ಕೊಡಗು ಮಳೆಹಾನಿ: ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲು ಸಹಕಾರ ಸಂಘಗಳ ನಿರ್ಧಾರ

Update: 2018-09-06 12:17 GMT

ಮಡಿಕೇರಿ, ಸೆ.6 : ಇತ್ತೀಚೆಗೆ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಜಿಲ್ಲೆಯ ರೈತರು ಹಾಗೂ ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಕಡೆ ತೋಟ ಹಾಗೂ ಗದ್ದೆ ಸಂಪೂರ್ಣವಾಗಿ ನಾಶವಾಗಿದ್ದು, ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರ ರೈತರು ಹಾಗೂ ಕಾಫಿ ಬೆಳೆಗಾರರ ನೆರವಿಗೆ ಬರುವ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟಿರುವ ಸಹಕಾರ ಸಂಘಗಳು ಸಾಲಮನ್ನಾಕ್ಕಾಗಿ ಮನವಿ ಮಾಡಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲು ನಿರ್ಧರಿಸಿವೆ.

ನಗರದ ಸಹಕಾರ ಯೂನಿಯನ್ ಸಂಭಾಗಣದಲ್ಲಿ ಜಿಲ್ಲೆಯ ಪ್ಯಾಕ್ಸ್, ಎ.ಪಿ.ಸಿ.ಎಂ.ಎಸ್. ಮತ್ತು ಪಿಕಾರ್ಡ್ ಬ್ಯಾಂಕುಗಳ ಅಧ್ಯಕ್ಷರುಗಳಿಗೆ ನಡೆದ ಶಿಕ್ಷಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಮುಖರು ನಿಯೋಗ ತೆರಳುವ ಕುರಿತು ನಿರ್ಣಯ ಕೈಗೊಂಡರು.

ಸಹಕಾರ ಸಂಘಗಳ ಎಲ್ಲಾ ಅಧ್ಯಕ್ಷರು ಜಿಲ್ಲೆಯ ಶಾಸಕರುಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಸಾಲಮನ್ನಾ ಮಾಡುವಂತೆ ಮನವಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ ತಿಳಿಸಿದರು.

ಸಂಕಷ್ಟಕ್ಕೊಳಗಾಗದ ಗ್ರಾಮಗಳಿಗೆ ಪ್ರತಿನಿಧಿಗಳು ಖುದ್ದು ಭೇಟಿ ನೀಡಿ ಆಗಿರುವ ಕಷ್ಟ, ನಷ್ಟಗಳ ಬಗ್ಗೆ ಮಾಹಿತಿ ಪಡೆಯುವ ಮೂಲಕ ಅಧಿಕಾರಿಗಳೊಂದಿಗೆ ಸಮಾಲೋಚಿಸಬೇಕು. ಆ ನಂತರ ಸರಕಾರದ ಬಳಿ ಯಾವ ರೀತಿಯಲ್ಲಿ ಅನುದಾನ ಕೋರಬೇಕು ಎನ್ನುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ ಎಂದರು. 

ನಿರಖು ಠೇವಣಿ ಹೂಡಿರುವ ರೈತರಿಗೆ ಸಾಲಮನ್ನಾ ಆದೇಶಗಳು ಅನ್ವಯಿಸದಿರುವುದರಿಂದ ರೈತರ ಬದುಕು ಅತಂತ್ರವಾಗಿದೆ. ರೈತರು ಠೇವಣಿಯನ್ನು ಹಿಂಪಡೆದರೆ ಸಂಘದ ಏಳಿಗೆಗೆ ಧಕ್ಕೆಯುಂಟಾಗಲಿದೆ ಎಂದು ಅತಂಕ ವ್ಯಕ್ತಪಡಿಸಿದ ಮನುಮುತ್ತಪ್ಪ, ಸರಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ತೋರಿ ನ್ಯಾಯ ಒದಗಿಸಬೇಕಾಗಿದೆ ಎಂದರು.

ಹಾನಿಗೊಳಗಾದ ಪ್ರದೇಶಗಳ ರೈತರು ಹಾಗೂ ಬೆಳೆಗಾರರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಇಡೀ ಜಿಲ್ಲೆಯೇ ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ಉಳಿದ ರೈತರು ಹಾಗೂ ಬೆಳೆಗಾರರು ಸಾಲವನ್ನು ಪಾವತಿಸಲು ಮೂರು ವರ್ಷಗಳ ಕಾಲಾವಕಾಶವನ್ನು ನೀಡಬೇಕೆಂದು ಮನುಮುತ್ತಪ್ಪ ಒತ್ತಾಯಿಸಿದರು. ಸಹಕಾರ ಸಂಘಗಳ ಕ್ಷೇಮನಿಧಿಯಲ್ಲಿರುವ ಹಣವನ್ನು ಸಂತ್ರಸ್ತರಿಗೆ ನೀಡುವಂತಾಗಬೇಕು ಮತ್ತು ಒಂದು ವರ್ಷದ ಮಟ್ಟಿಗೆ ಯಾವುದೇ ಮಾನದಂಡವನ್ನು ವಿಧಿಸಬಾರದೆಂದು ಹೇಳಿದರು. 

ವಿವಿಧ ಸಹಕಾರ ಸಂಘಗಳ ಅಧ್ಯಕ್ಷರುಗಳು ಹಾಗೂ ಪ್ರತಿನಿಧಿಗಳು ಸಾಲಮನ್ನಾ ಮತ್ತು ಸರಕಾರದ ಸಹಕಾರ ಕೋರುವ ಕುರಿತು ಸಭೆಯಲ್ಲಿ ಸಲಹೆ, ಸೂಚನೆಗಳನ್ನು ನೀಡಿದರು. 

ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಪಿ.ಸಿ.ಅಚ್ಚಯ್ಯ, ನಿರ್ದೇಶಕರಾದ ರವಿ ಬಸಪ್ಪ, ನಿಂಗಪ್ಪ, ಪ್ರೇಮ ಸೋಮಯ್ಯ, ರಮೇಶ್ ಚಂಗಪ್ಪ, ಕೋಡಿರ ಪ್ರಸನ್ನ, ಮಂದಣ್ಣ, ನಂಜುಂಡ, ಬೋಪಣ್ಣ, ಕನ್ನಂಡ ಸಂಪತ್ ಹಾಗೂ ಸಿ.ಇ.ಓ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News