ಸ್ರಿಜನ್ ಹಗರಣ: ಸುಶೀಲ್ ಮೋದಿ ಸೋದರಿಯ ನಿವಾಸದ ಮೇಲೆ ಐಟಿ ದಾಳಿ

Update: 2018-09-06 13:44 GMT

ಪಾಟ್ನಾ, ಸೆ.6: ಬಹುಕೋಟಿ ಸ್ರಿಜನ್ ಹಗರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿಯ ಸೋದರ ಸಂಬಂಧಿಯ ನಿವಾಸವೂ ಸೇರಿದಂತೆ ಎಂಟು ಕಡೆಗಳಲ್ಲಿ ದಾಳಿ ನಡೆಸಿದೆ.

ಸರಕಾರಿ ನಿಧಿಯನ್ನು ಅಕ್ರಮವಾಗಿ ಬಳಸಿದ ಹಗರಣಕ್ಕೆ ಸಂಬಂಧಿಸಿ ರಾಜ್ಯ ರಾಜಧಾನಿಯ ಶ್ರೀಮಂತ ಬಡಾವಣೆಯಲ್ಲಿರುವ ಸುಶೀಲ್ ಮೋದಿಯ ಸೋದರಿ ರೇಖಾ ಮೋದಿಯ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಪಾಟ್ನಾ, ಪುರ್ನಿಯ ಮತ್ತು ಬಗಲ್ಪುರದಲ್ಲಿರುವ ಅನೇಕ ಉದ್ಯಮಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿರುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಸರಕಾರೇತರ ಸಂಸ್ಥೆಯಾಗಿರುವ ಸ್ರಿಜನ್ ಮಹಿಳಾ ವಿಕಾಸ ಸಹಯೋಗ ಸಮಿತಿ ಲಿ., ಜಿಲ್ಲಾ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿಗಳ ಸಹಯೋಗದೊಂದಿಗೆ ಬಗಲ್ಪುರ ಜಿಲ್ಲಾಡಳಿತದ ಖಾತೆಯಿಂದ ವಿವಿಧ ಯೋಜನೆಗಳ ಹೆಸರಲ್ಲಿ ಸರಕಾರಿ ನಿಧಿಯನ್ನು ಅಕ್ರಮವಾಗಿ ಬಳಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಸ್ರಿಜನ್ ಸಮಿತಿಯು 2004 ಮತ್ತು 2014ರ ಮಧ್ಯೆ ದೊಡ್ಡ ಮಟ್ಟದಲ್ಲಿ ಸರಕಾರಿ ನಿಧಿಗಳನ್ನು ತನ್ನ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಜಿಲ್ಲೆಯ ಸಬೂರ್ ಬ್ಲಾಕ್‌ನಲ್ಲಿ ಕಚೇರಿಯನ್ನು ಹೊಂದಿದ್ದ ಸಂಸ್ಥೆಯು ಬಗಲ್ಪುರದಲ್ಲಿ ಮಹಿಳೆಯರಿಗೆ ಔದ್ಯೋಗಿಕ ತರಬೇತಿಯನ್ನು ನೀಡುತ್ತಿತ್ತು. ಸಾಮಾಜಿಕ ಕಾರ್ಯಕರ್ತೆಯಾಗಿರುವ ರೇಖಾ ಮೋದಿ, 2007ರಿಂದ 2017ರ ಮಧ್ಯೆ ಸಂಸ್ಥೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿರುವ ಅಕ್ರಮ ಸರಕಾರಿ ನಿಧಿಯ ಫಲಾನುಭವಿಯಾಗಿದ್ದರು ಎಂದು ವಿಶೇಷ ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

ಈ ಹಗರಣದಲ್ಲಿ ಸಂಸ್ಥೆಯ ಹೆಸರಲ್ಲಿ ವರ್ಗಾಯಿಸಲ್ಪಟ್ಟ ಹಣದಲ್ಲಿ 14 ಕೋಟಿ ರೂ. ಬೆಲೆಯ ವಜ್ರಾಭರಣಗಳನ್ನು ಖರೀದಿಸಿ ಅವುಗಳನ್ನು ಅಧಿಕಾರಿಗಳು ಮತ್ತು ರಾಜಕಾರಣಿಗಳ ಪತ್ನಿಯರು ಮತ್ತು ಮಕ್ಕಳಿಗೆ ಹಂಚಲಾಗಿತ್ತು ಎಂಬ ಆರೋಪವನ್ನು ತನಿಖಾಧಿಕಾರಿಗಳು ಮಾಡಿದ್ದಾರೆ. ಈ ಹಗರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸುವಂತೆ ಬಿಹಾರ ಪೊಲೀಸರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News