ಸಂತ್ರಸ್ತರ ಮಾಹಿತಿ ಸಂಗ್ರಹ ಸಮರ್ಪಕವಾಗಿಲ್ಲ: ಮಡಿಕೇರಿ ತಾ.ಪಂ ವಿಶೇಷ ಸಭೆಯಲ್ಲಿ ಅಸಮಾಧಾನ

Update: 2018-09-05 18:20 GMT

ಮಡಿಕೇರಿ, ಸೆ.5 : ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಪುನರ್ವಸತಿ ಕೇಂದ್ರಗಳಲ್ಲಿ ನೆಲೆಸಿರುವ ಸಂತ್ರಸ್ತರಿಗೆ ಉತ್ತಮ ಬದುಕನ್ನು ಒದಗಿಸಿಕೊಡುವ ಬಗ್ಗೆ ಅಗತ್ಯ ಮಾಹಿತಿಯೊಂದಿಗೆ ಅಭಯವನ್ನು ನೀಡುವ ಕಾರ್ಯ ನಡೆಯಬೇಕಾಗಿರುವ ಬಗ್ಗೆ ಮಡಿಕೇರಿ ತಾ.ಪಂ ವಿಶೇಷ ಸಭೆಯಲ್ಲಿ ಚರ್ಚಿಸಲಾಯಿತು.

ಮಡಿಕೇರಿ ತಾಪಂ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಿಂದ ಸಂತ್ರಸ್ತರಿಗೆ ಯಾವೆಲ್ಲ ನೆರವು ಲಭ್ಯವಿದೆ ಎನ್ನುವ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಮಾಹಿತಿಯ ಕೊರತೆಯ ಹಿನ್ನೆಲೆಯಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ಇರುವ ಸಾಕಷ್ಟು ಕಾರ್ಮಿಕರು ತಮ್ಮಿಂದ ಮಾಹಿತಿ ಪಡೆಯಲು ಯಾರಾದರು ಬಂದಾರು ಎನ್ನುವ ಕಾರಣದಿಂದ ಕೆಲಸಕ್ಕೂ ತೆರಳಲಾಗದ ಪರಿಸ್ಥಿತಿ ಇರುವುದಾಗಿ ಬೇಸರ ವ್ಯಕ್ತಪಡಿಸಿದರು.

ಪ್ರಾಕೃತಿಕ ವಿಕೋಪದ ಸಂದರ್ಭ ಸಂಪರ್ಕ ಕಡಿತಗೊಂಡ ಸಂಪಾಜೆ, ಜೋಡುಪಾಲ ವಿಭಾಗದ ಸಂತ್ರಸ್ತರ ಕನಿಷ್ಠ ಮಾಹಿತಿಯನ್ನು ಇಂದಿನ ಸಭೆಯಲ್ಲಿ ಯಾವೊಬ್ಬ ಅಧಿಕಾರಿಯೂ ನೀಡದ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿ, ನೆರೆಯ ದಕ್ಷಿಣ ಕನ್ನಡ ಜಿಲ್ಲಾಡಳಿತ, ಸುಳ್ಯ ತಹಶೀಲ್ದಾರರು ನಮ್ಮ ಸಂಕಷ್ಟಗಳಿಗೆ ಸ್ಪಂದಿಸಿದ್ದು, ಅವರಿಗೊಂದು ಅಭಿನಂದನಾ ಪತ್ರವನ್ನು ತಾಪಂ ಮೂಲಕ ಕಳುಹಿಸುವಂತೆ ಮನವಿ ಮಾಡಿದರು.

ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಸಾಲ ಮನ್ನಾ ಮಾಡಬೇಕು, ಭಾರೀ ಮಳೆಯಿಂದ ಕೃಷಿಗೆ ಕೊಳೆರೋಗದಿಂದ ಸಂಕಷ್ಟಕ್ಕೆ ಸಿಲುಕಿರುವ ಬೆಳೆಗಾರರ ಸಾಲ ಮನ್ನಾ ಮಾಡಬೇಕು. ನಿರಖು ಠೇವಣಿ ಉಂಟೆನ್ನುವ ಏಕಮಾತ್ರ ಕಾರಣದಿಂದ ಅಂತಹವರನ್ನು ಸಾಲಮನ್ನಾ ಸೌಲಭ್ಯದಿಂದ ವಂಚಿಸಬಾರದೆಂದು ಒತ್ತಾಯಿಸಿದರು.

