ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2018-09-06 18:06 GMT

ಉಡುಪಿ, ಸೆ.6: 2018-19ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಯಡಿಯಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿ ಗಳಿಂದ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ರಾಜ್ಯ ಎನ್‌ಐಸಿ ಘಟಕದೊಂದಿಗೆ ಏಕೀಕೃತ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿದ್ದು, ಈ ತಂತ್ರಾಂಶ ಸಂಪೂರ್ಣ ಆನ್‌ಲೈನ್ ಆಗಿದೆ. ಈ ಯೋಜನೆ ಯಡಿ ಅರ್ಜಿ ಸಲ್ಲಿಸಲು /ನೋಂದಾಯಿಸಲು ಇಂಟರ್‌ನೆಟ್ ಸಂಪರ್ಕ ಅಗತ್ಯವಾಗಿದೆ. ಶಾಲಾಮಟ್ಟದಲ್ಲಿ ಈ ಯೋಜನೆಯಡಿ ನೋಂದಾವಣೆಗೆ ಆಯಾ ಶಾಲಾ ಮುಖ್ಯೋಪಾಧ್ಯಾಯರು ಕ್ರಮಕೈಗೊಳ್ಳಬೇಕಾಗಿದೆ.

ವಿದ್ಯಾರ್ಥಿಗಳ ಪರವಾಗಿ ಅರ್ಜಿ ಸಲ್ಲಿಸಲು ಶಾಲೆಗಳಿಗೆ ವಿದ್ಯಾರ್ಥಿ ಸಾಧನೆ ಟ್ರಾಕಿಂಗ್ ವ್ಯವಸ್ಥೆ(SATS) ತಂತ್ರಾಂಶದಲ್ಲಿ ಲಾಗಿನ್ ನೀಡಲಾಗಿದೆ. ಖುದ್ದಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ವಿದ್ಯಾರ್ಥಿಗಳು/ ಪೋಷಕರು ಸಾಮಾನ್ಯ ಸೇವಾ ಕೇಂದ್ರಗಳು ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಯನ್ನು ಸರಕಾರದ ಅಧಿಕೃತ -ssp.karnataka.gov.in - ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ವಿವರಗಳನ್ನು ಆಯಾ ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಲಾಗಿದೆ. ಆಯಾ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಕಛೇರಿ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಕಚೇರಿಗಳಲ್ಲಿ ಮಾಹಿತಿ ಪಡೆಯುವಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News