8.2 ಶೇ. ಜಿಡಿಪಿ ಬಗ್ಗೆ ಸಂಶಯ ವ್ಯಕ್ತಪಡಿಸಿದ ಆರ್ ಬಿಐ ಸಮಿತಿ ಸದಸ್ಯ

Update: 2018-09-06 10:12 GMT

ಹೊಸದಿಲ್ಲಿ, ಸೆ.6: ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ಗರಿಷ್ಠ ಶೇ.8ರಷ್ಟು ದಾಖಲಾಗಲು ಉತ್ಪಾದನಾ ಕ್ಷೇತ್ರದ  ಉತ್ಪತ್ತಿಯನ್ನು ಅತಿಯಾಗಿ ಅಂದಾಜಿಸಿದ್ದೇ ಕಾರಣವಾಗಿರಬಹುದೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದರ ನಿಗದಿ ಸಮಿತಿಯ ಸದಸ್ಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ವಿತ್ತ ನೀತಿ ಸಮಿತಿಯ ಸದಸ್ಯ ರವೀಂದ್ರ ಧೊಲಾಕಿಯಾ ಅವರು ಆರ್. ನಾಗರಾಜ್ ಮತ್ತು ಮನೀಶ್ ಪಾಂಡ್ಯ ಜತೆ ಸೇರಿ ‘ಇಕನಾಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ’ಯ ಲೇಟೆಸ್ಟ್ ಸಂಚಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಮೇಲಿನಂತೆ ಹೇಳಲಾಗಿದೆ.

ಉತ್ಪಾದನಾ ಮೌಲ್ಯವನ್ನು ಅಂದಾಜಿಸುವ ಉದ್ದೇಶದಿಂದ ಹೊರತರಲಾದ ಕಾರ್ಪೊರೇಟ್ ಆರ್ಥಿಕ ದತ್ತಾಂಶಗಳನ್ನೊಳಗೊಂಡ ವಾರ್ಷಿಕ ಕೈಗಾರಿಕಾ ಸಮೀಕ್ಷಾ ವರದಿಯ ಸ್ಥಾನದಲ್ಲಿ ಹೊಸ ಜಿಡಿಪಿ ಸರಣಿ ಬಂದಿದೆ ಎಂದು ಲೇಖನದಲ್ಲಿ ಹೇಳಲಾಗಿದೆ. ಇದರಿಂದಾಗಿ  ಹಿಂದಿಗಿಂತ  ಹೆಚ್ಚಿನ ಅಭಿವೃದ್ಧಿ ಪ್ರಮಾಣ ದಾಖಲಾಗಿದೆ ಎಂದೂ ಅವರು ವಿವರಿಸಿದ್ದಾರೆ.

ಜೂನ್ ತಿಂಗಳಲ್ಲಿ ಅಂತ್ಯಗೊಂಡ ಮೂರು ತಿಂಗಳ ಅವಧಿಯಲ್ಲಿ ಉತ್ಪಾದನಾ ಕ್ಷೇತ್ರ ಶೇ 13.5ರಷ್ಟು ವಿಸ್ತರಣೆಗೊಂಡಿದೆ ಎಂದು ಅಂಕಿಅಂಶ ಸಚಿವಾಲಯ ಬಿಡುಗಡೆಗೊಳಿಸಿದ ಮಾಹಿತಿ ಹೇಳುತ್ತದೆ.

ಉತ್ತಮ ಆರ್ಥಿಕ ನಿರ್ವಹಣೆಗೆ ಸರಕಾರದ ಸುಧಾರಣವಾದಿ ಕ್ರಮಗಳು, ಖರ್ಚುವೆಚ್ಚಗಳ ಮಿತಿ ಕಾರಣ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಉತ್ಪಾದನಾ ರಂಗದ ಹೆಚ್ಚಿನ ಪ್ರಗತಿ ತೋರಿಸಲಾಗಿರುವುದು ಹೊಸ ಅಂದಾಜುಗಳ ಸತ್ಯಾಸತ್ಯತೆಗಳ ಬಗ್ಗೆ ಗಂಭೀರ ಸಂಶಯಗಳುಂಟು ಮಾಡುತ್ತಿವೆ ಎಂದು  ಧೊಲಾಕಿಯಾ ಹೇಳಿದ್ದಾರೆ.

ಅಭಿವೃದ್ಧಿ ದರ ಇಡೀ ವರ್ಷದಲ್ಲಿ ಶೇ 7.4ರಷ್ಟಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಈಗಾಗಲೇ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News