ಪ್ರತಿ ಗ್ರಾಪಂಗೆ 50 ಸಾವಿರ
ಅತಿವೃಷ್ಟಿ ಮತ್ತು ಪ್ರಾಕೃತಿಕ ವಿಕೋಪದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಸಾಂಕ್ರಾಮಿಕ ರೋಗಗಳು ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಮತ್ತು ಶುಚಿತ್ವವನ್ನು ಕಾಪಾಡಲು 50 ಸಾವಿರ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಲಕ್ಷ್ಮಿ ತಿಳಿಸಿದರು.

ಪರಿಸರವಾದಿಗಳ ವಿರುದ್ಧ ಅಸಮಾಧಾನ

ಸದಸ್ಯ ರಾಯ್ ತಮ್ಮಯ್ಯ ಮಾತನಾಡಿ, ಪ್ರಾಕೃತಿಕ ವಿಕೋಪದಿಂದ ಹಲ ಗ್ರಾಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಂತದಲ್ಲೆ ಪರಿಸರವಾದಿಗಳೆಂದು ಕರೆದುಕೊಳ್ಳುತ್ತಿರುವವರು, ಗ್ರಾಮಸ್ಥರನ್ನು ಆಯಾ ಗ್ರಾಮಗಳಿಂದ ಸಂಪೂರ್ಣವಾಗಿ ಒಕ್ಕಲೆಬ್ಬಿಸುವುದಕ್ಕೆ ಸಹಿ ಸಂಗ್ರಹದಂತಹ ಕಾರ್ಯಗಳಿಗೆ ಮುಂದಾಗುತ್ತಿರುವುದಾಗಿ ಆರೋಪಿಸಿ, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಮತ್ತು ಯಾವುದೇ ಕಾರಣಕ್ಕೂ ಗ್ರಾಮಸ್ಥರನ್ನು ಅವರ ಗ್ರಾಮಗಳಿಂದ ಸಂಪೂರ್ಣವಾಗಿ ಹೊರಕ್ಕೆ ಕಳುಹಿಸಕೂಡದೆಂದು ಹೇಳಿದರು.

ಕಣ್ಣೀರಾದ ಅಧ್ಯಕ್ಷೆ: ಭಾರೀ ಮಳೆಯಿಂದ ಗುಡ್ಡ ಕುಸಿತದಂತಹ ಘಟನೆಗಳು ನಡೆದ ಸಂದರ್ಭ ಮದೆನಾಡು, ಜೋಡುಪಾಲ ವಿಭಾಗಗಳಲ್ಲಿ ದೊಡ್ಡ ಮಟ್ಟದ ಹಾನಿ ಸಂಭವಿಸಿತ್ತು. ಈ ಹಂತದಲ್ಲಿ ಸಂಪರ್ಕದ ಕೊರತೆಯಿಂದ ಅಲ್ಲಿಗೆ ತೆರಳಲು ಸಾಧ್ಯವಾಗಲಿಲ್ಲವೆಂದು ತಿಳಿಸುವ ಸಂದರ್ಭ ಕಣ್ಣೀರಾದ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಈ ಹಂತದಲ್ಲಿ ಸಂಪಾಜೆ ವಿಭಾಗದ ಪಂಚಾಯತ್ ಪ್ರಮುಖರನ್ನು ಸಂಪರ್ಕಿಸಿದಾಗ ಅವರು, ಸಂಕಷ್ಟಕ್ಕೆ ಸಿಲುಕಿದ್ದ ಗ್ರಾಮಸ್ಥರ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತರೆಂದು ತಿಳಿಸಿದರು. 

