'ದಲಿತ' ಪದ ಬಳಕೆ ನಿಷೇಧ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಮುಂದಾದ ಕೇಂದ್ರ ಸಚಿವ

Update: 2018-09-06 05:48 GMT

ಹೊಸದಿಲ್ಲಿ, ಸೆ. 6: ಮಾಧ್ಯಮಗಳಲ್ಲಿ ಮತ್ತು ದೈನಂದಿನ ಚರ್ಚೆಗಳಲ್ಲಿ ದಲಿತ ಪದ ಬಳಸದಂತೆ ನಿರ್ಬಂಧ ಹೇರಿರುವ ಮುಂಬೈ ಹೈಕೋರ್ಟ್ ಆದೇಶದ ವಿರುದ್ಧ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಪಕ್ಷದ ಮುಖಂಡ ಹಾಗೂ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಪ್ರಕಟಿಸಿದ್ದಾರೆ.

ಸರ್ಕಾರದ ಈ ಸಲಹೆ ಬಗ್ಗೆ ದಲಿತರಲ್ಲಿ ಭಾರಿ ಅಸಮಾಧಾನವಿದೆ. ಅಧಿಕೃತ ಪತ್ರಗಳಲ್ಲಿ ಪರಿಶಿಷ್ಟ ಜಾತಿ ಎಂದು ಬಳಸುವುದಕ್ಕೆ ಸಹಮತ ಇದೆ. ಆದರೆ "ದಲಿತ" ಐಡೆಂಟಿಟಿಗಾಗಿ ನಡೆಸುವ ಹೋರಾಟ ಕೇವಲ ತೋರಿಕೆಗಾಗಿ ಅಲ್ಲ ಎಂದು ದಲಿತ್ ಪ್ಯಾಂಥರ್ಸ್‌ನ ಮಾಜಿ ಸದಸ್ಯರೂ ಆಗಿರುವ ಅವರು ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.

ಕೇಂದ್ರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಕೂಡಾ ದಲಿತ ಪದ ಬಳಕೆಯ ಪರವಾಗಿ ನಿಂತಿದ್ದಾರೆ. ಇದು ಸಮುದಾಯದ ಗುರುತಿಸುವಿಕೆಯ ಸೂಚಕ. ಕಳೆದ ವರ್ಷಗಳಲ್ಲಿ ಪರಿಶಿಷ್ಟ ಜಾತಿ ಮತ್ತು ದಲಿತ ಎಂಬ ಪದಗಳನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ದಲಿತ ಎನ್ನುವುದು ಜಾತಿ ಕೇಂದ್ರಿತ ಪದವಲ್ಲದಿದ್ದರೂ ದಲಿತರು ಹಾಗೂ ಆದಿವಾಸಿಗಳು ಎಂದು ಬಳಸಲಾಗುತ್ತದೆ. ಆದ್ದರಿಂದ ಸಂವಿಧಾನವನ್ನು ಬಾಬಾಸಾಹೇಬ್ ಅಂಬೇಡ್ಕರ್ ರಚಿಸುವ ಹಂತದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಎಂಬ ಪದ ಸೇರಿಸಲಾಗಿದೆ. ಜನರಿಗೆ ಸುಲಭವಾಗಿ ಅರ್ಥವಾಗುವಂತೆ ಮಾಧ್ಯಮಗಳು ಈ ಪದ ಬಳಸುತ್ತಿವೆ ಎಂದು ಪಾಸ್ವಾನ್ ತಮ್ಮ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮುಂಬೈ ಹೈಕೋರ್ಟ್ ಆದೇಶಕ್ಕೆ ಅನುಗುಣವಾಗಿ ದಲಿತ ಪದ ಬಳಕೆ ಮಾಡದಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆ. 7ರಂದು ಮಾಧ್ಯಮಗಳಿಗೆ ಸಲಹೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News