರಸ್ತೆ, ವಿದ್ಯುತ್, ವಾಸದ ಮನೆ ಹಾಗೂ ಶಾಲಾ ಕಾಲೇಜು ಕಟ್ಟಡಗಳು ಹಾನಿಗೊಳಗಾಗಿವೆ. ಸರ್ಕಾರ ಅತಿವೃಷ್ಟಿಗೆಂದು ಜಿಲ್ಲೆಗೆ ಕೇವಲ 20 ಕೋಟಿ ಬಿಡುಗಡೆ ಮಾಡಿದೆ. ಇದು ಸಾಲದು. ಇನ್ನೂ 500 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಪ್ರಾಥಮಿಕ ಕಂತಿನಲ್ಲಿ 100 ಕೋಟಿ ತುರ್ತು ಅನುದಾನ ಬಿಡುಗಡೆಗೊಳಿಸಬೇಕು. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ತಾಲೂಕುಗಳನ್ನು ಅತಿವೃಷ್ಟಿ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ್ದು, ಆದರೂ ಯಾವುದೇ ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಿಲ್ಲ. ಜಿಲ್ಲೆಗೆ ಭೇಟಿ ನೀಡುವುದಾಗಿ ತಮಗೆ ತಿಳಿಸಿದ್ದ ಮುಖ್ಯಮಂತ್ರಿಗಳು ಕಾರ್ಯಕ್ರಮ ರದ್ದುಪಡಿಸಿದ್ದಾರೆ. ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಬೇಕು. ಅತಿವೃಷ್ಟಿಯಿಂದಾದ ಹಾನಿಯನ್ನು ಅಧ್ಯಾಯನ ನಡೆಸಬೇಕು.
-ಎಂ.ಕೆ.ಪ್ರಾಣೇಶ್, ವಿಧಾನಪರಿಷತ್ ಸದಸ್ಯರು  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News