ಪರಿಹಾರ ಕೇಂದ್ರಗಳಲ್ಲಿ 405 ಮಕ್ಕಳು
ಸಂತ್ರಸ್ತರಿಗಾಗಿ ವ್ಯವಸ್ಥೆ ಮಾಡಿರುವ 21 ಪರಿಹಾರ ಕೇಂದ್ರಗಳಲ್ಲಿ 405 ಮಕ್ಕಳಿದ್ದಾರೆ. ಇವರಲ್ಲಿ ಹಲವು ಮಕ್ಕಳು ಅತಿವೃಷ್ಟಿ, ಪ್ರಾಕೃತಿಕ ವಿಕೋಪದಿಂದ ಪುಸ್ತಕಗಳನ್ನು ಕಳೆದುಕೊಂಡಿರುವುದರಿಂದ ಇವರಿಗೆ ಹೆಚ್ಚುವರಿಯಾಗಿ ಪುಸ್ತಕಗಳನ್ನು ವಿತರಿಸಲಾಗಿದೆಯೆಂದು ಶಿಕ್ಷಣ ಇಲಾಖಾ ಅಧಿಕಾರಿ ತಿಳಿಸಿ, ಎಂಎಸ್‍ಐಎಲ್ ಮೂಲಕ ನೋಟ್ ಪುಸ್ತಕಗಳನ್ನು ವಿತರಿಸಲಾಗಿದೆ. ಆಯಾ ಪರಿಹಾರ ಕೇಂದ್ರಗಳಲ್ಲಿ ಶಿಕ್ಷಕರನ್ನು ನಿಯುಕ್ತಿ ಗೊಳಿಸಿ ಶಿಕ್ಷಣ ಕೇಂದ್ರಗಳನ್ನು ತೆರೆದು ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಲಾಗಿದೆಯೆಂದು ತಿಳಿಸಿದರು.

ತೋಟಗಾರಿಕಾ ಕೃಷಿಗೆ ಹಾನಿ: ತೋಟಗಾರಿಕಾ ಇಲಾಖಾ ಅಧಿಕಾರಿ ಸಭೆಗೆ ಮಾಹಿತಿ ನೀಡುತ್ತಾ, ಅತಿವೃಷ್ಟಿಯಿಂದ 2100 ಹೆಕ್ಟೇರ್ ಪ್ರದೇಶದ ಕಾಳು ಮೆಣಸು, 740 ಹೆಕ್ಟೇರ್ ಪ್ರದೇಶದ ಅಡಿಕೆ, 155 ಹೆಕ್ಟೇರ್ ಪ್ರದೇಶದ ಬಾಳೆ ಕೃಷಿಗೆ ಹಾನಿಯಾಗಿರುವುದನ್ನು ಅಂದಾಜಿಸಲಾಗಿದ್ದು, ಇಂದಿನಿಂದ ಗ್ರಾಮ ಗ್ರಾಮಗಳಲ್ಲಿ ಸರ್ವೇ ಕಾರ್ಯ ಆರಂಭವಾಗಿರುವುದಾಗಿ ಮಾಹಿತಿ ನೀಡಿದರು.

ಕೃಷಿ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿ, ತಾಲೂಕಿನಲ್ಲಿ 6500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ನಡೆಸುವ ಗುರಿ ಹೊಂದಲಾಗಿತ್ತು. ಪ್ರಸ್ತುತ ಶೇ.70 ರಷ್ಟು ನಾಟಿ ಕಾರ್ಯವಾಗಿದೆ. ಅತಿವೃಷ್ಟಿಯಿಂದ ಮಕ್ಕಂದೂರು, ಗಾಳಿಬೀಡು ವ್ಯಾಪ್ತಿಯಲ್ಲಿನ ಕೃಷಿಕರು ಕೃಷಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇವರಿಗೆ 6.80 ಲಕ್ಷ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೆ ನೆರೆಯ ಮೈಸೂರು, ಶಿವಮೊಗ್ಗ, ಮಂಡ್ಯ ವಿಭಾಗದ 11 ಮಂದಿ ಕೃಷಿ ಅಧಿಕಾರಿಗಳ ನೆರವನ್ನ ಪಡೆದು ಗ್ರಾಪಂ ವ್ಯಾಪ್ತಿಯಲ್ಲಿ ಹಾನಿಯ ಬಗ್ಗೆ ಸರ್ವೇ ನಡೆಸಲಾಗುತ್ತಿದ್ದು, ವಾರದ ಅವಧಿಯಲ್ಲಿ ಮುಕ್ತಾಯವಾಗಲಿದೆಯೆಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News